ಬೆಳಗಾವಿ: ಸುತ್ತಲೂ ಬೆಟ್ಟ– ಗುಡ್ಡಗಳ ಸಾಲು, ಅದಕ್ಕೆ ಅಂಟಿಕೊಂಡು ಮೈಚಾಚಿದ ಹಸಿರು ವನಸಿರಿ. ಮಧ್ಯದಲ್ಲೊಂದು ಆಳವಾದ ವಿಶಾಲ ಕಂದಕ. ಸುತ್ತಲಿಂದ ಹನಿಹನಿಯಾಗಿ ಹರಿದು ಬರುವ ನೀರು ಏಕಾಏಕಿ ಜಲಪಾತವಾಗಿ ಭೋರ್ಗರೆಯುವ ಪರಿ. ಪ್ರಕೃತಿ ಮಾತೆ ಸೃಷ್ಟಿಸಿದ ವಿಸ್ಮಯದಂತೆ ಇದೆ ಈ ಜಲಪಾತ. ಕಲ್ಲು ಬಂಡೆಗಳನ್ನು ಸೀಳುತ್ತ ಓಡುವ ಈ ನೀರನ್ನು ನೋಡಲು ಜನರ ದಂಡೇ ಸೇರುತ್ತಿದೆ.
ಬೆಳಗಾವಿಯಿಂದ 18 ಕಿ.ಮೀ ದೂರದಲ್ಲಿರುವ ಕಿತವಾಡ ಜಲಪಾತ ಮಹಾರಾಷ್ಟ್ರದ ಗಡಿಗೆ ಅಂಟಿಕೊಂಡಿದೆ. ಇದರ ಹಿನ್ನೀರು ಕರ್ನಾಟಕದಲ್ಲಿದ್ದರೆ ಜಲಪಾತ ಮಹಾರಾಷ್ಟ್ರದಲ್ಲಿದೆ. ಹಂದಿಗುಂದ ಗ್ರಾಮದಿಂದ ಒಳಗೆ 5 ಕಿ.ಮೀ ಸಾಗಿದರೆ ರಮ್ಯ ರೋಚಕ ಜಲತಾಣ ಚುಂಬಕದಂತೆ ಆಲಿಂಗಿಸುತ್ತದೆ.
ಇದು ನೈಸರ್ಗಿಕವಾಗಿ ಸೃಷ್ಟಿಯಾದ ಜಲಪಾತವಲ್ಲ. ಮೂರು ದಶಕಗಳ ಹಿಂದೆ ಇಲ್ಲಿ ಕಲ್ಲು ಗಣಿಗಾರಿಕೆ ನಡೆಯಿತು. ಗುಡ್ಡವೆಲ್ಲ ಕರಗಿ ಆಳವಾದ ಕಂದಕ ನಿರ್ಮಾಣವಾಯಿತು. ಗಣಿಗಾರಿಕೆ ಮುಗಿದ ಮೇಲೆ ಬೆಟ್ಟದ ನೀರು ಸಂಗ್ರಹವಾಗಿ ಬೃಹತ್ ಕೆರೆಯಾಗಿ ನಿರ್ಮಾಣವಾಗಿದೆ.
ಕೆರೆ ತುಂಬಿ ಉಕ್ಕೇರುವ ನೀರು 40 ಅಡಿಗಳಷ್ಟು ಆಳಕ್ಕೆ ಧುಮುಕಿ ಜಲಪಾತ ಸೃಷ್ಟಿಯಾಗಿದೆ. ಹಿಂದಿನಿಂದ ನೋಡಿದರೆ ಕೆರೆಯಿಂದ ಹರಿದು ಹೋಗುವ ನೀರು ಏಕಾಏಕಿ ನೆಲದಲ್ಲಿ ಮುಳುಗಿ ಮಾಯವಾದಂತೆ ಕಾಣಿಸುತ್ತದೆ. ಮುಂದಿನಿಂದ ನೋಡಿದರೆ ಧುಮ್ಮಿಕ್ಕುವ ನೀರು ಮಾತ್ರ ಕಾಣಿಸುತ್ತದೆ. ಅದರ ಒಡಲು ಮಾಯವಾಗುತ್ತದೆ. ಇದೇ ಈ ಜಲಪಾತದ ವಿಶೇಷ ನೋಟ.
ಒಂದಿಡೀ ದಿನದ ಸಮಯವನ್ನು ಆನಂದದಿಂದ ಕಳೆಯಲು ಏನು ಬೇಕೋ ಎಲ್ಲವೂ ಇಲ್ಲಿದೆ. ವಿಶಾಲವಾದ ಹಸಿರು ನೆಲದ ಮೇಲೆ ಕುಳಿತು ಊಟ ಮಾಡಲು, ಆಟವಾಡಲು, ನೀರಿನಲ್ಲಿ, ಕುಣಿಯಲು, ಕುಳಿತುಕೊಳ್ಳಲು, ಮಲಗಲು, ಆಟವಾಡಲು ಸಾಧ್ಯವಿದೆ. ಪಿಕ್ನಿಕ್ ಸ್ಪಾಟ್ ಆಗಿರುವ ಇಲ್ಲಿಗೆ ಊಟ, ಬಟ್ಟೆಗಳನ್ನು ಕಟ್ಟಿಕೊಂಡು ಕುಟುಂಬ ಸಮೇತ ಬಂದು ಕಲಾ ಕಳೆಯುವವರೇ ಹೆಚ್ಚು.
ಯುವಕ– ಯುವತಿಯರು ಅಡುಗೆ ಸಾಮಗ್ರಿಗಳನ್ನು ತಂದು, ಇಲ್ಲಿಯೇ ಸಿದ್ಧಪಡಿಸಿ ಊಟ ಮಾಡುವುದು ಇನ್ನೂ ಸೊಗಸು. ವಿಶಾಲವಾದ ಕೆರೆಯಲ್ಲಿ ಈಜಾಡುತ್ತ ಸಂಭ್ರಮಿಸಲೂ ಅವಕಾಶವಿದೆ. ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರೂ ಇಲ್ಲಿ ಜಲವೈಭವದ ಮಜಾ ಪಡೆಯಬಹುದು.
ಸೌದಿಯಲ್ಲಿ ಇಂಥ ಹಸಿರು ವನಸಿರಿ ಸಿಗುವುದಿಲ್ಲ. ಬೆಳಗಾವಿಗೆ ಬಂದಾಗ ನಿಸರ್ಗ ಸೌಂದರ್ಯ ಸವಿಯುತ್ತೇನೆ. ನಮ್ಮೂರಿನ ಹತ್ತಿರದಲ್ಲೇ ಇಂಥ ಸುಂದರ ಜಲತಾಣ ಇರುವುದು ಕಂಡು ಖುಷಿಯಾಗಿದೆ.– ಗೀತಾಂಜಲಿ ಘೋರ್ಪಡೆ, ಸೌದಿ ಅರೆಬಿಯಾ ನಿವಾಸಿ
ಮಕ್ಕಳಾದಿಯಾಗಿ ಕುಟುಂಬದ ಎಲ್ಲರೂ ಸಂಭ್ರಮಪಡಲು ಕಿತವಾಡ ಜಲಪಾತ ಹೇಳಿಮಾಡಿಸಿದ ಜಾಗ. ಸುತ್ತಲಿನ ಹಸಿರುವ ವನ ಚೇತೋಹಾರಿಯಾಗಿದೆ.– ಐಶ್ವರ್ಯ ಭಟ್, ಬೆಳಗಾವಿ ನಿವಾಸಿ
ಆಯ ತಪ್ಪಿದರೆ ಅಪಾಯ ತಪ್ಪಿದ್ದಲ್ಲ
ಕಿತವಾಡ ‘ನೀರ ಸುಂದದರಿಯ’ ಅಂದ ನೀಡಲು ಒಂದು ದಡದಿಂದ ಇನ್ನೊಂದು ದಡಕ್ಕೆ ಸಾಗಲು ಗಟ್ಟಿಮುಟ್ಟಾದ ಸೇತುವೆ ನಿರ್ಮಿಸಲಾಗಿದೆ. ಇದರ ಮೇಲಿಂದ ಜಲಪಾತ ಕೆರೆ ಹಾಗೂ ಸುತ್ತಲಿನ ದಟ್ಟಾರಣ್ಯದ ಸೊಬಗು ಕಣ್ತುಂಬಿಕೊಳ್ಳಬಹುದು. ಆದರೆ ತುಂಬ ಕಡಿದಾದ ಆಳದಲ್ಲಿ ನುಸುಳುವ ಜಲಪಾತದ ತಳಕ್ಕೆ ಹೋಗಲು ವ್ಯವಸ್ಥೆ ಇಲ್ಲ. ಕಲ್ಲುಬಂಡೆಗಳ ಸಂದಿಯಲ್ಲೇ ಜಾರಿಕೊಂಡು ಇಳಿಯಬೇಕು. ಆಯ ತಪ್ಪಿದರೆ ಅಪಾಯ ತಪ್ಪಿದ್ದಲ್ಲ. ಜಲಪಾತಕ್ಕೆ ಹೋಗಲು ಸರಿಯಾದ ರಸ್ತೆ ಕೆಳಕ್ಕೆ ಇಳಿದು ನೀರಿನಲ್ಲಿ ಮಿಂದೇಳಲು ಮೆಟ್ಟಿಲು ನಿರ್ಮಿಸಬೇಕು ಎಂಬ ಪ್ರವಾಸಿಗರ ಬೇಡಿಕೆ ಇನ್ನೂ ಈಡೇರಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.