ADVERTISEMENT

MES ಹಲ್ಲಿಲ್ಲದ ಹಾವು ಇದ್ದಂತೆ: ಕರಾಳ ದಿನ ಆಚರಣೆಗೆ ಅನುಮತಿ ಕೊಡಬೇಡಿ; ನಾರಾಯಣಗೌಡ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 13:00 IST
Last Updated 12 ಅಕ್ಟೋಬರ್ 2025, 13:00 IST
<div class="paragraphs"><p>‘ಕನ್ನಡ ದೀಕ್ಷೆ’ ಕಾರ್ಯಕ್ರಮದಲ್ಲಿ&nbsp;ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿದರು</p></div>

‘ಕನ್ನಡ ದೀಕ್ಷೆ’ ಕಾರ್ಯಕ್ರಮದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿದರು

   

ಬೆಳಗಾವಿ: ‘ಈ ಬಾರಿ ಕರ್ನಾಟಕ ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಕರಾಳ ದಿನ ಆಚರಿಸಲು ಮಹಾರಾಷ್ಟ್ರ ಏಕೀಕರಣ ಸಮಿತಿಗೆ(ಎಂಇಎಸ್‌) ಯಾವ ಕಾರಣಕ್ಕೂ ಅನುಮತಿ ನೀಡಬಾರದು’ ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡ ಒತ್ತಾಯಿಸಿದರು.

ಇಲ್ಲಿನ ಗಾಂಧಿ ಭವನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ(ಟಿ.ಎ.ನಾರಾಯಣಗೌಡ ಬಣ) ಭಾನುವಾರ ಹಮ್ಮಿಕೊಂಡಿದ್ದ ‘ಕನ್ನಡ ದೀಕ್ಷೆ’ ಕಾರ್ಯಕ್ರಮ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ADVERTISEMENT

‘ಎಂಇಎಸ್‌ ಈಗ ಹಲ್ಲಿಲ್ಲದ ಹಾವು ಇದ್ದಂತೆ. ಅದಕ್ಕೆ ಕರಾಳ ದಿನ ಆಚರಿಸಲು ಜಿಲ್ಲಾಡಳಿತ ಮತ್ತು ಪೊಲೀಸರು ಅನುಮತಿ ನೀಡಿದರೆ, ಬೆಳಗಾವಿಯಲ್ಲಿ ರಣಾಂಗಣ ಸೃಷ್ಟಿಯಾಗುತ್ತದೆ’ ಎಂದು ಎಚ್ಚರಿಸಿದರು.

‘ರಾಜ್ಯೋತ್ಸವಕ್ಕೆ ಪರ್ಯಾಯವಾಗಿ ಎಂಇಎಸ್‌ ಕರಾಳ ದಿನ ಆಚರಿಸಿದರೆ, ನಮ್ಮ ಸಂಘಟನೆ ಕಾರ್ಯಕರ್ತರು ಸುಮ್ಮನೆ ಬಿಡಬಾರದು. ನೀವು ಜೈಲಿಗೆ ಹೋದರೂ ಪರವಾಗಿಲ್ಲ. ನಿಮ್ಮನ್ನು ಹೊರತರಲು ನಾನಿದ್ದೇನೆ’ ಎಂದರು.

‘ಇಲ್ಲಿ ವಾಸಿಸುವವರು ಕನ್ನಡ, ಕರ್ನಾಟಕಕ್ಕೆ ತಲೆಬಾಗಿ, ನಾನು ಕನ್ನಡಿಗ ಎಂದು ಹೇಳಿಕೊಂಡು ಬದುಕಬೇಕು. ಇಲ್ಲದಿದ್ದರೆ ಮಹಾರಾಷ್ಟ್ರದತ್ತ ಮುಖಮಾಡಬೇಕು. ನಿಮಗೆ ಉಚಿತವಾಗಿ ಬಸ್‌, ರೈಲ್ವೆ ಸೇವೆ ಕಲ್ಪಿಸುತ್ತೇವೆ’ ಎಂದು ವಾಗ್ದಾಳಿ ನಡೆಸಿದರು.

‘ಬೆಳಗಾವಿಯಲ್ಲಿ ಹಲವು ದಶಕಗಳ ಹಿಂದೆ ಒಂದೇ ಕನ್ನಡ ಬಾವುಟ ಕಟ್ಟಲು ಮತ್ತು ಕನ್ನಡ ಮಾತನಾಡಲು ಹೆದರುವ ಪರಿಸ್ಥಿತಿ ಇತ್ತು. ಆದರೆ, ಇಂದು ಲಕ್ಷಾಂತರ ಕನ್ನಡ ಬಾವುಟಗಳು ಇಡೀ ನಗರದಲ್ಲಿ ರಾರಾಜಿಸುತ್ತಿವೆ. ಬೆಳಗಾವಿಯಲ್ಲಿ ಕನ್ನಡ ಗಟ್ಟಿಗೊಳಿಸುವಲ್ಲಿ ನಮ್ಮ ಸಂಘಟನೆ ಪಾತ್ರವೂ ದೊಡ್ಡದಿದೆ’ ಎಂದರು.

‘ಯಾವುದೇ ಭ್ರಷ್ಟಾಚಾರ ಮಾಡಿ ನಾನು ಕಾರಾಗೃಹ ಸೇರಿರಲಿಲ್ಲ. ಕನ್ನಡಕ್ಕಾಗಿ ಹೋರಾಡಿದ ನನ್ನ ಮೇಲೆ 42 ಪ್ರಕರಣಗಳಿವೆ. ಆದರೂ, ಹೋರಾಟದಿಂದ ಹಿಂದೆ ಸರಿದಿಲ್ಲ. ಕನ್ನಡ ಹೋರಾಟದ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ’ ಎಂದರು.

‘ನಾಡು–ನುಡಿ ರಕ್ಷಣೆಗಾಗಿ ಯುವಜನರನ್ನು ಹೋರಾಟದ ಹಾದಿಗೆ ತರಲು ಕನ್ನಡ ದೀಕ್ಷೆ ಕಾರ್ಯಕ್ರಮ ನಡೆಸಲಾಗುತ್ತಿದೆ’ ಎಂದು ಹೇಳಿದರು.

ಕಾಂಗ್ರೆಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ರಾಹುಲ್ ಜಾರಕಿಹೊಳಿ ಮಾತನಾಡಿದರು.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಣ್ಣವೀರಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ದೀಪಕ ಗುಡಗನಟ್ಟಿ ಇತರರಿದ್ದರು. ರಾಜ್ಯ ಘಟಕದ ಸಂಚಾಲಕ ಸುರೇಶ ಗವನ್ನವರ ಸ್ವಾಗತಿಸಿದರು.

ನಾವೆಲ್ಲರೂ ಕನ್ನಡಕ್ಕಾಗಿ ನಮ್ಮನ್ನು ಸಮರ್ಪಿಸಿಕೊಳ್ಳಬೇಕು. ನಾನು ಮೊದಲು ಕನ್ನಡಿಗ ಎಂಬುದನ್ನು ಈ ನೆಲದಲ್ಲಿ ವಾಸಿಸುವ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.
-ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹುಕ್ಕೇರಿ ಹಿರೇಮಠ
ಗಡಿಯಲ್ಲಿ ಕನ್ನಡಕ್ಕೆ ಅನ್ಯಾಯವಾದಗಲೆಲ್ಲ ಎಷ್ಟು ಜನಪ್ರನಿಧಿಗಳು ನೆರವಿಗೆ ಬಂದಿದ್ದಾರೆಯೋ ಗೊತ್ತಿಲ್ಲ. ಆದರೆ, ಟಿ.ಎ.ನಾರಾಯಣಗೌಡ ಅವರು ನೆರವಿಗೆ ಧಾವಿಸಿದ್ದಾರೆ. ಅವರು ನಿಜವಾದ ಕನ್ನಡದ ನಿಜವಾದ ಸೇವಕ.
-ಪ್ರಭು ಚನ್ನಬಸವ ಸ್ವಾಮೀಜಿ, ಮೋಟಗಿಮಠ, ಅಥಣಿ

‘ಕನ್ನಡ ದೀಕ್ಷೆ’ ಕಾರ್ಯಕ್ರಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.