ಚಿಕ್ಕೋಡಿ: ಪಟ್ಟಣದಲ್ಲಿ ಕಿರಾಣಿ ವ್ಯಾಪಾರಿ 60 ವರ್ಷದ ಸುರೇಶ ತಾರದಾಳೆ ಕಳೆದ 17 ವರ್ಷಗಳಿಂದ ಉಚಿತ ಯೋಗ ಶಿಕ್ಷಣ ನೀಡುವ ಮೂಲಕ ಈ ಭಾಗದಲ್ಲಿ ಮನೆ ಮಾತಾಗಿದ್ದಾರೆ. ಇಲ್ಲಿನ ಆರ್.ಡಿ. ಹೈಸ್ಕೂಲ್ ಮೈದಾನದಲ್ಲಿ ಪ್ರತಿ ದಿನ ಈ ವ್ಯಾಪಾರಿ ಯೋಗ ಗುರುವಾಗಿ ಕಾಣಿಸಿಕೊಳ್ಳುತ್ತಾರೆ. ಇದುವರೆಗೂ 3,000ಕ್ಕೂ ಹೆಚ್ಚು ಜನ ಶಿಕ್ಷಣ ಪಡೆದುಕೊಂಡಿದ್ದಾರೆ.
ಸುರೇಶ ತಾರದಾಳೆ ಹದಿ ಹರೆಯದಲ್ಲಿ ಮೊಣಕಾಲು ನೋವಿನಿಂದ ಬಳಲುತ್ತಿದ್ದರು. ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡರೂ ನೋವು ನಿವಾರಣೆಯಾಗಲಿಲ್ಲ. ಹೀಗಾಗಿ ಯಕ್ಸಂಬಾ ಪಟ್ಟಣದ ಶಿವಯೋಗ ಮಠದ ಯೋಗಪಟುವಾಗಿದ್ದ ದಿವಂಗತ ಸಂಗಮದೇವ ಸ್ವಾಮೀಜಿ ಅವರಿಂದ ಯೋಗಾಸನ ಕಲಿತುಕೊಂಡರು. ಮನೆಯಲ್ಲಿ ನಿತ್ಯ ಯೋಗಾಭ್ಯಾಸದಿಂದ ಮೊಣಕಾಲು ನೋವು ಗುಣಮುಖವಾಗಿದ್ದೂ ಅಲ್ಲದೇ, ಶಾರೀರಿಕವಾಗಿರುವ ಇತರೆ ಸಮಸ್ಯೆಗಳೂ ನಿವಾರಣೆಯಾದವು.
ಗುರುಗಳಿಂದ ಕಲಿತ ವಿದ್ಯೆ ಹಾಳಾಗಬಾರದು ಎಂದು ಅವರು ಯೋಗ ಪ್ರೇರಣೆಯಿಂದ ಇತರರಿಗೂ ಕಲಿಸುತ್ತಿದ್ದಾರೆ. ಪಟ್ಟಣದ ಮಕ್ಕಳು, ಗೃಹಿಣಿಯರು, ವೈದ್ಯರು, ಶಿಕ್ಷಕರು ಕೂಡ ಇವರ ಬಳಿ ಯೋಗ ಕಲಿಯುತ್ತಿದ್ದಾರೆ.
ಯೋಗ ಹೇಳಿಕೊಡುವುದರಿಂದ ನನ್ನ ಆರೋಗ್ಯವೂ ಸುಧಾರಿಸುತ್ತದೆ. ಶಿಕ್ಷಣ ಪಡೆದುಕೊಂಡವರೂ ಸದೃಢರಾಗಿದ್ದಾರೆ.– ಸುರೇಶ ತಾರದಾಳೆ, ಯೋಗ ತರಬೇತುದಾರ
ಸುರೇಶ ಅವರ ಸಾಧನೆ ಸೇವೆ ಶ್ಲಾಘನೀಯ. ಗೃಹಿಣಿಯರಿಂದ ಹಿಡಿದು ವೈದ್ಯರು ಸೈನಿಕರು ಶಿಕ್ಷಕರು ಕೂಡ ಇವರಿಂದ ಯೋಗ ಕಲಿತಿದ್ದಾರೆ.– ಸರೋಜಿನಿ ಸಮಾಜೆ, ಉಪನ್ಯಾಸಕಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.