ರಾಯಬಾಗ: ತಾಲ್ಲೂಕಿನ ನಸಲಾಪುರ ಗ್ರಾಮದಲ್ಲಿ ಪಾವನ ವರ್ಷಾಯೋಗದ ಅಂಗವಾಗಿ ಬಾಲಾಚಾರ್ಯ ಸಿದ್ಧಸೇನ ಮುನಿಮಹಾರಾಜರ ನೇತೃತ್ವದಲ್ಲಿ ರಾಜ್ಯಮಟ್ಟದ ಮಹಿಳಾ ಸಮಾವೇಶ ನಡೆಯಿತು.
ಸಮಾವೇಶಕ್ಕೆ ಲಲಿತಾ ಎನ್. ಮಗದುಮ್ ಚಾಲನೆ ನೀಡಿ ಮಾತನಾಡಿ, ‘ಇತ್ತೀಚೆಗೆ ಜೈನ ಸಮಾಜದಲ್ಲಿ ಬ್ರೂಣ ಹತ್ಯೆಯ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ವಿಷಯ. ಧರ್ಮ ಉಳಿದರೆ ಸಮಾಜ ಉಳಿಯುತ್ತದೆ. ಹಾಗಾಗಿ ಯಾರೂ ಬ್ರೂಣ ಹತ್ಯೆಗೆ ಕೈಹಾಕಬಾರದು’ ಎಂದು ಮಹಿಳೆಯರಿಗೆ ಮನವಿ ಮಾಡಿದರು.
ಅಖಿಲ ಕರ್ನಾಟಕ ಜೈನ ಮಹಿಳಾ ಸಂಘದ ಉಪಾಧ್ಯಕ್ಷೆ ಚಂದ್ರಕಲಾ ಸೊಲ್ಲಾಪುರೆ ಮಾತನಾಡಿ, ‘ಹಿಂದಿನ ದಿನಗಳಲ್ಲಿ ಮಕ್ಕಳು ಹಿರಿಯರಿಗೆ ಗೌರವ ನೀಡುತ್ತಿದ್ದರು. ಇಂದು ಆ ಸಂಸ್ಕೃತಿ ನಿಧಾನವಾಗಿ ಕಳೆದುಕೊಳ್ಳುತ್ತಿದೆ. ಪೋಷಕರು ಮಕ್ಕಳಿಗೆ ಸಂಸ್ಕಾರದ ಪಾಠ ಕಲಿಸಬೇಕು’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೀನಶ್ರೀ ಅಭಿನಂದನ ಪಾಟೀಲ, ‘ಜೈನ ಧರ್ಮವು ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಬಂದರೂ ಅದರ ಮೂಲ ಮೌಲ್ಯಗಳು ಅಚಲವಾಗಿವೆ. ಮಕ್ಕಳಿಗೆ ಶಿಕ್ಷಣದ ಜೊತೆಗೆ ಧಾರ್ಮಿಕ ಜಾಗೃತಿ ನೀಡುವುದು ಪೋಷಕರ ಕರ್ತವ್ಯ’ ಎಂದರು.
ಪ್ರೇರಣಾ ಧೂಳಗೌಡ ಪಾಟೀಲ ಸೇರಿದಂತೆ ಅನೇಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಸಿದ್ಧಸೇನ ಮುನಿಮಹಾರಾಜರು ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಂತ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸನ್ಮಾನಿಸಲಾಯಿತು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ವಿಲಾಸಮತಿ ಪಾಟೀಲ, ಸುರೇಖಾ ಗೌರಗೌಂಡ, ವೈಶಾಲಿ ಬನವಣೆ, ನೀತಾ ಪಾಟೀಲ, ಶಕುಂತಲಾ ಕಾಂತೆ, ಶಕುಂತಲಾ ಹಂಜೆ, ಪದ್ಮಾವತಿ ಖೆಮಲಾಪುರೆ ಸೇರಿದಂತೆ ಬಾಗಲಕೋಟೆ, ಬೆಳಗಾವಿ, ಧಾರವಾಡ, ವಿಜಯಪುರ ಜಿಲ್ಲೆಗಳ ನೂರಾರು ಮಹಿಳೆಯರು ಹಾಗೂ ಚಾತುರ್ಮಾಸ ಸಮಿತಿಯ ಸದಸ್ಯರು ಪಾಲ್ಗೊಂಡಿದ್ದರು. ವಿದ್ಯಾ ಪಾಟೀಲ ಸ್ವಾಗತಿಸಿದರು. ವೀರಶ್ರೀ ಸಮಾಜೆ ನಿರೂಪಿಸಿದರು. ಸಾಧನಾ ಪಾಟೀಲ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.