ADVERTISEMENT

ಗೋಕಾಕದಲ್ಲಿ ಸ್ಪರ್ಧಿಸುತ್ತೇನೆ ಎಂದ ಲಕ್ಷ್ಮಿಗೆ ಸ್ವಾಗತ ಕೋರಿದ ರಮೇಶ್ ಜಾರಕಿಹೊಳಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2021, 9:44 IST
Last Updated 12 ಫೆಬ್ರುವರಿ 2021, 9:44 IST
ಶಾಸಕಿ ಲಕ್ಷ್ಮಿ ಹೆಬ್ಬಾಳಕರ - ಸಚಿವ ರಮೇಶ್ ಜಾರಕಿಹೊಳಿ
ಶಾಸಕಿ ಲಕ್ಷ್ಮಿ ಹೆಬ್ಬಾಳಕರ - ಸಚಿವ ರಮೇಶ್ ಜಾರಕಿಹೊಳಿ   

ಬೆಳಗಾವಿ: ‘ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಬಯಸಿದರೆ ಗೋಕಾಕ ಕ್ಷೇತ್ರದಿಂದ ನಾನೇ ಸ್ಪರ್ಧಿಸುತ್ತೇನೆ’ ಎಂದು ಇಲ್ಲಿನ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಇಲ್ಲಿ ಶುಕ್ರವಾರ ಹೇಳಿದರು.

‘ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಗ್ರಾಮೀಣ ಕ್ಷೇತ್ರ ಟಾರ್ಗೆಟ್ ಮಾಡುತ್ತಿದ್ದಾರೆಯೇ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದ ಲಕ್ಷ್ಮಿ, ‘ನನಗೆ ಉತ್ತರ ಕೊಡಲು ಜಾಸ್ತಿ ಸಮಯ ಬೇಕಿಲ್ಲ. ಅವರ ಆರೋಪಕ್ಕೆ ನಾನೇನು ಮೌನವಾಗಿಲ್ಲ. 2023ರ ಚುನಾವಣೆಯಲ್ಲಿ ಜನರಿಂದಲೇ ಉತ್ತರ ಕೊಡಿಸಲು ಕಾಯುತ್ತಿದ್ದೇನೆ’ ಎಂದು ಸವಾಲು ಹಾಕಿದರು.

‘ನನ್ನ ಕ್ಷೇತ್ರವನ್ನು ಅವರು ಟಾರ್ಗೆಟ್ ಮಾಡಿದರೆ ನಾನು ಗೋಕಾಕ ಟಾರ್ಗೆಟ್ ಮಾಡುತ್ತೇನೆ’ ಎಂದರು.

ADVERTISEMENT

ಗ್ರಾಮೀಣ ಕ್ಷೇತ್ರದ ಗ್ರಾಮ ಪಂಚಾಯ್ತಿ ಸದಸ್ಯರಿಗೆ ಬಿಜೆಪಿಯಿಂದ ಸನ್ಮಾನಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಸರ್ಕಾರವನ್ನು ಬೀಳಿಸಿದವರಿಗೆ ಗ್ರಾ.ಪಂ. ಯಾವ ಲೆಕ್ಕ? ಶಾಸಕರನ್ನೇ ಎಸ್ಕೇಪ್ ಮಾಡಿದವರಲ್ಲವೇ ಅವರು? ನಾಲ್ಕೈದು ರಾಜ್ಯಗಳಲ್ಲಿ ಶಾಸಕರನ್ನು ಹೈಜಾಕ್ ಮಾಡಿಯೇ ಬಿಜೆಪಿಯವರು ಅಧಿಕಾರಕ್ಕೆ ಬಂದಿದ್ದಾರೆ. ಅವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ?’ ಎಂದು ತಿರುಗೇಟು ನೀಡಿದರು.

ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ರಮೇಶ ಜಾರಕಿಹೊಳಿ, ‘ಅವರು ಗೋಕಾಕದಲ್ಲಿ ಸ್ಪರ್ಧಿಸುವುದಾದರೆ ಮೋಸ್ಟ್ ವೆಲ್‌ಕಮ್‌. ಪ್ರಜಾಪ್ರಭುತ್ವದಲ್ಲಿ ಎಲ್ಲಿ ಬೇಕಾದರೂ ಸ್ಪರ್ಧಿಸಲು ಎಲ್ಲರಿಗೂ ಹಕ್ಕಿದೆ. ಬರಲಿ, ಬಹಳ ಸಂತೋಷ. ಯಾರು ಹೇಗೆ ಎನ್ನುವುದು ಜನರಿಗೆ ಗೊತ್ತಿದೆ’ ಎಂದರು.

‘ನಾನು ಜಿಲ್ಲಾ ಉಸ್ತುವಾರಿ ಸಚಿವ. ಎಲ್ಲರ ಹಿತ ಕಾಯುವುದು ನನ್ನ ಜವಾಬ್ದಾರಿ. ಇದರ ಜೊತೆಯಲ್ಲೇ, ಯಾವ ಕ್ಷೇತ್ರದಲ್ಲಿ ಬಿಜೆಪಿ ಇಲ್ಲವೋ ಅಲ್ಲಿ ಗೆಲ್ಲಿಸಿಕೊಂಡು ಬರುವ ಕರ್ತವ್ಯವೂ ನನ್ನದಾಗಿದೆ. ಹೀಗಾಗಿ, ಗ್ರಾಮೀಣ ಸೇರಿದಂತೆ ಎಲ್ಲ ಕಡೆಗೂ ಗಮನ ಕೊಡಬೇಕಾಗುತ್ತದೆ. ಆದರೆ, ಹಸ್ತಕ್ಷೇಪ ಮಾಡುತ್ತಿಲ್ಲ. ಜನರೇ ಎಲ್ಲದಕ್ಕೂ ಉತ್ತರ ಕೊಡುತ್ತಾರೆ’ ಎಂದು ತಿರುಗೇಟು ನೀಡಿದರು.

‘ಜೆಡಿಎಸ್–ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಪತನವಾಗಿದ್ದೇಕೆ ಎಂಬ ಬಗ್ಗೆ ಅವರ ಗಾಡ್‌ಫಾದರ್‌ ಅನ್ನೇ ಕೇಳಿದರೆ ಒಳ್ಳೆಯದು’ ಎಂದು ಲಕ್ಷ್ಮಿಗೆ ಟಾಂಗ್ ಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.