ADVERTISEMENT

ಮಾತೃ ಭಾಷಾ ಶಿಕ್ಷಣ: ಸ್ಪಷ್ಟ ಕಾನೂನು ಅಗತ್ಯ

7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷ ಶಿವಶಂಕರ ಹಿರೇಮಠ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2019, 19:30 IST
Last Updated 23 ಜೂನ್ 2019, 19:30 IST
ಬೆಳಗಾವಿಯ ವಡಗಾವಿಯಲ್ಲಿ ಭಾನುವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಶಿವಶಂಕರ ಹಿರೇಮಠ ಮಾತನಾಡಿದರು. ಗುರುಸಿದ್ಧ ಸ್ವಾಮೀಜಿ, ಸಿದ್ದನಗೌಡ ಪಾಟೀಲ, ಮಂಗಲಾ ಮೆಟಗುಡ್ಡ, ಬಸವರಾಜ ಸಸಾಲಟ್ಟಿ ಇದ್ದಾರೆ
ಬೆಳಗಾವಿಯ ವಡಗಾವಿಯಲ್ಲಿ ಭಾನುವಾರ ನಡೆದ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಧ್ಯಕ್ಷ ಶಿವಶಂಕರ ಹಿರೇಮಠ ಮಾತನಾಡಿದರು. ಗುರುಸಿದ್ಧ ಸ್ವಾಮೀಜಿ, ಸಿದ್ದನಗೌಡ ಪಾಟೀಲ, ಮಂಗಲಾ ಮೆಟಗುಡ್ಡ, ಬಸವರಾಜ ಸಸಾಲಟ್ಟಿ ಇದ್ದಾರೆ   

ಬೆಳಗಾವಿ: ‘ಮಾತೃ ಭಾಷಾ ಶಿಕ್ಷಣವನ್ನು ಸಂವಿಧಾನ ಒಪ್ಪಿದೆಯಾದರೂ, ಈ ಬಗ್ಗೆ ಸ್ಪಷ್ಟವಾದ ಕಾನೂನು ರೂಪಿಸುವ ಅಗತ್ಯವಿದೆ’ ಎಂದು ಹಿರಿಯ ಸಾಹಿತಿ ಶಿವಶಂಕರ ಹಿರೇಮಠ ಪ್ರತಿಪಾದಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಇಲ್ಲಿನ ವಡಗಾವಿಯ ಮಲ್ಲಿಕಾರ್ಜುನ ದೇವಸ್ಥಾನ ಆವರಣದಲ್ಲಿ ಭಾನುವಾರ ಆಯೋಜಿಸಿದ್ದ 7ನೇ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮಗುವಿನ ಮಾತೃ ಭಾಷೆ, ಪರಿಸರದ ಭಾಷೆ, ರಾಜ್ಯ ಭಾಷೆಗಳ ಮಾಧ್ಯಮದ ಮೂಲಕ ವಿಶ್ವವಿದ್ಯಾಲಯ ಮಟ್ಟದವರೆಗೆ ಶಿಕ್ಷಣ ನೀಡಬೇಕು ಎಂದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉಲ್ಲೇಖಿಸಲಾಗಿದೆ. ಆದರೆ, ಅದನ್ನು ಕರ್ನಾಟಕದಲ್ಲಿ ಈವರೆಗೂ ಈಡೇರಿಸಲಾಗಿಲ್ಲ. ಪ್ರಾಥಮಿಕ ಶಾಲಾ ಹಂತದಲ್ಲಿ ಮಾತೃಭಾಷಾ ಶಿಕ್ಷಣ ಕಡ್ಡಾಯಗೊಳಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ’ ಎಂದು ವಿಷಾದಿಸಿದರು.

ADVERTISEMENT

ಸಂಪೂರ್ಣವಾಗಿ ಬಳಸಲಾಗುತ್ತಿಲ್ಲ:‘ಭಾಷೆಯು ಪರಂಪರಾನುಗತವಾಗಿ ತಲೆಮಾರುಗಳಿಂದ ತಲೆಮಾರಿಗೆ ಮಾತು, ಬರಹ, ಸಾಹಿತ್ಯ, ಸಂಸ್ಕೃತಿಯಾಗಿ ಬೆಳೆಯುತ್ತಲೇ ಬರುತ್ತದೆ. ವ್ಯಕ್ತಿಗೆ ಸ್ವತಂತ್ರವಾಗಿ ಆಲೋಚಿಸುವ ಶಕ್ತಿಯನ್ನು ನಮ್ಮ ಭಾಷೆ ನೀಡುತ್ತದೆ. ಮಗುವಿನಲ್ಲಿ ಸ್ವಭಾಷಾ ಆಲೋಚನಾ ಶಕ್ತಿಯನ್ನು ಕುಂದಿಸಿದರೆ ಅದು ಪರಂಪರೆ ಹಾಗೂ ಸಂಸ್ಕೃತಿಗೆ ಮಾಡುವ ದೊಡ್ಡ ಅನ್ಯಾಯವಾಗುತ್ತದೆ. ಅಲೋಚನಾ ಶಕ್ತಿ ಹಾಗೂ ಸೃಜನಶೀಲತೆಯನ್ನು ಮಗು ಸ್ವಾಭಾವಿಕವಾಗಿ ಬೆಳೆಸಿಕೊಳ್ಳುವುದನ್ನು ತಡೆದೆರೆ ಮಾನವನ ಪ್ರಗತಿಗೆ ತಡೆ ಉಂಟು ಮಾಡಿದಂತಾಗುತ್ತದೆ’ ಎಂದು ವಿಶ್ಲೇಷಿಸಿದರು.

‘ಭಾಷಾವಾರು ಪ್ರಾಂತ್ಯ ರಚನೆಯಾಗಿ ದಶಕಗಳೇ ಉರುಳಿದರೂ ಆಡಳಿತದಲ್ಲಿ ಕನ್ನಡವನ್ನು ಸಂಪೂರ್ಣವಾಗಿ ಬಳಸಲಾಗುತ್ತಿಲ್ಲ. ಶಿಕ್ಷಣ ಹಾಗೂ ಭಾಷಾ ನೀತಿಯನ್ನು ಸಮರ್ಥವಾಗಿ ಜಾರಿಗೊಳಿಸುವುದು ಸರ್ಕಾರಗಳಿಂದ ಸಾಧ್ಯವಾಗುತ್ತಿಲ್ಲ’ ಎಂದು ತಿಳಿಸಿದರು.

ಹೋರಾಟ ನಡೆಯಬೇಕು:ಕನ್ನಡಕ್ಕೆ ಬೆಳಗಾವಿಯ ಕೊಡುಗೆಗಳನ್ನು ಸ್ಮರಿಸಿದ ಅವರು, ‘ಮರಾಠಿ, ಉರ್ದು ಮೊದಲಾದ ಭಾಷೆಗಳನ್ನು ಮಾತನಾಡುವವರು ಕನ್ನಡಿಗರೊಂದಿಗೆ ಒಂದಾಗಿ ಸುವರ್ಣ ವಿಧಾನಸೌಧದ ಸದುಪಯೋಗಕ್ಕಾಗಿ ಹೋರಾಟ ನಡೆಸಬೇಕು. ಬೆಂಗಳೂರಿನಿಂದ ವಿವಿಧ ಕಚೇರಿಗಳ ಸ್ಥಳಾಂತರಕ್ಕೆ ಆಗ್ರಹಿಸಬೇಕು. ಬೆಳಗಾವಿಯಲ್ಲಿ ಕನ್ನಡದ ಧ್ವಜ ಬಾನೆತ್ತರಕ್ಕೆ ಹಾರುವಂತಾಗಬೇಕು. ಕನ್ನಡ–ಮರಾಠಿ ಭಾಷಿಕರ ನಡುವಿನ ಪ್ರೀತಿ–ವಿಶ್ವಾಸ ಮುಂದುವರಿಯಬೇಕು’ ಎಂದು ಆಶಿಸಿದರು.

‘ಸುವರ್ಣ ವಿಧಾನಸೌಧವನ್ನು ಕನ್ನಡ ಆಡಳಿತ, ಕನ್ನಡ ಸಂಸ್ಕೃತಿ–ಪರಂಪರೆಗಳ ವಿಸ್ತರಣ ಕೇಂದ್ರವನ್ನಾಗಿ ರೂಪಿಸಬೇಕು. ಬೆಳಗಾವಿಯಿಂದ ಯಾವುದೇ ಕಚೇರಿ, ವಿಶ್ವವಿದ್ಯಾಲಯಗಳು ಸ್ಥಳಾಂತರಗೊಳ್ಳದಂತೆ ಎಲ್ಲರೂ ನೋಡಿಕೊಳ್ಳಬೇಕು. ನಮ್ಮ ಪರಂಪರೆ ಹಾಗೂ ಇತಿಹಾಸದ ಶಕ್ತಿ ಸಂಪಾದಿಸಿಕೊಂಡು ನಮ್ಮದೇ ಕನ್ನಡ ನಾಡನ್ನು ಕಟ್ಟಬೇಕು. ಚಲನಶೀಲವಾದ ಚಿಂತನೆ, ಕ್ರಿಯಾತ್ಮಕವಾದ ಕಸುವಿನ ಓಟ ನಮ್ಮದಾದರೆ ಪ್ರಗಿತ ಸಾಧ್ಯವಾಗುತ್ತದೆ. ಇಲ್ಲಿನ ಸಾಹಿತಿಗಳು ಹಾಗೂ ಚಿಂತಕರು ಈ ಕಾರ್ಯದಲ್ಲಿ ತೊಡಗಿಕೊಳ್ಳಬೇಕು’ ಎಂದರು.

ಜೀವನದ ಸಂಸ್ಕೃತಿ:ಕಸಾಪ ಜಿಲ್ಲಾ ಘಟಕದ ಅಧ್ಯಕ್ಷೆ ಮಂಗಲಾ ಮೆಟಗುಡ್ಡ ಮಾತನಾಡಿ, ‘ಕನ್ನಡವೆಂದರೆ ಕೇವಲ ಭಾಷೆಯಲ್ಲ, ಅದು ಜೀವನದ ಸಂಸ್ಕೃತಿ.‌ ಹೀಗಾಗಿ, ಅದನ್ನು ಉಳಿಸಿಕೊಳ್ಳಬೇಕು’ ಎಂದು ಹೇಳಿದರು.

‘ಕನ್ನಡ ಭಾಷೆ ಮಸುಕಾಗಲು ನಾವೇ ಕಾರಣವಾಗಿದ್ದೇವೆ. ಇಂಗ್ಲಿಷ್ ಎಂಬ ಬೇವಿನ ಜೀಜ ಬಿತ್ತಿ ಮಾವಿನ ಸಿಹಿ ನಿರೀಕ್ಷಿಸುತ್ತಿದ್ದೇವೆ. ಇದರಿಂದ ಕನ್ನಡ ಸಂಸ್ಕೃತಿಗೆ ಅಪಾಯ ಎದುರಾಗಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

ವಿಜಯಕುಮಾರ ಜೀರಗ್ಯಾಳರ ಕವನಸಂಕಲನ ಬಿಡುಗಡೆ ಮಾಡಲಾಯಿತು. ಪ್ರತೀಕ್ಷಾ ಹಿರೇಮಠ ‘ಹಚ್ಚೇವು ಕನ್ನಡದ ದೀಪ’ ಹಾಡಿಗೆ ಭರತನಾಟ್ಯ ಪ್ರದರ್ಶನ ನೀಡಿ ಗಮನಸೆಳೆದರು.

ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕನ್ನಡ ಹೋರಾಟಗಾರ ಸಿದ್ದನಗೌಡ ಪಾಟೀಲ, ಕೃಷ್ಣರಾಜೇಂದ್ರ ತಾಳೂಕರ, ಶಂಕರ ಬುಚಡಿ, ಪ್ರದೀಪ ತೆಲಸಂಗ, ಶ್ರೀನಿವಾಸ ತಾಳೂಕರ, ರಮೇಶ ಸೊಂಟಕ್ಕಿ, ವಕೀಲ ಬಸವರಾಜ ರೊಟ್ಟಿ, ಸಾಹಿತಿಗಳಾದ ನೀಲಗಂಗಾ ಚರಂತಿಮಠ, ಜ್ಯೋತಿ ಬದಾಮಿ, ಎಂ.ವೈ. ಮೆಣಸಿನಕಾಯಿ ಭಾಗವಹಿಸಿದ್ದರು.

ನಂತರ ಕನ್ನಡ, ಮರಾಠಿ ಭಾಷಾ ಬಾಂಧವ್ಯ ಹಾಗೂ ಸಾಮರಸ್ಯ, ಸಹಜೀವನ ಮತ್ತು ಕನ್ನಡ ನಾಡು, ನುಡಿ, ನೆಲ, ಜಲ ವಿಷಯ ಕುರಿತ ಗೋಷ್ಠಿಗಳು, ಮಹಿಳಾ ಕವಿಗೋಷ್ಠಿ, ಹಾಸ್ಯ ಗೋಷ್ಠಿ, ಸಾಧಕರಿಗೆ ಸನ್ಮಾನ ಕಾರ್ಯಕ್ರಮಗಳು ನಡೆದವು.

ಇದಕ್ಕೂ ಮುನ್ನ ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಮ್ಮೇಳನಾಧ್ಯಕ್ಷರನ್ನು ವಡಗಾವಿಯ ಪ‍್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಸಂಭ್ರಮದಿಂದ ಕರೆತರಲಾಯಿತು. ಮೆರವಣಿಗೆಗೆ ಬಿಇಒ ಲೀಲಾವತಿ ಹಿರೇಮಠ ಚಾಲನೆ ನೀಡಿದರು. ಮಕ್ಕಳು ಕನ್ನಡ ಬಾವುಟಗಳನ್ನು ಹಿಡಿದು ಭಾಗವಹಿಸಿದ್ದರು. ಮಹಿಳೆಯರು ಪೂರ್ಣಕುಂಭ ಹೊತ್ತು ಪಾಲ್ಗೊಂಡಿದ್ದರು. ರಾಷ್ಟ್ರಧ್ವಜ, ನಾಡ ಧ್ವಜ ಹಾಗೂ ಪರಿಷತ್ ಧ್ವಜಾರೋಹಣ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.