ADVERTISEMENT

ಮೂಡಲಗಿ | ಮದ್ಯ ಅಕ್ರಮ ಮಾರಾಟಗಾರರ ಕ್ರಮ ಕೈಗೊಳ್ಳಿ: ಬಾಲಚಂದ್ರ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 6:37 IST
Last Updated 20 ಜನವರಿ 2026, 6:37 IST
ಮೂಡಲಗಿ ತಾಲ್ಲೂಕಿನ ಯಾದವಾಡದ ಹರಳಯ್ಯ ಸಭಾಭವನದಲ್ಲಿ ಸೋಮವಾರ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು. ಮೂಡಲಗಿ ತಹಶೀಲ್ದಾರ್  ಶ್ರೀಶೈಲ ಗುಡುಮೆ, ಗೋಕಾಕ ತಹಶೀಲ್ದಾರ ಮೋಹನ್ ಭಸ್ಮೆ,  ಇಓ ಎಫ್.ಜಿ.ಚಿನ್ನನವರ, ಪರಶುರಾಮ ಗಸ್ತೆ ಮತ್ತಿತರರು ಪಾಲ್ಗೊಂಡಿದ್ದರು
ಮೂಡಲಗಿ ತಾಲ್ಲೂಕಿನ ಯಾದವಾಡದ ಹರಳಯ್ಯ ಸಭಾಭವನದಲ್ಲಿ ಸೋಮವಾರ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಶಾಸಕ ಬಾಲಚಂದ್ರ ಜಾರಕಿಹೊಳಿ ಮಾತನಾಡಿದರು. ಮೂಡಲಗಿ ತಹಶೀಲ್ದಾರ್  ಶ್ರೀಶೈಲ ಗುಡುಮೆ, ಗೋಕಾಕ ತಹಶೀಲ್ದಾರ ಮೋಹನ್ ಭಸ್ಮೆ,  ಇಓ ಎಫ್.ಜಿ.ಚಿನ್ನನವರ, ಪರಶುರಾಮ ಗಸ್ತೆ ಮತ್ತಿತರರು ಪಾಲ್ಗೊಂಡಿದ್ದರು   

ಮೂಡಲಗಿ: ಅರಭಾವಿ ಮತಕ್ಷೇತ್ರದಲ್ಲಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ಕೂಡಲೇ ನಿಷೇಧಿಸಲು ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಕೊಳ್ಳುವಂತೆ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಯಾದವಾಡ ಗ್ರಾಮ ಹರಳಯ್ಯ ಸಭಾಭವನದಲ್ಲಿ ಸೋಮವಾರ ನಡೆಸಿದ ಮೂಡಲಗಿ ಮತ್ತು ಗೋಕಾಕ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾರ್ವಜನಿಕರು ಪ್ರತಿಭಟಿಸುವ ಮುನ್ನವೇ ಅಂಥ ವ್ಯಕ್ತಿಗಳ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ಮತಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಅಕ್ರಮ ಸಾರಾಯಿ ದಂಧೆ ನಡೆಯುತ್ತಿದೆ. ಕಾನೂನು ವಿರೋಧಿ ಚಟುವಟಿಕೆಗಳನ್ನು ಮಾಡುತ್ತಿರುವ ಅಂತಹ ಮಾರಾಟಗಾರರ ವಿರುದ್ಧ ನಿರ್ದಾಕ್ಷಿಣ್ಯವಾದ ಕ್ರಮಗಳನ್ನು ಕೈಗೊಳ್ಳುಬೇಕು. ಸಾರಾಯಿ ದಂಧೆಯಿಂದಾಗಿ ಹಲವು ಕುಟುಂಬಗಳು ಬೀದಿಗೆ ಬರುತ್ತಿವೆ. ಈ ಬಗ್ಗೆ ಮಹಿಳೆಯರು ತಮ್ಮ ಅಳಲು ತೋಡಿಕೊಂಡಿದ್ದಾರೆ. ಕ್ಷೇತ್ರದಲ್ಲಿ ಇಂತಹ ಕಾನೂನು ವಿರೋಧಿ ಚಟುವಟಿಕೆಗಳು ನಡೆಯಬಾರದು. ಯಾರ ಪ್ರಭಾವಕ್ಕೂ ಮಣೆ ಹಾಕದೇ ಅಗತ್ಯ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.

ADVERTISEMENT

ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ಕ್ರಮ ತೆಗೆದುಕೊಳ್ಳಬೇಕು. ಗ್ರಾಮ ಪಂಚಾಯಿತಿ ಮಟ್ಟದ ಅಧಿಕಾರಿಗಳು ನೀರಿನ ಸಮಸ್ಯೆಗಳಿರುವ ಸ್ಥಳಗಳನ್ನು ಗುರುತಿಸಿ ತಹಶೀಲ್ದಾರ್‌ ಅವರಿಗೆ ವರದಿ ಮಾಡಬೇಕು ಎಂದು ಹೇಳಿದರು.

ಅರ್ಹ ಬಡ ಕುಟುಂಬಗಳ ಬದಲಾಗಿ ಆಹಾರ ಪಡಿತರ ಚೀಟಿಗಳು ಸಿರಿವಂತರ ಪಾಲಾಗುತ್ತಿವೆ. ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಬಡ ಕುಟುಂಬಗಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಬೇಕು. ಹೊಸ ಪಡಿತರ ಚೀಟಿಗಳಲ್ಲಿ ಅರ್ಹ ಬಡ ಕುಟುಂಬಗಳಿಗೆ ಮೋಸವಾದರೆ ಅಂಥ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ನಿಗದಿತ ಸಮಯಕ್ಕೆ ಹಾಜರಾಗುತ್ತಿಲ್ಲ ಎನ್ನುವ ಸಾರ್ವಜನಿಕರಿಂದ ದೂರುಗಳು ಬರುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ಗೈರುಹಾಜರಾಗುವ ವೈದ್ಯರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಸಮರ್ಪಕವಾಗಿ ವಿದ್ಯುತ್‌ ಪೂರೈಕೆ ಬಗ್ಗೆ ಹೆಸ್ಕಾಂ ಅಧಿಕಾರಿಗಳು ಗಮನ ನೀಡಬೇಕು ಎಂದರು.

ಮೂಡಲಗಿ ತಹಶೀಲ್ದಾರ್‌ ಶ್ರೀಶೈಲ ಗುಡುಮೆ, ಗೋಕಾಕ ತಹಶೀಲ್ದಾರ್‌ ಮೋಹನ್ ಭಸ್ಮೆ, ಮೂಡಲಗಿ ತಾಲ್ಲೂಕು ಪಂಚಾಯಿತಿ ಇಓ ಫಕೀರಪ್ಪ ಚಿನ್ನನವರ, ಗೋಕಾಕ ತಾಲ್ಲೂಕು ಪಂಚಾಯಿತಿ ಇಓ ಪರಶುರಾಮ ಗಸ್ತೆ, ಮೂಡಲಗಿ ಕೆಡಿಸಿ ನಾಮ ನಿರ್ದೇಶಿತ ಸದಸ್ಯ ಪರ್ವತಗೌಡ ಪಾಟೀಲ, ಕಲ್ಲಪ್ಪ ಲಕ್ಕಾರ, ಮೂಡಲಗಿ- ಗೋಕಾಕ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು, ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಆಡಳಿತ ಅಧಿಕಾರಿಗಳು, ಅಭಿಯಂತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.