ADVERTISEMENT

ಬೆಳಗಾವಿ:ಕಾಂಗ್ರೆಸ್‌ ನಾಯಕ, ಸತೀಶ್‌ ಜಾರಕಿಹೊಳಿ ಸಹೋದರ ಲಖನ್‌ ಬಿಜೆಪಿ ಪರ ಪ್ರಚಾರ

ಬಿಜೆಪಿ ಸಚಿವತ್ರಯರ ಭೇಟಿ: ಉಪ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಕೋರಿಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2021, 11:07 IST
Last Updated 5 ಏಪ್ರಿಲ್ 2021, 11:07 IST
ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಲಖನ್ ಹೇಳಿಕೆ
ಬಿಜೆಪಿ ಪರ ಪ್ರಚಾರ ಮಾಡುವುದಾಗಿ ಲಖನ್ ಹೇಳಿಕೆ   

ಬೆಳಗಾವಿ: ಕಾಂಗ್ರೆಸ್‌ ಮುಖಂಡ ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಆ ಪಕ್ಷದ ಅಭ್ಯರ್ಥಿಯಾಗಿರುವ ಸತೀಶ ಜಾರಕಿಹೊಳಿ ಸಹೋದರ ಲಖನ್‌ ಜಾರಕಿಹೊಳಿ ಅವರನ್ನು ಸಚಿವರಾದ ಜಗದೀಶ ಶೆಟ್ಟರ್‌, ಉಮೇಶ ಕತ್ತಿ ಹಾಗೂ ಭೈರತಿ ಬಸವರಾಜ್‌ ಸೋಮವಾರ ಭೇಟಿಯಾಗಿ ಚರ್ಚಿಸಿರುವುದು ಅಚ್ಚರಿಗೆ ಕಾರಣವಾಗಿದೆ.

ಜಿಲ್ಲೆಯ ಗೋಕಾಕದ ನಿವಾಸದಲ್ಲಿ ಅವರನ್ನು ಭೇಟಿಯಾದ ಸಚಿವತ್ರಯರೊಂದಿಗೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಕೂಡ ಇದ್ದರು. ಮನೆಗೆ ಬಂದ ಅವರನ್ನು ಲಖನ್‌ ಹೂಗುಚ್ಛ ನೀಡಿ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಎಲ್ಲರೂ ರಹಸ್ಯವಾಗಿ ಮಾತುಕತೆ ನಡೆಸಿದರು. ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಲಾ ಸುರೇಶ ಅಂಗಡಿ ಅವರಿಗೆ ಬೆಂಬಲ ನೀಡಬೇಕು’ ಎಂದು ಈ ನಾಯಕರು ಕೋರಿದರು.

‘ನಮ್ಮ ಅಭ್ಯರ್ಥಿ ಪರವಾಗಿ ಎಲ್ಲ ಕಡೆಯೂ ನಾವು ಪ್ರಚಾರ ಮಾಡುತ್ತೇವೆ. ಅಂತೆಯೇ ಲಖನ್‌ ಜಾರಕಿಹೊಳಿ ಅವರ ಮನೆಗೂ ಬಂದು ಬೆಂಬಲ ಕೋರಿದ್ದೇವೆ. ಕಾಂಗ್ರೆಸ್‌ ಬಗ್ಗೆ ಅವರಿಗೆ ಬೇಸರವಿದೆ. ಈ ಬಗ್ಗೆ ಅವರೇ ಈಚೆಗೆ ಹೇಳಿಕೆ ನೀಡಿದ್ದಾರೆ. ಹೀಗಾಗಿ, ಅವರನ್ನು ಬಂದು ಬೇಟಿಯಾಗಿ ಬೆಂಬಲ ಕೇಳಿದ್ದೇವೆ. ನಿರ್ಧಾರವನ್ನು ಅವರೇ ಕೈಗೊಳ್ಳಬೇಕು’ ಎಂದು ಶೆಟ್ಟರ್‌ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯಿಸಿದರು.

ADVERTISEMENT

‘ರಮೇಶ ಹಾಗೂ ಬಾಲಚಂದ್ರ ಜಾರಕಿಹೊಳಿ ಯಾವ ಪಕ್ಷದಲ್ಲಿದ್ದಾರೆಯೋ ಅವರ ಪರ ನಾನು ಕೆಲಸ ಮಾಡಬೇಕಾಗುತ್ತದೆ. ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದ್ದೀರಿ. ದೊಡ್ಡ ನಾಯಕರು ನಮ್ಮ ಮನೆಗೆ ಬಂದಿದ್ದಾರೆ. ನಾನು ಬಹಳ ಚಿಕ್ಕವನು. ಅವರು ಹೇಳಿದಂತೆ ಮಾಡಬೇಕಾಗುತ್ತದೆ. ಕಷ್ಟದಲ್ಲಿದ್ದಾಗ ಅವರಿಗೆ ಸಹಾಯ ಮಾಡಲೇಬೇಕಾಗುತ್ತದೆ. ದೊಡ್ಡವರು ಬಂದಾಗ ಇಲ್ಲ ಎನ್ನಲಾಗುವುದಿಲ್ಲ. ಬಿಜೆಪಿ ಪರವಾಗಿ ಮಾಡೇ ಮಾಡುತ್ತೇವೆ. ಆ ಪಕ್ಷಕ್ಕೆ ಒಳ್ಳೆಯದಾಗುತ್ತದೆ’ ಎಂದು ಲಖನ್ ಹೇಳಿದರು.

‘ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ಆ ಯುವತಿಯ ತಂದೆ–ತಾಯಿಯೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಹೀಗಾಗಿ, ನೈತಿಕ ಹೊಣೆ ಹೊತ್ತು ಶಿವಕುಮಾರ್‌ ರಾಜೀನಾಮೆ ನೀಡಬೇಕು’ ಎಂದು ಲಖನ್‌ ಈಚೆಗೆ ಆಗ್ರಹಿಸಿ ತಮ್ಮದೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ವಿರುದ್ಧ ತಿರುಗಿಬಿದ್ದಿದ್ದರು. ಸಿ.ಡಿ. ಪ್ರಕರಣದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರಮೇಶ ಜಾರಕಿಹೊಳಿ ಅವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಧೈರ್ಯ ತುಂಬಿದ್ದರು. ಇನ್ನೊಬ್ಬ ಸಹೋದರ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಪರವಾಗಿ ಗೋಕಾಕದಲ್ಲಿ ಇನ್ನೂ ಪ್ರಚಾರ ಕಾರ್ಯದಲ್ಲಿ ಭಾಗವಹಿಸಿರಲಿಲ್ಲ. ಈ ನಡುವೆ, ಬಿಜೆಪಿ ನಾಯಕರ ಭೇಟಿಯು ಕುತೂಹಲ ಮೂಡಿಸಿದೆ ಹಾಗೂ ಹಲವು ಲೆಕ್ಕಾಚಾರಗಳಿಗೂ ಕಾರಣವಾಗಿದೆ. ಇದು ‘ಆಪರೇಷನ್ ಕಮಲ’ದ ಮುನ್ಸೂಚನೆಯೇ ಎನ್ನಲಾಗುತ್ತಿದೆ.

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಮ್ಮನನ್ನು (ಲಖನ್‌) ಗೋಕಾಕ ಕ್ಷೇತ್ರದಲ್ಲಿ ನಿಲ್ಲಿಸುತ್ತೇನೆ. ನಾನು ಕನಕಪುರದಲ್ಲಿ ಡಿ.ಕೆ. ಶಿವಕುಮಾರ್ ವಿರುದ್ಧ ಸ್ಪರ್ಧಿಸಿ, ಸೋಲಿಸುತ್ತೇನೆ’ ಎಂದು ರಮೇಶ ಜಾರಕಿಹೊಳಿ ಈಚೆಗೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಲಖನ್ ನಡೆ ಕುತೂಹಲ ಮೂಡಿಸಿದೆ.

ಅಲ್ಲಿನ ಜೆಡಿಎಸ್ ಅಶೋಕ ಪೂಜಾರಿ ಕಾಂಗ್ರೆಸ್‌ ಸೇರ್ಪಡೆ ಆಗುವುದಾಗಿ ಈಚೆಗೆ ತಿಳಿಸಿದ್ದಾರೆ. ಲಖನ್ ಹಾಗೂ ಅಶೋಕ ಇಬ್ಬರೂ ಗೋಕಾಕ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿಗಳಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.