
ಕೇರಳದ ಕಾಸರಗೋಡಿನ ಕಲ್ಲಕಳಿಯ ಬತ್ತೇರಿಯಲ್ಲಿ ನಿರ್ಮಿಸುತ್ತಿರುವ ಕಯ್ಯಾರ ಕಿಞಣ್ಣ ರೈ ಸಾಂಸ್ಕೃತಿಕ ಭವನ ಪೂರ್ಣಗೊಳ್ಳದಿರುವುದು
ಬೆಳಗಾವಿ: ಗಡಿಭಾಗದ ಪ್ರದೇಶಗಳಲ್ಲಿ ಕನ್ನಡ ಭಾಷೆ ಚಟುವಟಿಕೆಗಳನ್ನು ಪ್ರೋತ್ಸಾಹಿಸಲು ಹಾಗೂ ಗಡಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸಲು ರಾಜ್ಯ ಸರ್ಕಾರವು ರಚಿಸಿದ್ದ ‘ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ’ಕ್ಕೆ ಈಗ ಅನುದಾನ ಕೊರತೆ ಕಾಡುತ್ತಿದೆ. ಇದರಿಂದ ಕನ್ನಡ ಕಟ್ಟುವ ಕೆಲಸಕ್ಕೆ ಹಿನ್ನಡೆ ಆಗಿದೆ.
ಗೋವಾ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು ಜೊತೆಗೆ ಕರ್ನಾಟಕದ 19 ಜಿಲ್ಲೆಗಳ 63 ತಾಲ್ಲೂಕು ಗಡಿ ಹಂಚಿಕೊಂಡಿವೆ. ಗಡಿಭಾಗ ಮತ್ತು ಹೊರರಾಜ್ಯಗಳ ಕನ್ನಡ ಶಾಲೆಗಳಲ್ಲಿ ಕೊಠಡಿ ನಿರ್ಮಾಣ, ಮೂಲಸೌಲಭ್ಯ ಕಲ್ಪಿಸುವಿಕೆ, ಸಾಂಸ್ಕೃತಿಕ ಭವನ, ಬಯಲು ರಂಗಮಂದಿರ ನಿರ್ಮಾಣ, ಸ್ಮಾರ್ಟ್‌ಕ್ಲಾಸ್‌ಗೆ ಪರಿಕರ, ಕನ್ನಡ ಪುಸ್ತಕ ಪೂರೈಕೆ ಸೇರಿ ವಿವಿಧ ಕಾರ್ಯಗಳನ್ನು ಪ್ರಾಧಿಕಾರ ಕೈಗೊಳ್ಳುತ್ತದೆ.
2018–19ರಲ್ಲಿ ಪ್ರಾಧಿಕಾರಕ್ಕೆ ₹89 ಕೋಟಿ ಅನುದಾನ ನೀಡಲಾಗಿತ್ತು. 2022–23ರಲ್ಲಿ ₹40 ಕೋಟಿ ಅನುದಾನ ಬಂದಿತ್ತು. ವಿವಿಧ ಚಟುವಟಿಕೆಗಳಿಗೆ ವಾರ್ಷಿಕ ₹100 ಕೋಟಿ ಅನುದಾನ ಕೋರಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗಿದೆ. ಆದರೆ, 2025–26ನೇ ಸಾಲಿನಲ್ಲಿ ₹16 ಕೋಟಿಯಷ್ಟೇ ಅನುದಾನ ನೀಡಲಾಗಿದೆ. ಅದರಲ್ಲಿ ಗೋವಾದಲ್ಲಿ ಕನ್ನಡ ಭವನ ನಿರ್ಮಾಣದ ನಿವೇಶನಕ್ಕಾಗಿಯೇ ₹5.25 ಕೋಟಿ ವ್ಯಯಿಸಲಾಗಿದೆ.
‘ಪ್ರಸ್ತುತ ಪ್ರಗತಿಯಲ್ಲಿರುವ ಹಳೇ ಕಾಮಗಾರಿಗಳಿಗೆ ₹34 ಕೋಟಿ ಬೇಕಿದೆ. ಗೋವಾದಲ್ಲಿ ಕನ್ನಡ ಭವನ ನಿರ್ಮಿಸಲು ನಿವೇಶನಕ್ಕೆ ವ್ಯಯಿಸಿದ ಹಣ ಹೊರತುಪಡಿಸಿ, ಬಾಕಿ ಉಳಿದ ₹10.75 ಕೋಟಿ ಅನುದಾನದಲ್ಲಿ ಎಲ್ಲ ಕಾಮಗಾರಿ ಮುಗಿಸುವುದು ಕಷ್ಟ. ಅತ್ಯಲ್ಪ ಅನುದಾನದಲ್ಲಿ ಗಡಿ ಕನ್ನಡಿಗರ ಸಮಸ್ಯೆಗೆ ಸ್ಪಂದಿಸಲಾಗುತ್ತಿಲ್ಲ’ ಎಂದು ಪ್ರಾಧಿಕಾರದ ಸದಸ್ಯರು ತಿಳಿಸಿದರು.
ಕಾಮಗಾರಿ ಸ್ಥಗಿತ: ಗಡಿಭಾಗ ಮತ್ತು ಹೊರರಾಜ್ಯಗಳಲ್ಲಿ ಪ್ರಾಧಿಕಾರ ಕೈಗೊಂಡಿದ್ದ ವಿವಿಧ ಕಾಮಗಾರಿಗಳು ಸ್ಥಗಿತಗೊಂಡಿವೆ. ಕಾಸರಗೋಡಿನ ಕಲ್ಲಕಳಿಯ ಬತ್ತೇರಿಯಲ್ಲಿ ಕಯ್ಯಾರ ಕಿಞಣ್ಣ ರೈ ಸಾಂಸ್ಕೃತಿಕ ಭವನ, ಮಹಾರಾಷ್ಟ್ರದ ಅಕ್ಕಲಕೋಟೆಯಲ್ಲಿ ಜಯದೇವಿ ತಾಯಿ ಲಿಗಾಡೆ ಸಾಂಸ್ಕೃತಿಕ ಭವನ ನಿರ್ಮಾಣ ಮತ್ತಿತರ ಕಾಮಗಾರಿ ಒಳಗೊಂಡಂತೆ ಹಲವು ಕಾಮಗಾರಿಗಳು ಪೂರ್ಣಗೊಂಡಿಲ್ಲ.
ಪ್ರಾಧಿಕಾರಕ್ಕೆ ಹೆಚ್ಚಿನ ಅನುದಾನ ಸಿಕ್ಕರೆ ಗಡಿಯಲ್ಲಿ ಬೇಡಿಕೆಯಂತೆ ಚಟುವಟಿಕೆ ಕೈಗೊಳ್ಳಬಹುದು. ಬಾಕಿ ಕಾಮಗಾರಿ ಕೆಲಸ ಪೂರ್ಣಗೊಳಿಸಬಹುದು. ಸರ್ಕಾರ ಬೇಗನೇ ಸ್ಪಂದಿಸುವ ನಿರೀಕ್ಷೆಯಿದೆ.ಸೋಮಣ್ಣ ಬೇವಿನಮರದ ಅಧ್ಯಕ್ಷ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
ಸರ್ಕಾರಕ್ಕೆ ಗಡಿಭಾಗದ ಬಗ್ಗೆ ನಿಜವಾಗಿ ಬದ್ಧತೆ ಇದ್ದರೆ ಪ್ರಾಧಿಕಾರಕ್ಕೆ ವಾರ್ಷಿಕ ₹100 ಕೋಟಿ ಅನುದಾನ ಕೊಡಬೇಕು. ಪ್ರಾಧಿಕಾರದ ಚಟುವಟಿಕೆಗಳಿಗೆ ಅಗತ್ಯ ಪ್ರೋತ್ಸಾಹ ನೀಡಬೇಕು.ಅಶೋಕ ಚಂದರಗಿ ಸದಸ್ಯ ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ
ಗಡಿ ಭಾಗದ ಅನೇಕ ಶಾಲೆಗಳಲ್ಲಿ ಸೌಲಭ್ಯ ಕೊರತೆ
ಗಡಿ ಪ್ರದೇಶಗಳಲ್ಲಿ 17 ಸಾವಿರ ಹೊರರಾಜ್ಯದಲ್ಲಿ 658 ಕನ್ನಡ ಶಾಲೆಗಳಿವೆ. ಅನೇಕ ಕಡೆ ಶಾಲೆಗಳಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲ. ಈ ವರ್ಷ ಪ್ರಾಧಿಕಾರಕ್ಕೆ ಹಂಚಿಕೆಯಾಗಿ ₹16 ಕೋಟಿ ಅನುದಾನದಲ್ಲಿ ₹1.20 ಕೋಟಿ ಮಾತ್ರ ಶೈಕ್ಷಣಿಕ ಚಟುವಟಿಕೆಗೆ ಬಳಸಲು ಸೂಚಿಸಲಾಗಿದೆ. ‘ಅನುದಾನವನ್ನು ಸಮನಾಗಿ ಹಂಚಿಕೆ ಮಾಡಿದರೆ ಪ್ರತಿ ತಾಲ್ಲೂಕಿಗೆ ₹2 ಲಕ್ಷಕ್ಕಿಂತ ಕಡಿಮೆ ದೊರೆಯುತ್ತದೆ. ಅಷ್ಟು ಹಣದಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಕೈಗೊಳ್ಳುವುದಾದರೂ ಹೇಗೆ’ ಎಂಬುದು ಪ್ರಾಧಿಕಾರದ ಸದಸ್ಯರೊಬ್ಬರ ಪ್ರಶ್ನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.