ADVERTISEMENT

ಬೆಳಗಾವಿ: ನಿರಂತರ ಉರಿಯುತ್ತಿದೆ ಇಂದಿರಾ ಕ್ಯಾಂಟೀನ್‌ ಒಲೆ

ಲಾಕ್‌ಡೌನ್‌ ಅವಧಿಯಲ್ಲಿ ಬಡವರಿಗೆ ಆಸರೆಯಾದ ಕ್ಯಾಂಟೀನ್‌

ಶ್ರೀಕಾಂತ ಕಲ್ಲಮ್ಮನವರ
Published 9 ಮೇ 2020, 20:30 IST
Last Updated 9 ಮೇ 2020, 20:30 IST
ಬೆಳಗಾವಿಯ ನೆಹರು ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌
ಬೆಳಗಾವಿಯ ನೆಹರು ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌   

ಬೆಳಗಾವಿ: ಬಡವರು, ವಲಸೆ ಕಾರ್ಮಿಕರು, ನಿರಾಶ್ರಿತರು ಹಾಗೂ ನಿರ್ಗತಿಕರಿಗೆ ಲಾಕ್‌ಡೌನ್‌ ಅವಧಿಯಲ್ಲಿ ನಿರಂತರವಾಗಿ ಊಟ, ಉಪಾಹಾರ ನೀಡಿದ ನಗರದ ಇಂದಿರಾ ಕ್ಯಾಂಟೀನ್‌ಗಳು ಇವರ ಪಾಲಿಗೆ ‘ಅಕ್ಷಯ ಪಾತ್ರೆ’ಯಂತಾಗಿದ್ದವು.

ನಗರದಲ್ಲಿ ಆರು ಇಂದಿರಾ ಕ್ಯಾಂಟೀನ್‌ಗಳ ಪೈಕಿ ಮೂರು ಕ್ಯಾಂಟೀನ್‌ಗಳನ್ನು ಲಾಕ್‌ಡೌನ್‌ ಅವಧಿಯಲ್ಲಿ ತೆರೆಯಲಾಗಿತ್ತು. ಕ್ಯಾಂಟೀನ್‌ಗೆ ಬಂದು ಹಣ ಕೊಟ್ಟು ತಿನ್ನುವವರಿಗೂ ಊಟ ಬಡಿಸಲಾಗುತ್ತಿತ್ತು. ಇದರ ಜೊತೆಗೆ ವಿವಿಧ ವಸತಿ ನಿಲಯಗಳಲ್ಲಿ, ಮದುವೆ ಹಾಲ್‌ಗಳಲ್ಲಿ ಕ್ವಾರಂಟೈನ್‌ಗಳಲ್ಲಿ ಇದ್ದವರಿಗೆ ಹಾಗೂ ಬಡವರಿಗೆ, ನಿರ್ಗತಿಕರಿಗೂ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ವತಿಯಿಂದ ಪ್ರತಿದಿನ ಊಟ ಪೂರೈಸಲಾಗುತ್ತಿತ್ತು.

ಸರ್ಕಾರ ಸಾಮಾನ್ಯವಾಗಿ ಇಂದಿರಾ ಕ್ಯಾಂಟೀನ್‌ಗಳಿಗೆ ನೀಡಿದ್ದ ಆಹಾರ ಧಾನ್ಯಗಳನ್ನು ಹಾಗೂ ಅನುದಾನವನ್ನು ಬಳಸಿಯೇ ಊಟ, ಉಪಹಾರ ನೀಡಲಾಗಿತ್ತು.

ADVERTISEMENT

ಪ್ರತಿದಿನ 500ದಿಂದ ಸಾವಿರ ಜನರಿಗೆ

ಮಾರಕ ರೋಗ ಕೋವಿಡ್‌–19 ಹರಡದಂತೆ ಮುನ್ನೆಚ್ಚರಿಕೆ ಕೈಗೊಳ್ಳಲು ಕೇಂದ್ರ ಸರ್ಕಾರವು ಮಾರ್ಚ್‌ 25ರಿಂದ ದೇಶದಾದ್ಯಂತ ಲಾಕ್‌ಡೌನ್‌ ಘೋಷಿಸಿತ್ತು. ಹಠಾತ್ತಾಗಿ ಲಾಕ್‌ಡೌನ್‌ ಘೋಷಣೆಯಾಗಿದ್ದರಿಂದ ವಲಸೆ ಕಾರ್ಮಿಕರು, ನಿರಾಶ್ರಿತರು, ನಿರ್ಗತಿಕರು ಬೇರೆ ಯಾವುದೇ ದಾರಿ ಕಾಣದೇ ಜಿಲ್ಲಾಡಳಿತದ ಮೊರೆ ಹೋದರು.

ತಕ್ಷಣ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಸರ್ಕಾರಿ ಹಾಸ್ಟೆಲ್‌ಗಳು, ವಸತಿ ಗೃಹಗಳು, ಸಮುದಾಯ ಭವನ ಹಾಗೂ ಮದುವೆ ಹಾಲ್‌ಗಳಲ್ಲಿ ಇವರಿಗೆ ಆಶ್ರಯ ನೀಡಿದರು. ಊಟದ ವ್ಯವಸ್ಥೆಯನ್ನು ಇಂದಿರಾ ಕ್ಯಾಂಟೀನ್‌ ಸಿಬ್ಬಂದಿಗಳಿಗೆ ವಹಿಸಿದ್ದರು.

ನೆಹರು ನಗರದಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ಮಾಸ್ಟರ್‌ ಕಿಚನ್‌ನಲ್ಲಿ ಅಡುಗೆ ತಯಾರಿಸಲಾಗುತ್ತಿತ್ತು. ಪ್ರತಿದಿನ ಬೆಳಿಗ್ಗೆ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಹೊತ್ತು ಊಟ ತಯಾರಿಸಿ, ಕಾರ್ಮಿಕರು ಇರುವ ಸ್ಥಳಗಳಿಗೆ ತಂದು ಪೂರೈಸುತ್ತಿದ್ದರು.

ಸಂಘ– ಸಂಸ್ಥೆಗಳ ನೆರವು

ಕಾರ್ಮಿಕರಿಗೆ ಊಟ ತಲುಪಿಸಲು ಕೆಲವು ಸಂಘ– ಸಂಸ್ಥೆಗಳು ಸಹಾಯ ನೀಡಿದ್ದವು. ಇಂದಿರಾ ಕ್ಯಾಂಟೀನ್‌ಗಳಲ್ಲಿ ತಯಾರಿಸಿದ ಆಹಾರವನ್ನು ತಮ್ಮ ತಮ್ಮ ವಾಹನಗಳ ಮೂಲಕ ತಲುಪಿಸಿ ಬರುತ್ತಿದ್ದರು.

ರೋಗಿ ಸಂಬಂಧಿಕರಿಗೆ ಸಹಾಯ

ಜಿಲ್ಲಾಸ್ಪತ್ರೆಯ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್‌ ಕೂಡ ಲಾಕ್‌ಡೌನ್‌ ಅವಧಿಯ ಪೂರ್ಣ ತೆರೆದುಕೊಂಡಿತ್ತು. ರೋಗಿಗಳನ್ನು ಕರೆತರುವ ಹಾಗೂ ಅವರೊಂದಿಗೆ ಇದ್ದ ಸಂಬಂಧಿಕರಿಗೆ ಇಲ್ಲಿಂದಲೇ ಊಟ ಪೂರೈಕೆಯಾಗುತ್ತಿತ್ತು.

‘ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿರುವ ನನ್ನ ಮಗನನ್ನು ಆಸ್ಪತ್ರೆಗೆ ದಾಖಲಿಸಿದ್ದೇನೆ. ಮೂರು ದಿನಗಳಾದವು. ಅವನ ರಕ್ತ ಪರೀಕ್ಷೆ ಹಾಗೂ ಇತರ ಪರೀಕ್ಷೆಗಳನ್ನು ಕೈಗೊಳ್ಳುತ್ತಿದ್ದಾರೆ. ನಾನೀಗ ಇಲ್ಲಿರುವ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡುತ್ತಿದ್ದೇನೆ. ಅಕ್ಕಪಕ್ಕದ ಎಲ್ಲ ಹೋಟೆಲ್‌ಗಳು ಬಂದ್‌ ಆಗಿವೆ. ಇಂದಿರಾ ಕ್ಯಾಂಟೀನ್ ಒಂದೇ ನಮಗೆ ಆಧಾರವಾಗಿದೆ. ಇದಿಲ್ಲದಿದ್ದರೆ ನಮ್ಮ ಗತಿ ಏನು?’ ಎಂದು ಬೈಲಹೊಗಲದ ಈರಣ್ಣಾ ಹಿಪ್ಪರಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.