ಬೆಳಗಾವಿ:‘ರೈತರು ಮುಖ್ಯ ಬೆಳೆಯ ಜೊತೆಗೆ ಇತರ ಉಪ ಬೆಳೆಗಳನ್ನು ಬೆಳೆಯಬೇಕು. ಹೈನುಗಾರಿಕೆ, ಕುರಿ, ಜೇನು ಸಾಕಾಣಿಕೆ ಮತ್ತಿತರ ಉಪ ಕಸುಬುಗಳನ್ನು ಮಾಡುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು’ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಸಲಹೆ ನೀಡಿದರು.
‘ರೈತರೊಂದಿಗೊಂದು ದಿನ’ ಕಾರ್ಯಕ್ರಮದ ಅಂಗವಾಗಿ ನಿಪ್ಪಾಣಿ ತಾಲ್ಲೂಕಿನ ಭೀವಶಿ ಗ್ರಾಮದ ನರಸಿಂಹ ಯಶವಂತ ಚೌಗಲೆ ಅವರ ಜಮೀನಿನಲ್ಲಿ ಮಂಗಳವಾರ ಕಬ್ಬಿನ ಬೆಳೆಯ ವಿವಿಧ ನಾಟಿ ಪದ್ಧತಿಗಳ ಪ್ರಾತ್ಯಕ್ಷಿಕೆ ಹಾಗೂ ರೈತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆಹಾರ ಸಂಸ್ಕರಣ ಘಟಕಗಳ ಸ್ಥಾಪನೆಗೆ ಸರ್ಕಾರ ಸಬ್ಸಿಡಿ ಒದಗಿಸಿ ರೈತರ ಕೈಬಲಪಡಿಸುತ್ತಿವೆ. ಆದ್ದರಿಂದ ಕೃಷಿ, ಉಪಕಸುಬುಗಳ ಜೊತೆಗೆ ಮಾರುಕಟ್ಟೆಗೆ ತಕ್ಕಂತೆ ಆಹಾರ ಸಂಸ್ಕರಣೆಯ ಪದ್ಧತಿಯನ್ನು ರೈತರು ರೂಢಿಸಿಕೊಳ್ಳಬೇಕು. ಸಮಗ್ರ ಕೃಷಿ ಪದ್ಧತಿಯಿಂದ ರೈತರು ಆರ್ಥಿಕವಾಗಿ ಸ್ವಾವಲಂಬನೆ ಗಳಿಸಲು ಸಾಧ್ಯವಾಗುತ್ತದೆ. ಒಂದು ಬೆಳೆ ನಷ್ಟವಾದರೆ ಇನ್ನೊಂದು ಬೆಳೆ ಕೈಹಿಡಿಯುತ್ತದೆ. ಕುರಿ ಸಾಕಣೆ ಕೂಡ ಲಾಭದಾಯಕವಾಗಿದೆ’ ಎಂದರು.
‘ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಕಿಸಾನ್ ಸಮ್ಮಾನ್ ಯೋಜನೆ ಜಾರಿಗೊಳಿಸಿದ್ದಾರೆ. ಈ ಯೋಜನೆಯಡಿ ಬೆಳಗಾವಿ ಜಿಲ್ಲೆಯ 5.48 ಲಕ್ಷ ರೈತರಿಗೆ 2019ರಿಂದ ಇಲ್ಲಿಯವರೆಗೆ ₹1090 ಕೋಟಿ ಲಭಿಸಿದೆ.ಇತ್ತೀಚಿಗೆ ಸಂಭವಿಸಿದ ಬೆಳೆ ಹಾನಿಗೆ ಪರಿಹಾರ ಬಿಡುಗಡೆ ಮಾಡಲಾಗಿದ್ದು, ಇದರಲ್ಲಿ ₹30 ಕೋಟಿ ಜಿಲ್ಲೆಗೆ ಸಿಕ್ಕಿದೆ’ ಎಂದು ಮಾಹಿತಿ ನೀಡಿದರು.
ವಿದ್ಯುತ್ ಸಮಸ್ಯೆ ನಿವಾರಣೆಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ ಅವರು, ಕೃಷಿ ಪದವಿ ಕಾಲೇಜುಗಳಲ್ಲಿ ರೈತರ ಮಕ್ಕಳ ಪ್ರವೇಶಕ್ಕೆ ಮೀಸಲಾತಿ ಪ್ರಮಾಣ ಹೆಚ್ಚಿಸಲಾಗಿದೆ. ಇದಲ್ಲದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರೈತರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಮೂಲಕ ನೆರವಿಗೆ ಬಂದಿದ್ದಾರೆ. ಒಟ್ಟಾರೆ ರೈತ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಬದ್ಧವಿದೆ ಎಂದು ಹೇಳಿದರು.
‘ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಅವರ ಮನೆ ಬಾಗಿಲಿಗೆ ಇಲಾಖೆಯನ್ನೇ ಕರೆತರುವ ಕಾರ್ಯಕ್ರಮ ಇದಾಗಿದೆ’ ಎಂದರು.
ಕೃಷಿ ಕಾಲೇಜು ಮಂಜೂರಾತಿಗೆ ಒತ್ತಾಯ:
ಮುಜರಾಯಿ, ಹಜ್ ಹಾಗೂ ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ, ‘ರೈತರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವುಗಳನ್ನು ಪರಿಹರಿಸುವ ನಿಟ್ಟಿನಲ್ಲಿ ‘ರೈತರೊಂದಿಗೊಂದು ದಿನ’ ಕಾರ್ಯಕ್ರಮ ಅರ್ಥಪೂರ್ಣವಾಗಿದೆ’ ಎಂದು ಹೇಳಿದರು.
‘ನಿಪ್ಪಾಣಿ ಕ್ಷೇತ್ರ ಐದಾರು ವರ್ಷಗಳಿಂದ ಪ್ರವಾಹಕ್ಕೆ ತುತ್ತಾದ ಪರಿಣಾಮ ರೈತರು ಕಷ್ಟದಲ್ಲಿದ್ದಾರೆ. ಗಡಿಭಾಗ ಆಗಿರುವುದರಿಂದ ಇಲ್ಲಿನ ರೈತರಿಗೆ ಹೆಚ್ಚಿನ ನೆರವು ಅಗತ್ಯವಿದೆ.ಇಲ್ಲಿ ಕೃಷಿ ಪದವಿ ಕಾಲೇಜು ಸ್ಥಾಪಿಸುವ ಅಗತ್ಯವಿದೆ’ ಎಂದರು.
ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಮತ್ತು ಕೃಷಿ ಇಲಾಖೆಯ ವಿಸ್ತರಣಾ ನಿರ್ದೇಶಕ ಡಾ.ವೆಂಕಟರಾಮರೆಡ್ಡಿ ಮಾತನಾಡಿದರು.
ಕಬ್ಬಿನ ನಾಟಿ ಪದ್ಧತಿಗಳ ಕರಪತ್ರಗಳನ್ನು ಸಚಿವ ಬಿ.ಸಿ. ಪಾಟೀಲ ಬಿಡುಗಡೆ ಮಾಡಿದರು. ಕೃಷಿ ಇಲಾಖೆ ನಿರ್ದೇಶಕ ಬಿ.ವೈ. ಶ್ರೀನಿವಾಸ್, ಕೃಷಿ ಇಲಾಖೆಯ ಜಲಾನಯನ ವಿಭಾಗದ ನಿರ್ದೇಶಕಿ ನಂದಿನಿಕುಮಾರಿ, ಜಾಗೃತ ಕೋಶದ ಜಂಟಿ ನಿರ್ದೇಶಕ ಜಿಲಾನಿ ಮೊಖಾಶಿ, ಜಂಟಿ ನಿರ್ದೇಶಕರು ಶಿವನಗೌಡ ಪಾಟೀಲ, ಉಪ ನಿರ್ದೇಶಕ ಡಾ.ಎಚ್.ಡಿ. ಕೋಳೆಕರ ಇದ್ದರು.
ರೈತರ ಒತ್ತಾಯಗಳು
* ಸಾವಯವ ಬೆಳೆಗಳಿಗೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು.
* ಸೋಯಾಬಿನ್ ಬೆಳೆಗೆ ಸೂಕ್ತ ದರ ನಿಗದಿಪಡಿಸಬೇಕು.
* ಅತಿವೃಷ್ಟಿಯಿಂದ ಹಾನಿ ಅನುಭವಿಸಿದ ರೈತರಿಗೆ ಪರಿಹಾರವನ್ನು ತ್ವರಿತವಾಗಿ ಒದಗಿಸಬೇಕು.
* ನದಿ ತೀರದ ಭಾಗದಲ್ಲಿ ವಿದ್ಯುತ್ ಸಮಸ್ಯೆ ಹೆಚ್ಚಾಗಿದ್ದು, ಇದನ್ನು ನಿವಾರಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.