ADVERTISEMENT

ಪ್ರತಿ ಮಾರಾಟದಲ್ಲಿ ಕೈ ತುಂಬ ಸಂಪಾದನೆ

ಮೋದಗಾ ಗ್ರಾಮದ ಪ್ರಗತಿಪರ ರೈತ ದಂಪತಿಯ ರೇಷ್ಮೆ ಪ್ರೇಮ

ರುದ್ರಗೌಡ ಪಾಟೀಲ
Published 24 ಜೂನ್ 2019, 20:00 IST
Last Updated 24 ಜೂನ್ 2019, 20:00 IST
ರೇಷ್ಮೆ ಹುಳುಗಳ ಜೊತೆ ಅಪ್ಪಣ್ಣ ಕಾಳೋಜಿ
ರೇಷ್ಮೆ ಹುಳುಗಳ ಜೊತೆ ಅಪ್ಪಣ್ಣ ಕಾಳೋಜಿ   

ಸಾಂಬ್ರಾ: ಇಲ್ಲಿಗೆ ಸಮೀಪದ ಮೋದಗಾ ಗ್ರಾಮದ ಪ್ರಗತಿಪರ ರೈತ ದಂಪತಿಗಳಾದ ಅಪ್ಪಣ್ಣ ಕಾಳೋಜಿ ಹಾಗೂ ಲಕ್ಷ್ಮಿ ಅವರು ರೇಷ್ಮೆ ಕೃಷಿಯನ್ನು ಕಳೆದ 25 ವರ್ಷಗಳಿಂದ ಯಶಸ್ವಿಯಾಗಿ ಮಾಡಿಕೊಂಡು ಬಂದಿದ್ದಾರೆ. ರೇಷ್ಮೆ ಹುಳು ತಿನ್ನುವ ಹಿಪ್ಪುನೆರಳೆ ಸೊಪ್ಪನ್ನು ತಾವೇ ಬೆಳೆಯುವುದರ ಜೊತೆಗೆ ಹುಳುಗಳನ್ನು ಸಾಕಾಣಿಕೆ ಮಾಡಿ, ಗೂಡು ತಯಾರಿಸುತ್ತಾರೆ.

ತಮಗಿರುವ 8 ಎಕರೆ ಜಮೀನಿನಲ್ಲಿ 3 ಎಕರೆ ಜಮೀನಿನಲ್ಲಿ ಹಿಪ್ಪುನೆರಳೆ ಸೊಪ್ಪು ಬೆಳೆಸುತ್ತಾರೆ. ಇದರಲ್ಲಿ ಎರಡು ಭಾಗಗಳನ್ನಾಗಿ ಮಾಡಿ, 45 ದಿನಗಳಲ್ಲಿ ಬೆಳೆ ಬರುವಂತೆ ಬೆಳೆಸುತ್ತಾರೆ. ಒಂದೂವರೆ ಎಕರೆಯ ಒಂದೊಂದು ಭಾಗಕ್ಕೆ ವರ್ಷಕ್ಕೆ 10 ಟ್ರಾಕ್ಟರ್ ಸಗಣಿ ಗೊಬ್ಬರ, 8 ಚೀಲ ರಸಾಯನಿಕ ಗೊಬ್ಬರ, ಔಷಧಿ ಬಳಸುತ್ತಾರೆ. ನೀರಿನ ಸೌಕರ್ಯಕ್ಕಾಗಿ ಪಕ್ಕದಲ್ಲಿಯೇ ತೆರೆದ ಬಾವಿ ಹಾಗೂ ಕೊಳವೆ ಬಾವಿ ಕೊರೆಸಿದ್ದಾರೆ.

ಜಮೀನಿನ ತುಂಬ ಪೈಪ್‌ಲೈನ್‌ ಅಳವಡಿಸಿ, ತುಂತುರು ನೀರಾವರಿ ಕಲ್ಪಿಸಿದ್ದಾರೆ. ನೀರಿನ ಕೊರತೆ ಉಂಟಾಗದಂತೆ ನೋಡಿಕೊಂಡಿದ್ದಾರೆ.

ADVERTISEMENT

ರೇಷ್ಮೆ ಹುಳು ಸಾಕಲು 20 ಅಡಿ ಅಗಲ 50 ಅಡಿ ಉದ್ದದ ಶೆಡ್‌ ನಿರ್ಮಿಸಿದ್ದಾರೆ. ಪ್ರತಿಯೊಂದು ಬ್ಯಾಚ್‌ನಲ್ಲಿ 200 ರೇಷ್ಮೆ ಹುಳುಗಳನ್ನು ಬೆಳೆಸುತ್ತಾರೆ. ಹುಳುಗಳ ಮೊಟ್ಟೆಗಳನ್ನು ಬೆಂಗಳೂರಿನಿಂದ ತರಿಸಿಕೊಳ್ಳುತ್ತಾರೆ. ಮೊಟ್ಟೆಯಿಂದ ಹೊರಬಂದ ನಂತರ ಹುಳುಗಳಿಗೆ ತಿನ್ನಲು ಹಿಪ್ಪುನೆರಳೆ ಎಲೆಗಳನ್ನು ಚಿಕ್ಕದಾಗಿ ಕಟ್‌ ಮಾಡಿ ಹಾಕುತ್ತಾರೆ. ನಂತರ ಅವು ದೊಡ್ಡದಾದ ನಂತರ ಎಲೆಗಳನ್ನು ಯಥಾವತ್ತಾಗಿ ಹಾಕುತ್ತಾರೆ.‌

ರೇಷ್ಮೆ ಹುಳುಗಳು ದೊಡ್ಡದಾದ ನಂತರ ಗೂಡು ಹೆಣೆಯುತ್ತವೆ. ಇವುಗಳನ್ನು ಹುಬ್ಬಳ್ಳಿ ಸಮೀಪದ ರಾಯಾಪುರ ಮಾರುಕಟ್ಟೆಗೆ ತೆಗೆದುಕೊಂಡು ಹೋಗಿ, ಮಾರಾಟ ಮಾಡಿ ಬರುತ್ತಾರೆ. ಪ್ರತಿ ವರ್ಷ ಸರಾಸರಿಯಾಗಿ 9 ಬಾರಿ ರೇಷ್ಮೆ ಗೂಡುಗಳನ್ನು ಮಾರಾಟ ಮಾಡುತ್ತಾರೆ. ಪ್ರತಿ ಮಾರಾಟದಲ್ಲಿ ಸುಮಾರು ₹ 90 ಸಾವಿರ ವರೆಗೆ ಸಂಪಾದಿಸುತ್ತಾರೆ.

ಮಾಹಿತಿಗೆ 99003 77283 ಸಂಪರ್ಕಿಸಬಹುದು.

*
ರೇಷ್ಮೆ ಕೃಷಿ ಕೈಗೊಂಡಿರುವುದರಿಂದ ಸಂತೃಪ್ತಿಯಾಗಿದ್ದೇನೆ. ಕುಟುಂಬದ ಸದಸ್ಯರಷ್ಟೇ ಮಾಡಿಕೊಂಡು ಹೋಗುತ್ತೇವೆ. ಹೆಚ್ಚಿನ ಕೂಲಿಕಾರ್ಮಿಕರ ಅವಶ್ಯಕತೆ ಇಲ್ಲ. -ಅಪ್ಪಣ್ಣ ಕಾಳೋಜಿ, ರೇಷ್ಮೆ ಕೃಷಿಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.