ಭೀಮಪ್ಪ ಗಡಾದ
ಬೆಳಗಾವಿ: ‘ರಾಜ್ಯದ ಎಲ್ಲ ಸರ್ಕಾರಿ ಮತ್ತು ಅರೆಸರ್ಕಾರಿ ಕಚೇರಿಗಳ ಕಟ್ಟಡಗಳ ಮೇಲೆ ‘ಕನ್ನಡ ನಾಡಧ್ವಜ’ ಹಾರಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಬೇಕು’ ಎಂದು ಆರ್‌ಟಿಐ ಕಾರ್ಯಕರ್ತ ಭೀಮಪ್ಪ ಗಡಾದ ಒತ್ತಾಯಿಸಿದರು.
ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಿರುವ ನಾಡಧ್ವಜಕ್ಕೆ ಹೊಸ ವಿನ್ಯಾಸ ಸಿದ್ಧಪಡಿಸಿ, ಕಾನೂನಿನ ಸ್ವರೂಪ ನೀಡಲು ಸರ್ಕಾರ ಸಮಿತಿ ರಚಿಸಿತ್ತು. ಅದು ಶಿಫಾರಸು ಮಾಡಿದ ಪ್ರಕಾರ, ಹೊಸ ವಿನ್ಯಾಸದ ಕನ್ನಡ ನಾಡಧ್ವಜಕ್ಕೆ ಮಾನ್ಯತೆ ನೀಡುವ ನಿರ್ಣಯವನ್ನು 2018ರಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿತ್ತು. ಕಚೇರಿಗಳ ಕಟ್ಟಡಗಳ ಮೇಲೆ ಹೊಸ ವಿನ್ಯಾಸದ ನಾಡಧ್ವಜ ಹಾರಿಸಲು ಯಾವ ತೊಂದರೆ ಇಲ್ಲ ಎಂದು ಅಡ್ವೋಕೇಟ್ ಜನರಲ್ ಅಭಿಪ್ರಾಯಪಟ್ಟಿದ್ದರು. ಹಾಗಾಗಿ ಇದನ್ನು ಅನುಷ್ಠಾನಕ್ಕೆ ತರಬೇಕು ಎಂದು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಕನ್ನಡ ಮತ್ತು ಸಂಸ್ಕೃತಿ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ’ ಎಂದರು.
‘ಮಾನ್ಯತೆ ಪಡೆದಿರುವ ಹೊಸ ವಿನ್ಯಾಸದ ಕನ್ನಡ ನಾಡಧ್ವಜ ಹಾರಿಸಲು ಕೇಂದ್ರ ಸರ್ಕಾರದ ಅನುಮತಿ ಅಗತ್ಯವಿಲ್ಲ. ಆದರೂ, ರಾಜ್ಯ ಸರ್ಕಾರ ಅನುಮತಿ ಕೋರಿ, 2018ರಲ್ಲಿ ಕೇಂದ್ರಕ್ಕೆ ಪತ್ರ ಬರೆದಿತ್ತು. ಅನುಮತಿ ಕೋರಿ ಪ್ರಸ್ತಾವ ಸಲ್ಲಿಸುವಾಗ, ಅಧಿಕಾರಿಗಳು ‘ಕನ್ನಡ ನಾಡಧ್ವಜ’ ಎಂಬ ಪದದ ಬದಲಿಗೆ, ‘ಕರ್ನಾಟಕ ರಾಜ್ಯಧ್ವಜ’ ಎಂದು ನಮೂದಿಸಿ ಯಡವಟ್ಟು ಮಾಡಿದ್ದಾರೆ. ಹಾಗಾಗಿ ಇದು ರಾಜ್ಯದ ಪ್ರತ್ಯೇಕ ಧ್ವಜದ ಪ್ರಸ್ತಾವ ಎಂದು ಭಾವಿಸಿದ ಕೇಂದ್ರ ಅನುಮತಿ ನೀಡುತ್ತಿಲ್ಲ’ ಎಂದು ದೂರಿದರು.
‘ರಾಜ್ಯದಲ್ಲಿ ಕನ್ನಡ ನಾಡಧ್ವಜವನ್ನು ಎಲ್ಲ ಕಚೇರಿಗಳ ಮೇಲೆ ಹಾರಿಸುವಂತೆ 10 ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಹಾಗಾಗಿ ಸರ್ಕಾರ ತಕ್ಷಣವೇ ಕಾನೂನು ತಜ್ಞರು ಮತ್ತು ಹಿರಿಯ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ರಾಜ್ಯೋತ್ಸವಕ್ಕೂ ಮುನ್ನವೇ ಕನ್ನಡ ನಾಡಧ್ವಜ ಹಾರಿಸುವ ಕುರಿತು ಆದೇಶ ಹೊರಡಿಸಬೇಕು’ ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.