ADVERTISEMENT

ರಾಜ್ಯ ಸರ್ಕಾರ ನೆರೆ ಸಂತ್ರಸ್ತರ ನೆರವಿಗೆ ಧಾವಿಸಲಿ: ಈರಣ್ಣ ಕಡಾಡಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2025, 10:35 IST
Last Updated 23 ಆಗಸ್ಟ್ 2025, 10:35 IST
<div class="paragraphs"><p>ಈರಣ್ಣ ಕಡಾಡಿ</p></div>

ಈರಣ್ಣ ಕಡಾಡಿ

   

ಬೆಳಗಾವಿ: ‘ಜಿಲ್ಲೆಯಲ್ಲಿ ಘಟಪ್ರಭಾ, ಕೃಷ್ಣಾ ನದಿಗಳ ಪ್ರವಾಹದಿಂದ ಸಮಸ್ಯೆ ಎದುರಿಸುತ್ತಿರುವವರ ನೆರವಿಗೆ ರಾಜ್ಯ ಸರ್ಕಾರ ಧಾವಿಸಬೇಕು. ಸಚಿವರು ಸಂತ್ರಸ್ತರ ಬಳಿ ಹೋಗಿ ಸಮಸ್ಯೆ ಆಲಿಸಬೇಕು’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು.

ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ. ಕೃಷ್ಣಾ ಮತ್ತು ಘಟಪ್ರಭಾ ನದಿಗಳ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾದ ಕಾರಣ, ನೆರೆ ರಾಜ್ಯದ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡಲಾಗುತ್ತಿದೆ. ಇದರಿಂದ ನದಿಪಾತ್ರದ ಗ್ರಾಮಗಳಲ್ಲಿ ಪ್ರವಾಹ ಸ್ಥಿತಿ ಉಂಟಾಗಿದ್ದು, ಮನೆ, ರಸ್ತೆ ಮತ್ತು ಬೆಳೆಗಳಿಗೂ ಹಾನಿಯಾಗಿದೆ’ ಎಂದರು.

ADVERTISEMENT

‘2019ರಲ್ಲಿ ಜಿಲ್ಲೆಯಲ್ಲಿ ಪ್ರವಾಹ ಸ್ಥಿತಿ ತಲೆದೋರಿದಾಗ, ಪೂರ್ಣ ಮನೆ ಬಿದ್ದವರಿಗೆ ತಲಾ ₹5 ಲಕ್ಷ, ಭಾಗಶಃ ಮನೆ ಬಿದ್ದವರಿಗೆ ₹3 ಲಕ್ಷ ಪರಿಹಾರವನ್ನು ಬಿಜೆಪಿ ಸರ್ಕಾರ ಘೋಷಿಸಿತ್ತು. ನೆರೆ ಸಂತ್ರಸ್ತರಿಗೆ ₹10 ಸಾವಿರ ತಾತ್ಕಾಲಿಕವಾಗಿ ಪರಿಹಾರ ನೀಡಿತ್ತು. ಆದರೆ, ಈಗ ಕಾಂಗ್ರೆಸ್‌ ಸರ್ಕಾರ ಕಡಿಮೆ ಪರಿಹಾರ ನೀಡುತ್ತಿರುವುದು ಸರಿಯಲ್ಲ. ಬಿಜೆಪಿ ಸರ್ಕಾರದ ಮಾದರಿಯಲ್ಲೇ ಪರಿಹಾರ ಕೊಡಬೇಕು’ ಎಂದು ಆಗ್ರಹಿಸಿದರು.

‘2019ರಲ್ಲಿ ಮನೆ ಕಳೆದುಕೊಂಡವರ ಪೈಕಿ ಜಿಲ್ಲೆಯಲ್ಲಿ 1,800 ಕುಟುಂಬದವರಿಗೆ, ಕಾಂಗ್ರೆಸ್‌ ಸರ್ಕಾರ ಇನ್ನೂ ಪೂರ್ಣ ಪರಿಹಾರ ಕೊಟ್ಟಿಲ್ಲ. ಹಾಗಾಗಿ ಮನೆಗಳ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದೆ. ಎಲ್ಲರಿಗೂ ನ್ಯಾಯಯುತ ಪರಿಹಾರ ಒದಗಿಸಿ, ಸಮಸ್ಯೆ ಬಗೆಹರಿಸಬೇಕು’ ಎಂದು ಒತ್ತಾಯಿಸಿದರು.

‘ರೈತರ ನೆರವಿಗೆ ಧಾವಿಸುವ ದೃಷ್ಟಿಯಿಂದ ಬಿಜೆಪಿ ಸರ್ಕಾರವು ಎಸ್‌ಡಿಆರ್‌ಎಫ್‌ ಮಾರ್ಗಸೂಚಿಯಂತೆ ಬೆಳೆಹಾನಿ ಪರಿಹಾರ ನೀಡುವ ಜತೆಗೆ, ಪ್ರತಿ ಎಕರೆಗೆ ₹10 ಸಾವಿರ ಹೆಚ್ಚುವರಿಯಾಗಿ ಕೊಟ್ಟಿತ್ತು. ಕಾಂಗ್ರೆಸ್‌ ಸರ್ಕಾರವೂ ಇದನ್ನು ಅನುಸರಿಸಬೇಕು’ ಎಂದು ಆಗ್ರಹಿಸಿದರು.

‘ರಾಜ್ಯದಿಂದ ಮನವಿ ಸಲ್ಲಿಕೆಯಾದ ನಂತರ, ಬೆಳೆ ಮತ್ತು ಮೂಲಸೌಕರ್ಯಗಳ ಹಾನಿ ಪರಿಶೀಲಿಸಲು ಕೇಂದ್ರದ ತಂಡ ಬರುತ್ತವೆ. ಆ ಪರಿಸ್ಥಿತಿ ಇನ್ನೂ ಉದ್ಭವಿಸಿಲ್ಲ. ಹಾಗಾಗಿ ಬೆಳೆಹಾನಿ ಪರಿಹಾರ ವಿತರಣೆಗಾಗಿ ರಾಜ್ಯ ಸರ್ಕಾರ ಕೇಂದ್ರದ ಅನುಮತಿಗಾಗಿ ಕಾಯುವ ಅಗತ್ಯವಿಲ್ಲ. ಮೊದಲು ಪರಿಹಾರ ನೀಡಿ, ಕೇಂದ್ರಕ್ಕೆ ರಸೀದಿ ಕಳುಹಿಸಬೇಕು. ಸಚಿವ ಸತೀಶ ಜಾರಕಿಹೊಳಿ ಅವರು, ಕೆಳಹಂತದ ಸೇತುವೆಗಳ ಎತ್ತರ ಹೆಚ್ಚಿಸಲು ಕ್ರಮ ವಹಿಸಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.