ADVERTISEMENT

ಸಿದ್ದರಾಮಯ್ಯ 2ನೇ ಬಾರಿಗೆ ಸಿಎಂ ಆಗಲೆಂದು ಬಯಸಿದ್ದೆ: ಡಿ.ಕೆ. ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2020, 12:26 IST
Last Updated 18 ಡಿಸೆಂಬರ್ 2020, 12:26 IST
   

ಬೆಳಗಾವಿ: ‘ಸಿದ್ದರಾಮಯ್ಯ ಅವರು 2ನೇ ಬಾರಿಗೆ ಮುಖ್ಯಮಂತ್ರಿ ಆಗಲೆಂಬ ಬಯಕೆ ನಮಗಂತೂ ಇತ್ತು. ಆ ಬಗ್ಗೆ ಮೈಸೂರು ಜಿಲ್ಲೆಯ ಹುಣಸೂರಲ್ಲಿ ನಾನೇ ಭಾಷಣ ಮಾಡಿದ್ದೆ. ಪಕ್ಷದ ವರಿಷ್ಠರಾದ ರಾಹುಲ್ ಗಾಂಧಿ ಸೇರಿದಂತೆ ಎಲ್ಲರೂ ಸಂಪೂರ್ಣ ಆಶೀರ್ವಾದ ಮಾಡಿದ್ದರು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಇಲ್ಲಿ ಶುಕ್ರವಾರ ಹೇಳಿದರು.

‘2ನೇ ಬಾರಿಗೆ ನಾನು ಮುಖ್ಯಮಂತ್ರಿ ಆಗುವುದು ನಮ್ಮವರಿಗೇ ಬೇಡವಾಗಿತ್ತು’ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದವರು ನಾವು. ಯಾವ ದೃಷ್ಟಿಯಲ್ಲಿ ಹೇಳಿಕೆ ನೀಡಿದ್ದಾರೆ, ಆಂತರಿಕವಾಗಿ ಏನಾಯಿತೋ ಗೊತ್ತಿಲ್ಲ. ಅಧ್ಯಯನ ಮಾಡಲು ಹೋಗಿಲ್ಲ’ ಎಂದರು.

‘ಅವರು ಯಾರದಾದರೂ ಹೆಸರು ಪ್ರಸ್ತಾಪಿಸಿದ್ದರೆ ಪ್ರತಿಕ್ರಿಯಿಸಬಹುದಿತ್ತು. ಜನರಲ್ ಆಗಿ ಹೇಳಿದರೆ ನಾವು ಹೇಳಕ್ಕಾಗತ್ತಾ?’ ಎಂದು ಕೇಳಿದರು.

ADVERTISEMENT

‘ಸಿದ್ದರಾಮಯ್ಯ ಅವರನ್ನು ಎಲ್ಲರೂ ಬೆಂಬಲಿಸಿದ್ದರಿಂದಲೇ ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಸಾಧ್ಯವಾಯಿತು. ಎಸ್.ಎಂ. ಕೃಷ್ಣ ಅವರು ಎರಡು ಕಡೆ ನಿಲ್ಲೋಕೆ ಬಿಟ್ಟಿರಲಿಲ್ಲ’ ಎಂದರು.

‘ಅವರು ಹಿರಿಯ ರಾಜಕಾರಣಿ ಇದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲಿಗೆ ಕಾರಣವನ್ನು ಅವರೇ ಹುಡುಕುತ್ತಾರೆ. ಕರ್ಮಭೂಮಿಯಲ್ಲಿ ಯಾರಿಗೆ ಸಹಾಯ ಮಾಡಿರುತ್ತೇವೆಯೋ, ಅವರಿಂದಲೇ ತೊಂದರೆ ಆದಾಗ ನೋವಾಗುತ್ತದೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.