ADVERTISEMENT

ಬೆಳಗಾವಿ ಜಿಲ್ಲೆಯ ಎಂಟು ಕ್ಷೇತ್ರ ಅತಂತ್ರ ಫಲಿತಾಂಶ: 5 ಕ್ಷೇತ್ರಗಳಲ್ಲಿ ಅರಳಿದ ಕಮಲ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2021, 13:34 IST
Last Updated 30 ಡಿಸೆಂಬರ್ 2021, 13:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ಜಿಲ್ಲೆಯ ವಿವಿಧ ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆ ಫಲಿತಾಂಶ ಗುರುವಾರ ಪ್ರಕಟಗೊಂಡಿದ್ದು, 5 ಕ್ಷೇತ್ರಗಳಲ್ಲಿ ಕಮಲ ಅರಳಿದೆ. 3 ಕ್ಷೇತ್ರಗಳಲ್ಲಿ ಮತದಾರ ಕಾಂಗ್ರೆಸ್‌ ಕೈಹಿಡಿದಿದ್ದಾನೆ. ಪಕ್ಷೇತರರಿಗೆ ಮಣೆ ಹಾಕಿದ್ದರಿಂದ 8 ಕ್ಷೇತ್ರಗಳ ಫಲಿತಾಂಶ ಅತಂತ್ರವಾಗಿದೆ.

ವಿಧಾನ ಪರಿಷತ್‌ ಚುನಾವಣೆ ಬೆನ್ನಲ್ಲೆ, ಈ ಚುನಾವಣೆ ನಡೆದಿದ್ದರಿಂದ ಗಡಿಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದವು. ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಕೊನೇ ಕ್ಷಣದವರೆಗೂ ಕಸರತ್ತು ನಡೆಸಿದ್ದರು. 301 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 902 ಅಭ್ಯರ್ಥಿಗಳು ಕಣದಲ್ಲಿದ್ದರು. ಈ ಪೈಕಿ ಬಿಜೆಪಿಯ 109, ಕಾಂಗ್ರೆಸ್‌ನ 97 ಹಾಗೂ 94 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಶೇಡಬಾಳ ಪಟ್ಟಣ ಪಂಚಾಯ್ತಿಯಲ್ಲಿ ಮಾತ್ರ ಜೆಡಿಎಸ್‌ ತನ್ನ ಖಾತೆ ತೆರೆದಿದೆ.

ಬೆಳಿಗ್ಗೆ 8 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು. ತಮ್ಮ ಅಭ್ಯರ್ಥಿ ಗೆಲ್ಲುತ್ತಿದ್ದಂತೆ ಪಕ್ಷದ ಕಾರ್ಯಕರ್ತರು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿದರು. ಗುಲಾಲು ಎರಚಿ ಸಂಭ್ರಮಿಸಿದರು.

ADVERTISEMENT

ನಾಲ್ವರು ಅವಿರೋಧ ಆಯ್ಕೆಯಾಗಿದ್ದರು: ಮುಗಳಖೋಡ ಪುರಸಭೆಯಲ್ಲಿ 22ನೇ ವಾರ್ಡಿನಿಂದ ಕಾಂಗ್ರೆಸ್‌ ಅಭ್ಯರ್ಥಿ ಅಂಜಲಿ ಕುಲಗೋಡ ಹಾಗೂ ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯ್ತಿಯಲ್ಲಿ 10, 12 ಮತ್ತು 13ನೇ ವಾರ್ಡ್‌ಗಳಿಂದ ಕ್ರಮವಾಗಿ ಪಕ್ಷೇತರ ಅಭ್ಯರ್ಥಿಗಳಾದ ಸುಶೀಲಾ ಗಣಾಚಾರಿ, ಸಮೀರ್‌ ಪಟೇಲ್‌ ಹಾಗೂ ಪರ್ವೀನ್‌ ನಬೂವಾಲೆ ಅವಿರೋಧ ಆಯ್ಕೆಯಾಗಿದ್ದರು. ಅಲ್ಲದೆ, ಮೂಡಲಗಿ ಪುರಸಭೆ ವಾರ್ಡ್‌ ಸಂಖ್ಯೆ 9ಕ್ಕೆ ಉಪಚುನಾವಣೆ ನಿಗದಿಯಾಗಿತ್ತು. ಅಲ್ಲಿ ಬಿಜೆಪಿ ಅಭ್ಯರ್ಥಿ ಈರಪ್ಪ ಮುನ್ಯಾಳ ಅವಿರೋಧ ಆಯ್ಕೆಯಾಗಿದ್ದರು. ಅಧಿಕೃತ ಘೋಷಣೆ ಮಾತ್ರ ಬಾಕಿ ಇತ್ತು.

ಎಲ್ಲೆಲ್ಲಿ ಯಾರಿಗೆ ಬಹುಮತ?: ಮುಗಳಖೋಡ, ಹಾರೂಗೇರಿ ಪುರಸಭೆಗಳು, ಶೇಡಬಾಳ, ಕಂಕಣವಾಡಿ ಹಾಗೂ ಚನ್ನಮ್ಮ ಕಿತ್ತೂರು ಪಟ್ಟಣ ಪಂಚಾಯ್ತಿಗಳಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ದೊರೆತಿದೆ. ಅಥಣಿ ಪುರಸಭೆ, ಯಕ್ಸಂಬಾ ಮತ್ತು ಐನಾಪುರ ‍ಪ.ಪಂ.ಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಗೆಲ್ಲುವಲ್ಲಿ ಸಫಲವಾಗಿದ್ದಾರೆ. ಮುನವಳ್ಳಿ, ಉಗಾರಖುರ್ದ್‌ ಪುರಸಭೆಗಳು, ಎಂ.ಕೆ.ಹುಬ್ಬಳ್ಳಿ, ಚಿಂಚಲಿ, ಬೋರಗಾಂವ, ನಾಗನೂರ, ಅರಭಾವಿ ಹಾಗೂ ಕಲ್ಲೋಳಿ ಪಟ್ಟಣ ಪಂಚಾಯ್ತಿಗಳಲ್ಲಿ ಫಲಿತಾಂಶ ಅತಂತ್ರವಾಗಿದೆ. ಎಂ.ಕೆ.ಹುಬ್ಬಳ್ಳಿ, ಬೋರಗಾಂವ ಹಾಗೂ ನಾಗನೂರ ಪಟ್ಟಣ ಪಂಚಾಯ್ತಿಗಳಲ್ಲಿ ಗೆದ್ದವರೆಲ್ಲರೂ ಪಕ್ಷೇತರರೇ ಎಂಬುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.