
ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ಶಿಂಧೊಳ್ಳಿ ಗ್ರಾಮದಲ್ಲಿ ಮಂಗಳವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿದರು
ಬೆಳಗಾವಿ: ‘ಬಿಜೆಪಿಯವರು ಕೇವಲ ಭಾಷಣದಲ್ಲಿ ಹಿಂದೂ ಎನ್ನುತ್ತಿರುತ್ತಾರೆ. ಆದರೆ ಹಿಂದೂಗಳಿಗೆ ಏನೂ ಮಾಡುವುದಿಲ್ಲ. ನಾನು ಕೇವಲ ಭಾಷಣ ಮಾಡದೇ ಹಿಂದೂ ಸಂಸ್ಕೃತಿ ಉಳಿಸುತ್ತಿದ್ದೇನೆ. ಕ್ಷೇತ್ರದಲ್ಲಿ 152 ದೇವಸ್ಥಾನ ಕಟ್ಟಿಸಿದ್ದೇನೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಿಂಧೊಳ್ಳಿ ಗ್ರಾಮದಲ್ಲಿ ಮಂಗಳವಾರ ₹7 ಕೋಟಿ ವೆಚ್ಚದ ಕಾಂಕ್ರೀಟ್ ರಸ್ತೆ, ಚರಂಡಿ ನಿರ್ಮಾಣ, ಪೇವರ್ಸ್ ಅಳವಡಿಕೆ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
‘ಒಮ್ಮೆ ಅವಕಾಶ ಕೊಡಿ ಅಭಿವೃದ್ಧಿ ಮಾಡಿ ತೋರಿಸುತ್ತೇನೆ ಎಂದು ಏಳು ವರ್ಷದ ಹಿಂದೆ ಹೇಳಿದ್ದೆ. ಅದರಂತೆ ಅಭಿವೃದ್ಧಿ ಮಾಡಿ ತೋರಿಸಿದೆ. ಹಾಗಾಗಿ ಮತ್ತೊಮ್ಮೆ ಆಯ್ಕೆ ಮಾಡಿ ಮಂತ್ರಿಯಾಗಲು ಅವಕಾಶ ಮಾಡಿಕೊಟ್ಟಿದ್ದೀರಿ. ಗ್ರಾಮೀಣ ಕ್ಷೇತ್ರ ಬೆಳೆಸುತ್ತಿದ್ದೇನೆ, ಕ್ಷೇತ್ರ ಅಭಿವೃದ್ಧಿ ಪಥದಲ್ಲಿ ಹೋಗುತ್ತಿದೆ. ಈ ‘ಸ್ಪೀಡ್ ಕಟ್’ ಮಾಡಬೇಡಿ. ನನಗೆ ಸುಧಾರಣೆ ಮಾಡುವ ಅವಕಾಶ ಸಿಕ್ಕಿದೆ. ನಿಮಗೆ ಸುಧಾರಣೆ ಮಾಡಿಸಿಕೊಳ್ಳುವ ಅವಕಾಶ ಸಿಕ್ಕಿದೆ. ನೀವು ಮಗಳೆಂದು ಸ್ವೀಕಾರ ಮಾಡಿದ್ದೀರಿ. ನಾನು ನಿಮ್ಮ ಸೇವೆ ಮಾಡುತ್ತಿದ್ದೇನೆ’ ಎಂದರು.
‘ನಾನು ಆಗುವುದಿಲ್ಲ ಎಂದು ಕೈ ಕಟ್ಟಿ ಕುಳಿತುಕೊಳ್ಳುವ ಹೆಣ್ಣುಮಗಳಲ್ಲ. ಮನಸ್ಸಿದ್ದರೆ ಮಾರ್ಗ ಎನ್ನುವಂತೆ ಬೇರೆ ಬೇರೆ ಮಂತ್ರಿಗಳು, ಅಧಿಕಾರಿಗಳ ಬಳಿ ಹೋಗಿ ಕೆಲಸ ತರುತ್ತಿದ್ದೇನೆ. ಈ ಮೊದಲು ಬೆಳಗಾವಿ ಗ್ರಾಮೀಣ ಕ್ಷೇತ್ರದ ಹೆಸರು ರಾಜ್ಯಕ್ಕೆ ಗೊತ್ತಿರಲಿಲ್ಲ. ಈಗ ಅಭಿವೃದ್ಧಿಯ ಮೂಲಕ ಎಲ್ಲೆಡೆ ಕ್ಷೇತ್ರ ಚಿರಪರಿಚಿತವಾಗುವಂತೆ ಮಾಡಿದ್ದೇನೆ’ ಎಂದರು.
‘ಈ ಹಿಂದೆ ಯಾರೂ ಇಷ್ಟು ಹಣ ಕೊಟ್ಟಿರಲಿಲ್ಲ. ನಾನಾಗಲಿ, ಸಹೋದರ ಚನ್ನರಾಜ ಆಗಲಿ, ಮಗ ಮೃಣಾಲ ಆಗಲಿ ರಾಜಕಾರಣ ಮಾಡಲು ಬಂದಿಲ್ಲ. ಜನ ಸೇವೆ ಮಾಡಬೇಕು, ಜನರ ಪ್ರೀತಿಗಳಿಸಬೇಕೆಂದು ಬಂದವರು. ಒಳ್ಳೆಯ ಹೆಸರು ಮಾಡಬೇಕೆಂದು ನಾವು ಬಂದವರು. ನಮ್ಮ ಕೈಲಾದಷ್ಟು ಜನರ ಸೇವೆ ಮಾಡಿ ನಿಮ್ಮ ಪ್ರೀತಿ ಗಳಿಸುತ್ತಿದ್ದೇವೆ. ಸನ್ಮಾನದ ಮೂಲಕ ನನ್ನ ಜವಾಬ್ದಾರಿಯನ್ನು ಹೆಚ್ಚಿಸಿದ್ದೀರಿ’ ಎಂದು ಲಕ್ಷ್ಮೀ ಹೇಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿದರು. ಇದೇ ಸಮಯದಲ್ಲಿ ಬಾಕಿ ಉಳಿದಿದ್ದ ಹೊಲಕ್ಕೆ ಸಾಗುವ ರಸ್ತೆಗೆ ಡಾಂಬರೀಕರಣ ಕಾಮಗಾರಿಗೆ ಸಹ ಭೂಮಿಪೂಜೆ ನೆರವೇರಿಸಿದರು.
ಮುಖಂಡರಾದ ಸುರೇಶ ಪಾಟೀಲ, ರಾಜು ಪಾಟೀಲ, ಶೀಲಾ ತಿಪ್ಪಣ್ಣಗೋಳ, ನಿಂಗಪ್ಪ ಶಹಾಪೂರಕರ್, ಸುರೇಶ್ ಮುಚ್ಚಂಡಿ, ನಾಗೇಶ್ ದೇಸಾಯಿ, ಸಿಪಿಐ ನಾಗನಗೌಡ, ಪ್ರಕಾಶ ಗೌಡ, ಪಿಡಿಒ ಶ್ರೀದೇವಿ ಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಗ್ರಾಮೀಣ ಕ್ಷೇತ್ರದ ಪ್ರತಿ ಊರಲ್ಲಿ ಜಾತ್ರೆಯಾದರೆ ಇಡೀ ಊರನ್ನು ಸುಧಾರಿಸುವ ಜವಾಬ್ದಾರಿ ನಿರ್ವಹಿಸುತ್ತಿದ್ದೇನೆ. ಪ್ರತಿ ಗ್ರಾಮಕ್ಕೆ ₹5 ಕೋಟಿಯಿಂದ ₹10 ಕೋಟಿಯ ಕೆಲಸ ತರುತ್ತಿದ್ದೇನೆಲಕ್ಷ್ಮೀ ಹೆಬ್ಬಾಳಕರ ಸಚಿವೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.