ಚನ್ನಮ್ಮನ ಕಿತ್ತೂರು: ‘ತಾಲ್ಲೂಕಿನ ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯನ್ನು ಮೂವರು ಶಾಸಕರು ಸೇರಿ ಖಾಸಗೀಕರಣ ಮಾಡಲು ಹೊರಟಿದ್ದಾರೆ. ರೈತರ ಕಾರ್ಖಾನೆಯನ್ನಾಗಿ ಉಳಿಸಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲಿದೆ’ ಎಂದು ರೈತರು ಮತ್ತು ಕಾರ್ಮಿಕರ ಹಿತರಕ್ಷಣಾ ಪೆನಲ್ ಮುಖ್ಯಸ್ಥ ನಾಸೀರ್ ಬಾಗವಾನ್ ಹೇಳಿದರು.
ಕಾರ್ಖಾನೆ ಆಡಳಿತ ಮಂಡಳಿಗೆ ನಡೆಯುವ ಚುನಾವಣೆ ಹಿನ್ನೆಲೆಯಲ್ಲಿ ಡೊಂಬರಕೊಪ್ಪ ನಿರೀಕ್ಷಣಾ ಮಂದಿರದಲ್ಲಿ ಗುರುವಾರ ಪೆನಲ್‌ನ ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದರು.
‘ಕಾರ್ಖಾನೆಯ ಅಧ್ಯಕ್ಷನಾಗಿದ್ದಾಗ ಕಾರ್ಮಿಕರ ವೇತನ ಮತ್ತು ಕಬ್ಬು ಪೂರೈಕೆ ಮಾಡಿದ ರೈತರ ಬಿಲ್ ಅನ್ನು ನಿಗದಿತ ಅವಧಿಗೆ ನೀಡಲಾಗಿತ್ತು. ಈ ಭಾಗದ ರಾಜಕಾರಣಿಗಳು, ಕಾರ್ಖಾನೆಯ ಕೆಲ ನಿರ್ದೇಶಕರ ಮೂಲಕ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರು. ಬಳಿಕ, ಕಾರ್ಖಾನೆ ಅವನತಿಯತ್ತ ಸಾಗಿತು’ ಎಂದರು.
‘ಕಾರ್ಖಾನೆ ಉಳಿಸುತ್ತೇವೆನ್ನುವ ಖಾನಾಪುರ ಶಾಸಕರು ಅವರ ತಾಲ್ಲೂಕಿನ ಸಹಕಾರ ಕ್ಷೇತ್ರದ ಕಾರ್ಖಾನೆಯನ್ನು ಏಕೆ ಉಳಿಸಲಿಲ್ಲ? ಅದನ್ನು ಗುತ್ತಿಗೆ ಆಧಾರದ ಮೇಲೆ ಏಕೆ ನೀಡಲಾಯಿತು’ ಎಂದು ಪ್ರಶ್ನಿಸಿದರು.
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ ಮಾಡಲಗಿ ಮಾತನಾಡಿ, ‘ಎರಡು ವರ್ಷಗಳಿಂದ ಕಾರ್ಖಾನೆಯ ಲೆಕ್ಕಪರಿಶೋಧನೆ ಆಗಿಲ್ಲ. ಹೀಗಿದ್ದಾಗ, ಎನ್‌ಸಿಡಿಸಿ ಹೇಗೆ ಸಾಲ ಕೊಡುತ್ತದೆ ಎಂಬುದನ್ನು ರೈತ ಸದಸ್ಯರು ಯೋಚಿಸಬೇಕು. ಕಾರ್ಖಾನೆ ಉಳಿಸುವ ಕಾಳಜಿಯುಳ್ಳ ನಮ್ಮ ಪೆನಲ್ ಸದಸ್ಯರನ್ನು ಆಯ್ಕೆ ಮಾಡಬೇಕು’ ಎಂದು ಕೋರಿದರು.
ಪೆನಲ್‌ನಿಂದ ಸ್ಪರ್ಧಿಸಿರುವ 15 ನಿರ್ದೇಶಕರು, ಜೆಡಿಎಸ್ ಹಾಗೂ ಬಿಜೆಪಿ ಮುಖಂಡರು ಇದ್ದರು.
‘ನಕಲಿ ಮತದಾನದ ಶಂಕೆ’
‘ಕಾರ್ಖಾನೆಯಲ್ಲಿ 17000 ರೈತ ಸದಸ್ಯರಿದ್ದಾರೆ. ಈ ಪೈಕಿ 3500ಕ್ಕಿಂತಲೂ ಹೆಚ್ಚು ಸದಸ್ಯರು ನಿಧನರಾಗಿದ್ದಾರೆ. ಇವರ ಹೆಸರಿನಲ್ಲಿ ಬೇರೊಂದು ಪೆನಲ್ ಮುಖಂಡರು ನಕಲಿ ಮತದಾನ ಮಾಡಿಸುವ ಸಂಶಯವಿದೆ’ ಎಂದು ಶಂಕರ ಮಾಡಲಗಿ ದೂರಿದರು. ‘ಕಿತ್ತೂರು ಬಿಟ್ಟು ಬೇರೆ ತಾಲ್ಲೂಕಿನ ಪೊಲೀಸರನ್ನು ಚುನಾವಣಾ ಬಂದೋಬಸ್ತ್‌ಗೆ ನಿಯೋಜಿಸಬೇಕು. ಏನಾದರೂ ಅನಾಹುತ ಸಂಭವಿಸಿದರೆ ಜಿಲ್ಲಾಡಳಿತವೇ ಹೊಣೆ ಹೊರಬೇಕು’ ಎಂದು ನಾಸೀರ್ ಬಾಗವಾನ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.