ಖಾನಾಪುರ: ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ಬುಧವಾರ ಒಂದೇ ದಿನ ಒಂದೇ ಹುದ್ದೆಯನ್ನು ಇಬ್ಬರು ಅಧಿಕಾರಿಗಳು ನಿಭಾಯಿಸಿದರು!
ನ್ಯಾಯಾಲಯದ ಆದೇಶ ಪಾಲಿಸಲು ವಿಫಲರಾದ ಆರೋಪದಡಿ ಹೈಕೋರ್ಟ್ ಸೂಚನೆಯಂತೆ ಕಳೆದ ನ.14ರಂದು ಖಾನಾಪುರ ತಹಶೀಲ್ದಾರ ಹುದ್ದೆಯಿಂದ ಬಿಡುಗಡೆ ಹೊಂದಿದ್ದ ದುಂಡಪ್ಪ ಕೋಮಾರ; ಬುಧವಾರ ಸುಪ್ರೀಂಕೋರ್ಟ್ ಆದೇಶದೊಂದಿಗೆ ಮರಳಿ ತಮ್ಮ ಹುದ್ದೆಗೆ ಹಾಜರಾದರು. ಈ ಮುಂಚೆಯೇ ಸರ್ಕಾರ ಮಂಜುಳಾ ನಾಯಕ ಅವರನ್ನು ಇಲ್ಲಿಗೆ ನಿಯೋಜನೆ ಮಾಡಿದೆ.
ಒಬ್ಬರು ನ್ಯಾಯಾಲಯದ ಆದೇಶದಂತೆ ಹಕ್ಕು ಚಲಾಯಿಸಿದರು, ಇನ್ನೊಬ್ಬರು ಸರ್ಕಾರದ ನಿಯಮ ಪಾಲಿಸಿದರು.
ಬುಧವಾರ ಕಚೇರಿಗೆ ಬಂದ ದುಂಡಪ್ಪ ತಮ್ಮ ಬಳಿ ನ್ಯಾಯಾಲಯದ ಆದೇಶವಿದ್ದು ಹುದ್ದೆ ಬಿಟ್ಟುಕೊಡಬೇಕು ಎಂದು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಮಂಜುಳಾ, ತಮಗೆ ಸರ್ಕಾರ ಆದೇಶ ನೀಡಿ ಇಲ್ಲಿ ಪೋಸ್ಟಿಂಗ್ ನೀಡಿದೆ. ಮರಳಿ ಆದೇಶ ಬಂದರೆ ಬಿಟ್ಟುಕೊಡಲಾಗುವುದು ಎಂದರು.
ಮಂಜುಳಾ ಅವರು ಮಧ್ಯಾಹ್ನದ ಊಟಕ್ಕೆ ತರಳಿದಾಗ ದುಂಡಪ್ಪ ಕುರ್ಚಿ ಮೇಲೆ ಕುಳಿತು ಅಧಿಕಾರ ಚಲಾಯಿಸಿದರು. ಆಗ ಮಂಜುಳಾ ಅವರು ಗ್ರೇಡ್-2 ತಹಶೀಲ್ದಾರ ಕೊಠಡಿಯಲ್ಲಿ ಕುಳಿತು ಕರ್ತವ್ಯ ನಿರ್ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.