ADVERTISEMENT

ಬಜೆಟ್‌ನಲ್ಲಿ ಘೋಷಣೆಗೆ ಕ್ರಮ: ಸಚಿವ ಗೋವಿಂದ ಕಾರಜೋಳ ಮಾಹಿತಿ

ಜಾಂಬೋಟಿ ಜೇನು ಸಂಸ್ಕರಣ ಘಟಕ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 14:16 IST
Last Updated 25 ಜನವರಿ 2022, 14:16 IST
ಸಚಿವ ಗೋವಿಂದ ಕಾರಜೋಳ
ಸಚಿವ ಗೋವಿಂದ ಕಾರಜೋಳ    

ಬೆಳಗಾವಿ: ಜಾಂಬೋಟಿ ಜೇನು, ಶಹಾಪುರ ಸೀರೆ, ಮಾವಿನ ಹಪ್ಪಳ ಸೇರಿದಂತೆ ಸ್ಥಳೀಯ ನಾಲ್ಕೈದು ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ ಒದಗಿಸುವ ಜೊತೆಗೆ ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು 2022–23ನೇ ಸಾಲಿನ ಬಜೆಟ್‌ನಲ್ಲಿ ಸೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಭರವಸೆ ನೀಡಿದರು.

ಬಜೆಟ್‌ ಹಿನ್ನೆಲೆಯಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯ ನಂತರ ಪತ್ರಕರ್ತರೊಂದಿಗೆ ಅವರು ಮಾತನಾಡಿದರು.

ಶೀಘ್ರದಲ್ಲೇ ಬಜೆಟ್‌ ಪೂರ್ವಭಾವಿ ಸಭೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹೀಗಾಗಿ, ಸಲಹೆ ಕೇಳಿದ್ದೇನೆ. ಸ್ಥಳೀಯವಾಗಿ ಸಿಗುವ ಕಚ್ಚಾ ಸಾಮಗ್ರಿಗಳನ್ನು ಬಳಸಿ, ವರಮಾನ ಸೃಷ್ಟಿಸುವ ಯೋಜನೆಗಳಿಗೆ ಆದ್ಯತೆ ನಿಡಲಾಗುವುದು ಎಂದು ತಿಳಿಸಿದರು.

ADVERTISEMENT

ಜಾಂಬೋಟಿ ಜೇನು ಉತ್ಪನ್ನಕ್ಕೆ ಅಗತ್ಯ ಸಂಸ್ಕರಣ ಘಟಕ ಸ್ಥಾಪನೆಗೆ ವಿಸ್ತ್ರೃತ ವರದಿ ತಯಾರಿಸಿ ಸಲ್ಲಿಸುವಂತೆ ತಿಳಿಸಿದ್ದೇನೆ. ಆ ಜೇನಿನ ಬಾಟಲಿಗಳನ್ನು ವ್ಯವಸ್ಥಿತವಾಗಿ ಸಿದ್ಧಪಡಿಸಿ ಬ್ರ್ಯಾಂಡ್ ಮಾಡಲು ಯೋಜಿಸಲಾಗಿದೆ. 2 ಎಕರೆ ಜಾಗದಲ್ಲಿ ಘಟಕ ಆರಂಭಿಸಲಾಗುವುದು ಎಂದು ತಿಳಿಸಿದರು.

ಈ ಬಾರಿಯ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗದಂತೆ ನೋಡಿಕೊಳ್ಳಲಾಗುವುದು. ಹಿಂದುಳಿದ ಪ್ರದೇಶ ಎಂಬ ಹಣೆಪಟ್ಟಿ ಹೋಗಲಾಡಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪ್ರತಿಕ್ರಿಯಿಸಿದರು.

ಶಾಸಕರು ಗೈರು:
ಬಜೆಟ್‌ನಲ್ಲಿ ಯೋಜನೆಗಳನ್ನು ಸೇರಿಸುವ ಸಂಬಂಧ ಚರ್ಚಿಸಲು, ಸಲಹೆ ಕೇಳಲು ಸಚಿವರು ಸಭೆ ಕರೆದಿದ್ದರು. ಆದರೆ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಬಿಟ್ಟರೆ ಬೇರಾವ ಶಾಸಕರೂ ಭಾಗವಹಿಸಿರಲಿಲ್ಲ.

ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಎಲ್ಲ ಶಾಸಕರಿಗೂ ಹೇಳಿದ್ದೆವು. ಕೆಲವರು ಗೋವಾ ಚುನಾವಣೆಗೆ ಹೋಗಿದ್ದಾರೆ ಎಂದರು.

ಸಚಿವ ಉಮೇಶ ಕತ್ತಿ ನೇತೃತ್ವದಲ್ಲಿ ಈಚೆಗೆ ನಡೆದ ಪಕ್ಷದ ಮುಖಂಡರ ಸಭೆಯ ಕುರಿತು ಪ್ರತಿಕ್ರಿಯಿಸಿದ ಅವರು, ಜಿಲ್ಲೆಯಲ್ಲಿ ಪಕ್ಷದಲ್ಲಿ ಯಾವ ಬಣವೂ ಇಲ್ಲ. ಬಜೆಟ್ ಹಿನ್ನೆಲೆಯಲ್ಲಿ ನಾಯಕರು ಸಭೆ ನಡೆಸಿರಬಹುದು. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.