ADVERTISEMENT

ರೈತ ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ತನಿಖೆ: ಡಿ.ಸಿ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 15:22 IST
Last Updated 11 ನವೆಂಬರ್ 2021, 15:22 IST

ಬೆಳಗಾವಿ: ‘ಹಲಗಾ–ಮಚ್ಛೆ ಬೈಪಾಸ್ ರಸ್ತೆ ಕಾಮಗಾರಿ ನಿಲ್ಲಿಸುವುದಿಲ್ಲ. ರೈತರೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಬಗ್ಗೆ ತನಿಖೆ ಮಾಡಿಸುತ್ತೇವೆ’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದರು.

ಇಲ್ಲಿ ಗುರುವಾರ ರೈತ ಮುಖಂಡರೊಂದಿಗೆ ಸಭೆ ನಡೆಸಿದ ಬಳಿಕ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

‘ಈ ರಸ್ತೆ 9.5 ಕಿ.ಮೀ. ನಿರ್ಮಾಣಗೊಳ್ಳಲಿದೆ. ಈಗಾಗಲೇ ಜಾಗ ಮಾರ್ಕಿಂಗ್ ಆಗಿದೆ. ರೈತರು ಪರಿಹಾರ ಪಡೆದ ಬಗ್ಗೆ ಮಾಹಿತಿ ನೀಡಿದ್ದೇವೆ. ಕಾಮಗಾರಿ ಆರಂಭದ ಬಗ್ಗೆ ಬುಧವಾರ ತಿಳಿಸಲಾಗಿತ್ತು. ಕೆಲವು ಅಹಿತಕರ ಘಟನೆಗಳು ನಡೆದಿದ್ದು, ಅದು ಆಗಬಾರದಿತ್ತು. ಆತ್ಮಹತ್ಯೆಗೆ ಯತ್ನಿಸಿದ ರೈತ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇಂತಹ ಘಟನೆ ನಡೆಯಬಾರದು’ ಎಂದರು.

ADVERTISEMENT

‘₹ 4 ಕೋಟಿ ಪರಿಹಾರ ಕೊಡುವುದು ಬಾಕಿ ಇದೆ. 63 ಮಂದಿ ಏಕ ಖಾತೆ, 976 ಮಂದಿ ಜಂಟಿ ಖಾತೆ ಹೊಂದಿದ್ದಾರೆ. 874 ಮಂದಿಗೆ ಪರಿಹಾರ ದೊರೆತಿದೆ. ಉಳಿದವರಲ್ಲಿ ಕೆಲವರು ಬೇಡ ಎಂದಿದ್ದಾರೆ; ಕೆಲವರು ಜಾಸ್ತಿ ಕೇಳಿದ್ದಾರೆ. ಪರಿಹಾರ ಪ್ರಮಾಣ ಹೆಚ್ಚಿಸಲು ಪರಿಶೀಲಿಸಲಾಗುವುದು. ಕಾರ್ಯಾದೇಶವಿದೆ. ಕಾಮಗಾರಿಗೆ 2 ಬಾರಿ ಅಧಿಸೂಚನೆಯೂ ಆಗಿದೆ’ ಎಂದು ಸ್ಪಷ್ಟಪಡಿಸಿದರು.

‘ಭತ್ತ ಇರುವ ಕಡೆ ಕಟಾವು ಮಾಡುವವರೆಗೂ ಕಾಮಗಾರಿ ನಡೆಸುವುದಿಲ್ಲ. ಇಲ್ಲದಿದ್ದ ಕಡೆ ನಡೆಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.