ADVERTISEMENT

ಇದು ಪಾಕಿಸ್ತಾನವೋ, ಅಫ್ಘಾನಿಸ್ತಾನವೋ? ಇಂಗಳಿ ಪ್ರಕರಣದ ಬಗ್ಗೆ ಪ್ರಮೋದ ಮುತಾಲಿಕ

​ಪ್ರಜಾವಾಣಿ ವಾರ್ತೆ
Published 3 ಜುಲೈ 2025, 11:16 IST
Last Updated 3 ಜುಲೈ 2025, 11:16 IST
<div class="paragraphs"><p>ಮುತಾಲಿಕ ಪೊಲೀಸ್ ವಶಕ್ಕೆ</p></div>

ಮುತಾಲಿಕ ಪೊಲೀಸ್ ವಶಕ್ಕೆ

   

– ಪ್ರಜಾವಾಣಿ ಚಿತ್ರ

ಬೆಳಗಾವಿ: ‘ಇಂಗಳಿಯಲ್ಲಿ ನಮ್ಮ ಸಂಘಟನೆ ಕಾರ್ಯಕರ್ತರನ್ನು ಥಳಿಸಿದ್ದು ಸಂವಿಧಾನಬಾಹಿರ ಮತ್ತು ಕಾನೂನುಬಾಹಿರ ಕೆಲಸ. ಹೀಗೆ ಅಮಾನವೀಯವಾಗಿ ವರ್ತಿಸಲು ಇದು ಪಾಕಿಸ್ತಾನೋ ಅಥವಾ ಅಫ್ಘಾನಿಸ್ತಾನೋ’ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ ಪ್ರಶ್ನಿಸಿದರು.

ADVERTISEMENT

ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ತಾಲಿಬಾನ್‌ ಮಾದರಿಯಲ್ಲಿ ನಡೆಯುತ್ತಿರುವ ಕೃತ್ಯ ಖಂಡಿಸಿ ನಾವು ಹೋರಾಡಬಾರದೇ’ ಎಂದು ಪ್ರಶ್ನಿಸಿದರು.

‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ, ಅಕ್ರಮವಾಗಿ ನಡೆಯುತ್ತಿರುವ ಗೋವುಗಳ ಸಾಗಾಟ ಏಕೆ ತಡೆಯುತ್ತಿಲ್ಲ’ ಎಂದು ಕೇಳಿದರು.

‘ಹಿಂದೂ ಕಾರ್ಯಕರ್ತರು ಎಂದಿಗೂ ಇಂಥ ಕೃತ್ಯ ಮಾಡಲ್ಲ. ಸಾರ್ವಜನಿಕರ ಬದಲಿಗೆ, ಗೋರಕ್ಷಕರ ಮೇಲೆ ಹತ್ಯೆ ಮಾಡಿದವರನ್ನು ಪೊಲೀಸರು ರಕ್ಷಿಸುವುದು ಸರಿಯಲ್ಲ. ಕಾಂಗ್ರೆಸ್ ಅಥವಾ ಯಾವುದೇ ರಾಜಕೀಯ ಪಕ್ಷಗಳ ಮಾತು ಕೇಳಿ ಪೊಲೀಸರು ವರ್ತಿಸಬಾರದು. ಕಾನೂನು ಪರಿಪಾಲಿಸಬೇಕು. ಇಲ್ಲದಿದ್ದರೆ ನಿಮ್ಮನ್ನು ಮರಕ್ಕೆ ಕಟ್ಟಿ ಹೊಡೆಯುವ ಪರಿಸ್ಥಿತಿ ಬರುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.

‘ಥಳಿತಕ್ಕೆ ಒಳಗಾದ ಕಾರ್ಯಕರ್ತರಲ್ಲಿ ಒಬ್ಬ ರೌಡಿಶೀಟರ್‌ ಇದ್ದಾನೆ’ ಎಂಬ ಪೊಲೀಸರ ಹೇಳಿಕೆಗೆ, ‘ಹಿಂದೂ ಕಾರ್ಯಕರ್ತರಿಗೆ ಮೇಲೆ ಉದ್ದೇಶ ಪೂರ್ವಕವಾಗಿ ಈಗ ರೌಡಿಶೀಟರ್‌ ಪಟ್ಟ ಕಟ್ಟುವುದು, ಗಡೀಪಾರು ಮಾಡುವುದು ಸಾಮಾನ್ಯವಾಗಿದೆ. ನಮ್ಮ ಕಾರ್ಯಕರ್ತರನ್ನು ಥಳಿಸಿದ ವಿಷಯ ಬಿಟ್ಟು, ಉಳಿದ ವಿಷಯವನ್ನೆಲ್ಲ ಪೊಲೀಸರು ಹೇಳುತ್ತಿದ್ದಾರೆ. ಮುಸ್ಲಿಮರಷ್ಟೇ ನಮ್ಮವರನ್ನು ಹೊಡೆದಿದ್ದಾರೆ. ಆದರೆ, ಗೋವು ಸಾಗಿಸುತ್ತಿದ್ದ ವಾಹನದ ಚಾಲಕನನ್ನೂ(ಹಿಂದೂ) ಪೊಲೀಸರು ಬಂಧಿಸಿದ್ದಾರೆ’ ಎಂದರು.

‘ಇಂಗಳಿಯಲ್ಲಿ ಹಿಂದೂ–ಮುಸ್ಲಿಮರು ಒಗ್ಗಟ್ಟಾಗಿದ್ದೇವೆ. ಹೊರಗಿನವರು ನಮ್ಮೂರಿಗೆ ಬರುವುದು ಬೇಡ’ ಎಂಬ ಗ್ರಾಮಸ್ಥರ ಹೇಳಿಕೆಗೆ, ‘ನಮ್ಮ ಕಾರ್ಯಕರ್ತರನ್ನು ಹೊಡೆಯುವಾಗ ಇವರೆಲ್ಲ ಎಲ್ಲಿ ಹೋಗಿದ್ದರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.