ADVERTISEMENT

ಬೆಳಗಾವಿ ವಿಧಾನಪರಿಷತ್‌ ಕ್ಷೇತ್ರ: ಬಿಜೆಪಿ, ಕಾಂಗ್ರೆಸ್‌ಗೆ ‘ಒಳೇಟಿನ’ ಭೀತಿ

ಜಾರಕಿಹೊಳಿ ಸಹೋದರರ ಸವಾಲ್‌ನಿಂದ ಗಮನಸೆಳೆದ ಬೆಳಗಾವಿ ಕ್ಷೇತ್ರ

ಎಂ.ಮಹೇಶ
Published 1 ಡಿಸೆಂಬರ್ 2021, 19:30 IST
Last Updated 1 ಡಿಸೆಂಬರ್ 2021, 19:30 IST
ಮಹಾಂತೇಶ ಕವಟಗಿಮಠ, ಚನ್ನರಾಜ ಹಟ್ಟಿಹೊಳಿ ಮತ್ತು ಲಖನ್‌ ಜಾರಕಿಹೊಳಿ
ಮಹಾಂತೇಶ ಕವಟಗಿಮಠ, ಚನ್ನರಾಜ ಹಟ್ಟಿಹೊಳಿ ಮತ್ತು ಲಖನ್‌ ಜಾರಕಿಹೊಳಿ   

ಬೆಳಗಾವಿ: ವಿಧಾನಪರಿಷತ್‌ ದ್ವಿಸದಸ್ಯ ಸ್ಥಾನಗಳಿಗೆ ಡಿ.10ರಂದು ನಡೆಯಲಿರುವ ಚುನಾವಣೆಯು, ಇಲ್ಲಿನ ಪ್ರಭಾವಿಗಳಾದ ಜಾರಕಿಹೊಳಿ ಸಹೋದರರ ನಡುವಿನ ಸವಾಲ್‌ನಿಂದಾಗಿ ಇಡೀ ರಾಜ್ಯದ ಗಮನಸೆಳೆದಿದೆ ಮತ್ತು ತೀವ್ರ ಕುತೂಹಲವನ್ನೂ ಹುಟ್ಟು ಹಾಕಿದೆ.

ಬಿಜೆಪಿಯ ಮಹಾಂತೇಶ ಕವಟಗಿಮಠ ಸತತ 3ನೇ ಬಾರಿಗೆ ಆಯ್ಕೆ ಬಯಸಿದ್ದಾರೆ. ಕಾಂಗ್ರೆಸ್‌ ಕುಟುಂಬ ರಾಜಕಾರಣಕ್ಕೆ ಮಣೆ ಹಾಕಿದ್ದು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರ ತಮ್ಮ ಚನ್ನರಾಜ ಹಟ್ಟಿಹೊಳಿ ಅವರಿಗೆ ಟಿಕೆಟ್ ಕೊಟ್ಟಿದೆ. ಆಮ್ ಆದ್ಮಿ ಪಕ್ಷದಿಂದ ಶೇಖರ ಹೆಗಡೆ ಸ್ಪರ್ಧಿಸಿದ್ದಾರೆ. ಗೋಕಾಕದ ಉದ್ಯಮಿ ಜಾರಕಿಹೊಳಿ ಮನೆತನದ ಲಖನ್ ಜಾರಕಿಹೊಳಿ, ಜೊತೆಗೆ ಶಂಕರ ಕುಡಸೋಮಣ್ಣವರ ಮತ್ತು ಕಲ್ಮೇಶ ಗಾಣಗಿ ಪಕ್ಷೇತರರಾಗಿ ಕಣದಲ್ಲಿದ್ದಾರೆ.

ಸಮ ಪಾಲಿಗೆ ಕಲ್ಲು!:

ADVERTISEMENT

ಆರು ಅಭ್ಯರ್ಥಿಗಳಿದ್ದಾರಾದರೂ ಬಿಜೆಪಿ–ಕಾಂಗ್ರೆಸ್‌ ಮತ್ತು ಪಕ್ಷೇತರ ಲಖನ್ ನಡುವೆ ತ್ರಿಕೋನ ಹಣಾಹಣಿ ಕಂಡುಬಂದಿದೆ. ಒಬ್ಬೊಬ್ಬರೆ ಕಣಕ್ಕಿಳಿಯುವುದರಿಂದ ‘ಸಮ ಪಾಲು’ ಖಚಿತ ಎಂಬ ಯೋಚನೆಯಲ್ಲಿದ್ದ ಕಾಂಗ್ರೆಸ್ ಹಾಗೂ ಬಿಜೆಪಿಯವರ ಕನಸಿಗೆ ಲಖನ್‌ ‘ಕೊಳ್ಳಿ’ ಇಟ್ಟಿದ್ದಾರೆ. ಶಕ್ತಿ ಪ್ರದರ್ಶನ ಮಾಡುತ್ತಿದ್ದಾರೆ. ಪರಿಣಾಮ, ಕಣ ಹಿಂದೆಂದಿಗಿಂತಲೂ ರಂಗೇರಿದೆ. ಹಣ, ಚಿನ್ನದುಂಗುರ, ಅಡುಗೆ ಒಲೆ ಮೊದಲಾದವುಗಳ ಆಮಿಷ–ಹಂಚಿಕೆ ಮಾತುಗಳು ಕೇಳಿಬರುತ್ತಿವೆ.

ತಮ್ಮನನ್ನು ಗೆಲ್ಲಿಸಿಕೊಳ್ಳುವ ಜೊತೆಗೆ ಕಾಂಗ್ರೆಸ್‌ ಸೋಲಿಸಲೇಬೇಕೆಂಬ ‘ಶಪಥ’ ಮಾಡಿರುವ ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಅವರಿಗೆ ಸಹೋದರ ಕೆಎಂಎಫ್‌ ಅಧ್ಯಕ್ಷರೂ ಆಗಿರುವ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಸಾಥ್‌ ಕೊಟ್ಟಿದ್ದಾರೆ. ಪಕ್ಷದ ವೇದಿಕೆಗಳಲ್ಲಿ ಕಾಣಿಸಿಕೊಳ್ಳದೆ ತಮ್ಮದೇ ‘ರೀತಿಯಲ್ಲಿ’ ಪ್ರಚಾರ ನಡೆಸುತ್ತಿದ್ದಾರೆ. ಸಹಕಾರ ಕ್ಷೇತ್ರದವರ ಮೂಲಕವೂ ಮತದಾರರ ಮನವೊಲಿಕೆಗೆ ತಂತ್ರ ರೂಪಿಸಿದ್ದಾರೆ. ಅವರಿಗೆ, ಹೋದ ಚುನಾವಣೆಯಲ್ಲಿ ಪಕ್ಷೇತರರಾಗಿದ್ದ ಗೆದ್ದಿದ್ದ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ವಿವೇಕರಾವ್ ಪಾಟೀಲ ಕೈಜೋಡಿಸಿದ್ದರಿಂದ ಅವರ ಬಲ ವೃದ್ಧಿಸಿದಂತಾಗಿದೆ.

ಗುಟ್ಟಾಗಿ ಉಳಿದಿಲ್ಲ:

‘ಲಖನ್‌ ಅನ್ನು ಪಕ್ಷದ 2ನೇ ಅಭ್ಯರ್ಥಿಯನ್ನಾಗಿ ಪರಿಗಣಿಸಿ, ಬೆಂಬಲಿಸಬೇಕು’ ಎಂದು ರಮೇಶ ವರಿಷ್ಠರ ಮನೆಯ ಬಾಗಿಲು ಬಡಿದಿದ್ದಾರೆ. ಇನ್ನೂ ‘ಹಸಿರು ನಿಶಾನೆ’ ಸಿಕ್ಕಿಲ್ಲವಾದರೂ ಒಳಗೊಳಗೆ ಬೆಂಬಲ ಕೊಡುತ್ತಿರುವುದು ಗುಟ್ಟಾಗಿಯೇನೂ ಉಳಿದಿಲ್ಲ. ಅವರಿಗೆ ತಿರುಗೇಟು ಕೊಡಲು ಲಕ್ಷ್ಮಿ ಕೂಡ ತಂತ್ರ ಹೆಣೆದಿದ್ದಾರೆ.

ಈ ಚುನಾವಣೆಯು ರಮೇಶ ಜಾರಕಿಹೊಳಿ–ಲಕ್ಷ್ಮಿ ಹೆಬ್ಬಾಳಕರ ನಡುವಿನ ಹಣಾಹಣಿ ಎಂದೂ ಬಿಂಬಿತವಾಗುತ್ತಿದೆ. ಇನ್ನೊಂದೆಡೆ, ತಮ್ಮ ಭವಿಷ್ಯ ಭದ್ರಪಡಿಸಿಕೊಳ್ಳಲು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅಭ್ಯರ್ಥಿ ಚನ್ನರಾಜ ಪರ ಸಕ್ರಿಯವಾಗಿ ಪ್ರಚಾರ ನಡೆಸುತ್ತಿದ್ದಾರೆ. ಸ್ವತಃ ಏಜೆಂಟ್ ಆಗಲೂ ಮುಂದಾಗಿದ್ದಾರೆ!

13 ಶಾಸಕರು ಮತ್ತು ಮೂವರು ಸಂಸದರ ಬಲ ಬಿಜೆಪಿಗಿದೆ. ಕಾಂಗ್ರೆಸ್‌ ಶಾಸಕರಿರುವುದು ಐವರು ಮಾತ್ರ. ಗ್ರಾ.ಪಂ. ಚುನಾವಣೆಯಲ್ಲಿ ‘ನಮ್ಮ ಬೆಂಬಲಿತರು’ ಹೆಚ್ಚು ಗೆದ್ದಿದ್ದಾರೆ ಎಂದು ಬಿಜೆಪಿಯವರು ಹೇಳಿಕೊಂಡಿದ್ದರು. ಈ ಸಂಖ್ಯೆಯು ಆ ಪಕ್ಷದ ಬಲ ಹೆಚ್ಚಿಸಿದೆ; ಲಖನ್ ಸ್ಪರ್ಧೆಯಿಂದಾಗಿ ಮತ ವಿಭಜನೆ ಭೀತಿಯೂ ಅವರಿಗಿದೆ.

‘ಪ್ರಥಮ ಪ್ರಾಶಸ್ತ್ಯದಲ್ಲೆ ಗೆಲ್ಲಬಹುದಾದಷ್ಟು ಮತಗಳು ನಮ್ಮೊಂದಿಗಿವೆ’ ಎನ್ನುವ ವಿಶ್ವಾಸದಲ್ಲಿರುವ ಕಾಂಗ್ರೆಸ್‌ ನಾಯಕರು, ಅವರನ್ನು ಹಿಡಿದಿಟ್ಟುಕೊಳ್ಳಲು ಹರಸಾಹಸಪಡುತ್ತಿದ್ದಾರೆ.

ಹೋದ ಚುನಾವಣೆಯಲ್ಲಿ, ಪಕ್ಷೇತರ ಅಭ್ಯರ್ಥಿ ಪ್ರಥಮ ಪ್ರಾಶಸ್ತ್ಯದ ಮತಗಳಿಂದಲೇ ಗೆದ್ದಿದ್ದ ನಿದರ್ಶನವೂ ಕ್ಷೇತ್ರದ್ದಾಗಿದೆ. ಈ ಬಾರಿಯ ಚಿತ್ರಣವು ಬಿಜೆಪಿ–ಕಾಂಗ್ರೆಸ್ ಜಗಳದಲ್ಲಿ 3ನೇಯವರಿಗೆ ಲಾಭವಾಗುವ ಸಾಧ್ಯತೆಯ ಚರ್ಚೆಗೂ ಗ್ರಾಸವಾಗಿದೆ.

ಮತದಾರರು ಎಲ್ಲ ಪ್ರಚಾರ ಸಭೆಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಮತದಾನದ ಮುನ್ನಾ ದಿನ, ಜಾರಕಿಹೊಳಿ ಸಹೋದರರು ಬೆಂಬಲಿಗರಿಗೆ ನೀಡುವ ‘ಸಂದೇಶ’ದ ಮೇಲೆ ಚಿತ್ರಣ ನಿರ್ಧಾರವಾಗಲಿದೆ. ಯಾರಿಗೆ ಬೇಕಾದರೂ ‘ಒಳೇಟು’ ಬೀಳಬಹುದು ಎಂಬ ಮಾತುಗಳಿವೆ.

ಶ್ರೀರಕ್ಷೆಯಾಗಿದೆ

ಎರಡು ಅವಧಿಯಲ್ಲಿ ನಾನು ಮಾಡಿದ ಕೆಲಸಗಳು ಮತ್ತು ಸರ್ಕಾರದ ಸಾಧನೆಗಳು ಶ್ರೀರಕ್ಷೆಯಾಗಿವೆ. ಪಕ್ಷದ ಎಲ್ಲ ನಾಯಕರ ಸಹಕಾರದಿಂದ ಹ್ಯಾಟ್ರಿಕ್ ಸಾಧನೆ ಸಾಧ್ಯವಾಗಲಿದೆ ಎನ್ನುವ ವಿಶ್ವಾಸವಿದೆ.

–ಮಹಾಂತೇಶ ಕವಟಗಿಮಠ, ಬಿಜೆಪಿ ಅಭ್ಯರ್ಥಿ

ಅವಕಾಶದ ನಂಬಿಕೆ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಸೇರಿದಂತೆ ಎಲ್ಲ ನಾಯಕರ ಬೆಂಬಲ ನನಗಿದೆ. ಹೊಸ ಮುಖ ಹಾಗೂ ಯುವಕನಾದ ನನಗೆ ಮತದಾರರು ಅವಕಾಶ ಕೊಡುವ ನಂಬಿಕೆ ಇದೆ.

–ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಅಭ್ಯರ್ಥಿ

ಬೆಂಬಲಿಸುವ ಭರವಸೆ

ನಾನು ಯಾವುದೇ ಪಕ್ಷದ ಬಂಡಾಯ ಅಭ್ಯರ್ಥಿಯಲ್ಲ. ಸ್ವಂತ ಬಲದ ಮೇಲೆ ಸ್ಪರ್ಧಿಸಿದ್ದೇನೆ. ಸ್ಥಳೀಯ ಸಂಸ್ಥೆಗಳ ಅಭಿವೃದ್ಧಿಗಾಗಿ ನನ್ನನ್ನು ಬೆಂಬಲಿಸುತ್ತಾರೆ ಎನ್ನುವ ಭರವಸೆ ಇದೆ.

–ಲಖನ್‌ ಜಾರಕಿಹೊಳಿ, ಪಕ್ಷೇತರ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.