ADVERTISEMENT

ವಿಧಾನಪರಿಷತ್‌ ಚುನಾವಣೆ: ಕವಟಗಿಮಠಗೆ ಬಿಜೆಪಿಯಿಂದ 3ನೇ ಬಾರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2021, 16:40 IST
Last Updated 19 ನವೆಂಬರ್ 2021, 16:40 IST
   

ಬೆಳಗಾವಿ: ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್‌ಗೆ ಡಿ. 10ರಂದು ನಡೆಯಲಿರುವ ಚುನಾವಣೆಯಲ್ಲಿ ಹಾಲಿ ಸದಸ್ಯ, ಮುಖ್ಯಸಚೇತಕರೂ ಆಗಿರುವ ಮಹಾಂತೇಶ ಕವಟಗಿಮಠ ಅವರಿಗೆ ಬಿಜೆಪಿ ಟಿಕೆಟ್‌ ಘೋಷಣೆಯಾಗಿದೆ.

ಈ ಹಿಂದಿನ ಎರಡು ಚುನಾವಣೆಗಳಲ್ಲಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಇದೀಗ 3ನೇ ಬಾರಿಗೂ ಪಕ್ಷ ಅವರಿಗೆ ಮಣೆ ಹಾಕಿದೆ.

ಹಿಂದಿನಿಂದಲೂ ಟಿಕೆಟ್‌ಗೆ ಅವರು ಹೆಸರಷ್ಟೆ ಪ್ರಮುಖವಾಗಿ ಕೇಳಿಬರುತ್ತಿತ್ತು. ಪಕ್ಷದ ಮುಖಂಡರ ಅಥವಾ ಆಕಾಂಕ್ಷಿಗಳಿಂದ ಹೆಚ್ಚಿನ ಪೈಪೋಟಿ ಏನೂ ಕಂಡುಬಂದಿರಲಿಲ್ಲ. ಹೀಗಾಗಿ, ಅವರು ಹಲವು ದಿನಗಳಿಂದ ಪ್ರಚಾರ ಆರಂಭಿಸಿದ್ದಾರೆ. ಅವರ ಪರವಾಗಿ ಪಕ್ಷದ ಮುಖಂಡರು ಕೂಡ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಶುಕ್ರವಾರ ಅಧಿಕೃತವಾಗಿ ಟಿಕೆಟ್‌ ಘೋಷಣೆಯಾಗಿದೆ. ಒಮ್ಮತದ ಅಭ್ಯರ್ಥಿಯನ್ನಾಗಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಜಿಲ್ಲೆಯ ಸಚಿವರು, ಜನಪ್ರತಿನಿಧಿಗಳು ಹಾಗೂ ಪಕ್ಷದ ಪ್ರಮುಖರೊಂದಿಗೆ ನ.23ರಂದು ನಾಮಪತ್ರ ಸಲ್ಲಿಸುತ್ತೇನೆ. ಮತ್ತೊಮ್ಮೆ ಜನರ ಸೇವೆ ಮಾಡುವುದಕ್ಕೆ ಸ್ಪರ್ಧಿಸುವಂತೆ ‍ಪಕ್ಷದವರು ಅವಕಾಶ ಕಲ್ಪಿಸಿದ್ದಾರೆ. ವರಿಷ್ಠರಿಗೆ ಹಾಗೂ ಜಿಲ್ಲೆಯ ಎಲ್ಲ ನಾಯಕರಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ’ ಎಂದು ಕವಟಗಿಮಠ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.