ADVERTISEMENT

ದೇಶದ ಸ್ವಾತಂತ್ರ್ಯಕ್ಕೆ ಚನ್ನಮ್ಮ ಹೋರಾಟ ಪ್ರೇರಣೆ: ಥಾವರಚಂದ್ ಗೆಹಲೋತ್

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2022, 16:15 IST
Last Updated 8 ಮಾರ್ಚ್ 2022, 16:15 IST
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಬೆಳಗಾವಿಯ ದಕ್ಷಿಣ ಕಾಶಿ ಖ್ಯಾತಿಯ ಕಪಿಲೇಶ್ವರ ಮಂದಿರದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು – ಪ್ರಜಾವಾಣಿ ಚಿತ್ರ
ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಬೆಳಗಾವಿಯ ದಕ್ಷಿಣ ಕಾಶಿ ಖ್ಯಾತಿಯ ಕಪಿಲೇಶ್ವರ ಮಂದಿರದಲ್ಲಿ ಮಂಗಳವಾರ ವಿಶೇಷ ಪೂಜೆ ಸಲ್ಲಿಸಿದರು – ಪ್ರಜಾವಾಣಿ ಚಿತ್ರ   

ಚನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ‘ಸ್ವಾತಂತ್ರ್ಯ ಪಡೆಯಲು ರಾಣಿ ಚನ್ನಮ್ಮ ನಡೆಸಿದ ಹೋರಾಟ ಮಹತ್ವದ್ದಾಗಿದ್ದು, ಇದು ದೇಶದ ಉಳಿದ ಭಾಗಕ್ಕೂ ಪ್ರೇರಣೆಯಾಯಿತು’ ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಅಭಿಪ್ರಾಯಪಟ್ಟರು.

ಇಲ್ಲಿಯ ಕೋಟೆ ವೀಕ್ಷಿಸಲು ಮಂಗಳವಾರ ಬಂದಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

‘1996ರಲ್ಲಿ ಸಂಸದನಾಗಿದ್ದಾಗ ಒಮ್ಮೆ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯಿತು. ರಾಣಿ ಚನ್ನಮ್ಮ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ಮೊದಲಾದ ಅನೇಕ ಮಹಿಳೆಯರು ಮತ್ತು ಪುರುಷ ಹೋರಾಟಗಾರರ ಉಲ್ಲೇಖವಾಗುತ್ತಿತ್ತು. ಉತ್ತರದಲ್ಲಿ ಝಾನ್ಸಿ ರಾಣಿಯ ಪ್ರತಿಮೆ ಮತ್ತು ಕೋಟೆ ವೀಕ್ಷಿಸಿದ್ದೆ. ನನ್ನ ಸೌಭಾಗ್ಯ ಎನ್ನುವಂತೆ ಕರ್ನಾಟಕದ ರಾಜ್ಯಪಾಲನಾಗಿ ಬಂದೆ. ಅಂತರರಾಷ್ಟ್ರೀಯ ಮಹಿಳಾ ದಿನದಂದು ಕಿತ್ತೂರು ಚನ್ನಮ್ಮನ ಕೋಟೆ, ಮೂರ್ತಿ ವೀಕ್ಷಿಸುವ ಭಾಗ್ಯ ಸಿಕ್ಕಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ADVERTISEMENT

‘ಹೋರಾಟಗಾರ ತ್ಯಾಗದಿಂದಾಗಿ ಸಿಕ್ಕ ಸ್ವಾತಂತ್ರ್ಯ ಸದೃಢವಾಗಿರುತ್ತದೆ, ಹೆಚ್ಚು ಬಲಯುತವಾಗುತ್ತಾ ಹೋಗುತ್ತದೆ’ ಎಂದೂ ಅವರು ಹೇಳಿದರು.

ಇದಕ್ಕೂ ಮೊದಲು ರಾಣಿ ಚನ್ನಮ್ಮನ ಅಶ್ವಾರೂಢ ಪ್ರತಿಮೆಗೆ ರಾಜ್ಯಪಾಲರು ಮಾಲಾರ್ಪಣೆ ಗೌರವ ಸಲ್ಲಿಸಿದರು. ಬಿಜೆಪಿ ಮಹಿಳಾ ಕಾರ್ಯಕರ್ತೆಯರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು. ರಾಜ್ಯಪಾಲರು ಅಲ್ಲಿ ಛಾಯಾಚಿತ್ರವನ್ನು ತೆಗೆಸಿಕೊಂಡರು.

ತಮ್ಮ ಎಡಭಾಗದಲ್ಲಿ ಹೆಚ್ಚು ಮಹಿಳೆಯರು ಇರುವುದನ್ನು ಗಮನಿಸಿ, ‘ಮಹಿಳಾವೊಂ ಜಾದಾ ಹೈ; ಇದರ್ ಫೋಟೊ ಕೀಂಚನಾ’ ಎಂದು ಫೋಟೊ‌ಗ್ರಾಫರ್‌ಗೆ ಸಲಹೆಯನ್ನೂ ನೀಡಿದರು.

ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಕಿತ್ತೂರಿನಲ್ಲಿ ರಾಣಿ ಚನ್ನಮ್ಮ ಪ್ರತಿಮೆಗೆ ಮಂಗಳವಾರ ಮಾಲಾರ್ಪಣೆ ಮಾಡಿ ನಮಿಸಿದರು - ಪ್ರಜಾವಾಣಿ ಚಿತ್ರ

ಕೋಟೆ ಅವಶೇಷ, ವಸ್ತುಸಂಗ್ರಹಾಲಯ ವೀಕ್ಷಣೆ ಮಾಡಿ ಅಲ್ಲಿಯ ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅಭಿಪ್ರಾಯ ದಾಖಲಿಸಿದರು.

ಕಲ್ಮಠದ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, ನಿಚ್ಚಣಕಿಯ ಪಂಚಾಕ್ಷರಿ ಸ್ವಾಮೀಜಿ, ಶಾಸಕ ಮಹಾಂತೇಶ ದೊಡ್ಡಗೌಡರ, ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಶೀಲ್ದಾರ್ ಸೋಮಲಿಂಗಪ್ಪ ಹಾಲಗಿ, ತಾಲ್ಲೂಕು ಪಂಚಾಯ್ತಿ ಇಒ ಸುಭಾಸ ಸಂಪಗಾಂವಿ, ಮುಖ್ಯಾಧಿಕಾರಿ ಪ್ರಕಾಶ ಮಠದ, ಸಿಪಿಐ ಮಹಾಂತೇಶ ಹೊಸಪೇಟ, ಸಹಾಯಕ ಕ್ಯೂರೇಟರ್ ರಾಘವೇಂದ್ರ, ಬಸನಗೌಡ ಸಿದ್ರಾಮನಿ, ಉಳವಪ್ಪ ಉಳ್ಳೇಗಡ್ಡಿ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.