ADVERTISEMENT

ಬೆಳಗಾವಿ | ಎಸ್‌.ಟಿಗೆ ಕುರುಬ ಸಮಾಜ: ವಿರೋಧ

ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ, ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಹೋರಾಟ ಸಮಿತಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 2:41 IST
Last Updated 18 ಸೆಪ್ಟೆಂಬರ್ 2025, 2:41 IST
ಕುರುಬ ಸಮುದಾಯವನ್ನು  ಎಸ್‌.ಟಿಗೆ ಸೇರಿಸಬಾರದು ಎಂದು ಆಗ್ರಹಿಸಿ, ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ಹಾಗೂ ಬೆಳಗಾವಿ ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಹೋರಾಟ ಸಮಿತಿ ವತಿಯಿಂದ ಬೆಳಗಾವಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು  ಪ್ರಜಾವಾಣಿ ವಾರ್ತೆ
ಕುರುಬ ಸಮುದಾಯವನ್ನು  ಎಸ್‌.ಟಿಗೆ ಸೇರಿಸಬಾರದು ಎಂದು ಆಗ್ರಹಿಸಿ, ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ಹಾಗೂ ಬೆಳಗಾವಿ ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಹೋರಾಟ ಸಮಿತಿ ವತಿಯಿಂದ ಬೆಳಗಾವಿಯಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು  ಪ್ರಜಾವಾಣಿ ವಾರ್ತೆ   

ಬೆಳಗಾವಿ: ‘ಕುರುಬ ಸಮುದಾಯವನ್ನು ಯಾವುದೇ ಕಾರಣಕ್ಕೂ ಪರಿಶಿಷ್ಟ ಪಂಗಡ (ಎಸ್‌.ಡಿ)ಕ್ಕೆ ಸೇರಿಸಬಾರದು ಎಂದು ಆಗ್ರಹಿಸಿ, ಕರ್ನಾಟಕ ಪರಿಶಿಷ್ಟ ಪಂಗಡ ವಾಲ್ಮೀಕಿ ರಾಜ್ಯ ಯುವ ಘಟಕ ಹಾಗೂ ಬೆಳಗಾವಿ ಜಿಲ್ಲಾ ಮಹರ್ಷಿ ವಾಲ್ಮೀಕಿ ನಾಯಕ ಹೋರಾಟ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಇಲ್ಲಿನ ರಾಣಿ ಚನ್ನಮ್ಮ ವೃತ್ತದಲ್ಲಿ ಸಮಾವೇಶಗೊಂಡ ಪ್ರತಿಭಟನೆಕಾರರು ಕೆಲಕಾಲ ಧರಣಿ ನಡೆಸಿದರು. ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಗೆ ಮನವಿ ಕೂಡ ಸಲ್ಲಿಸಿದರು. ಮೆರವಣಿಗೆಯುದ್ದಕ್ಕೂ ರಾಜ್ಯ ಸರ್ಕಾರದ ವಿರುದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು.

‘ಪರಿಶಿಷ್ಟ ಪಂಗಡ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ರಾಜಕೀಯ ಹಾಗೂ ಔದ್ಯೋಗಿಕವಾಗಿ ಹಿಂದುಳಿದಿದೆ. ಆದರೆ, ಕುರುಬ ಸಮುದಾಯ ಎಲ್ಲ ಕ್ಷೇತ್ರಗಳಲ್ಲೂ ಸದೃಢವಾಗಿದೆ. ಹೀಗಿರುವಾಗ ಸದೃಢ ಸಮುದಾಯವನ್ನು ಹಿಂದುಳಿದ ಎಸ್.ಟಿ ಪಟ್ಟಿಗೆ ಸೇರಿಸುವುದು ಸಂವಿಧಾನ ವಿರೋಧವಾಗಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಅನ್ಯ ಸಮುದಾಯಗಳನ್ನು ಎಸ್‌ಟಿಗೆ ಸೇರಿಸಬಾರದು’ ಎಂದು ಆಗ್ರಹಿಸಿದರು.

ADVERTISEMENT

‘ರಾಜ್ಯ ಸರ್ಕಾರದಿಂದ ಎಸ್.ಟಿ ಸಮುದಾಯಕ್ಕೆ ಸಮರ್ಪಕವಾಗಿ ಸೌಲಭ್ಯಗಳು ದೊರೆಯುತ್ತಿಲ್ಲ. ಅಲ್ಲದೆ, ಮಹರ್ಷಿ ವಾಲ್ಮೀಕಿ ನಿಗಮದಲ್ಲಿ ನಡೆದ ಬ್ರಹ್ಮಾಂಡ ಬ್ರಷ್ಟಾಚಾರದಿಂದ ನಮ್ಮ ಸಮುದಾಯ ಇನ್ನಷ್ಟು ಕುಗ್ಗಿ ಹೋಗಿದೆ. ಆದರೂ ಸಿದ್ದರಾಮಯ್ಯ ಅವರು ಅನ್ಯ ಸಮುದಾಯಗಳನ್ನು ಎಸ್‌.ಟಿ.ಗೆ ಸೇರಿಸುವುದು ಸರಿಯಲ್ಲ. ಈ ನಿರ್ಧಾರ ಕೈ ಬಿಡಬೇಕು. ಇಲ್ಲವಾದಲ್ಲಿ‌ ರಾಜ್ಯದಾದ್ಯಂತ ಉಗ್ರ ಹೋರಾಟ ಕೈಗೆತ್ತಿಕೊಳ್ಳಲಾಗುವುದು’ ಎಂದು ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಮಹೇಶ ಶಿಗೀಹಳ್ಳಿ ಎಚ್ಚರಿಸಿದರು.

ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಮಲ್ಲಿಕಾರ್ಜುನ ಹೆಗ್ಗನಾಯಕ, ಭಾವಕಣ್ಣ ಭಂಗ್ಯಾಗೋಳ, ಯಲ್ಲಪ್ಪ ಕೋಳೆಕಾರ, ಎಸ್.ಎಸ್. ಮೂಕನ್ನವರ, ಸಿದ್ದರಾಮ ಬಂಬರಗಿ, ಸುನಿಲ ನಾಯಕ, ಅರುಣ ಗಡಕರಿ, ಹಾಲಪ್ಪ ನಾಯಕ ವಿಕಾಸ ಗಾಡಿವಡ್ಡರ ಇತರರು ನೇತೃತ್ವ ವಹಿಸಿದ್ದರು.

ಮಹಾವಿಹಾರ ಬೌದ್ಧರಿಗೆ ನೀಡಲು ಆಗ್ರಹ

ಬೆಳಗಾವಿ: ಬಿಹಾರದಲ್ಲಿರುವ ಬೋಧಗಯಾ ಮಹಾವಿಹಾರವನ್ನು ಬೌದ್ಧ ಧರ್ಮೀಯರಿಗೆ ವಹಿಸಿಕೊಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ಬೆಳಗಾವಿ ಶಾಖೆ ನೇತೃತ್ವದಲ್ಲಿ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು. ಜಿಲ್ಲಾಧಿಕಾರಿ ಕಚೇರಿ ಮುಂದೆ ಸಮಾವೇಶಗೊಂಡ ಪ್ರತಿಭಟನೆಕಾರರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

‘ಮಹಾಬೋಧಿ ಮಹಾವಿಹಾರ ಬೌದ್ಧರಿಗೆ ಸೇರಬೇಕಾಗಿದದ್ದು. ಆದರೆ ಬಿಹಾರ ಸರ್ಕಾರ ರಚಿಸಿರುವ ಸಮಿತಿಯಲ್ಲಿ 9 ಸದಸ್ಯರ ಪೈಕಿ ನಾಲ್ವರು ಮಾತ್ರ ಬೌದ್ಧರಿದ್ದಾರೆ. ಇದರಿಂದಾಗಿ ಮಹಾವಿಹಾರದ ಧ್ಯೇಯಗಳಿಗೆ ಧಕ್ಕೆಯಾಗುತ್ತಿದೆ. ಮುಖ್ಯವಾಗಿ ಡಾ.ಬಿ.ಆರ್. ಅಂಬೇಡ್ಕರ್‌ ಮೊಮ್ಮಗ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾ ರಾಷ್ಟ್ರೀಯ ಕಾರ್ಯಾಧ್ಯಕ್ಷ ಡಾ.ಭೀಮರಾವ್ ಯಶವಂತ ಅಂಬೇಡ್ಕರ್‌ ಅವರಿಗೆ ಬಿಹಾರ ಸರ್ಕಾರ ವಹಿಸಿಕೊಡಬೇಕು’ ಎಂದು ಆಗ್ರಹಿಸಿದರು.

‘ಡಾ.ಅಂಬೇಡ್ಕರ್‌ ಜನ್ಮ ಪಡೆದ ಮಧ್ಯಪ್ರದೇಶದ ಮಹುವಿನಲ್ಲಿ ಭವ್ಯ ಸ್ಮಾರಕವಿದೆ. ಅದು ಅಂಬೇಡ್ಕರ್‌ ವಿಚಾರಧಾರೆಗೆ ವಿರುದ್ಧವಾಗಿ ನಡೆಯುತ್ತಿದೆ. ಇದರ ಉಸ್ತುವಾರಿಯನ್ನೂ ಬುದ್ಧಿಸ್ಟ್ ಸೊಸೈಟಿ ಆಫ್ ಇಂಡಿಯಾಗೆ ವಹಿಸಿಕೊಡಬೇಕು ಎಂದೂ ಮಧ್ಯಪ್ರದೇಶ ಸರ್ಕಾರವನ್ನು ಆಗ್ರಹಿಸಿದರು. ಮುಖಂಡರಾದ ಯಮನಪ್ಪ ಗಡಿನಾಯಕ ರಾಜು ಕಾಂಬಳೆ ಕಲ್ಲಪ್ಪ ಚೌಗಲೆ ಮಲ್ಲೇಶ ಚೌಗಲೆ ಸುರೇಖಾ ಕಾಂಬಳೆ ರೇಣುಕಾ ಸಾಲಿಮನಿ ಕವಿತಾ ಕಾಂಬಳೆ ಸ್ಮಿತಾ ಸುಮಿತ್ರಾ ನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.