ಬಾಲಚಂದ್ರ ಜಾರಕಿಹೊಳಿ
ಬೆಳಗಾವಿ: ‘ಹುಕ್ಕೇರಿ ಗ್ರಾಮೀಣ ವಿದ್ಯುತ್ ಸಹಕಾರ ಸಂಘದ ಚುನಾವಣೆ ಫಲಿತಾಂಶ ಪ್ರಕಟವಾದ ನಂತರ, ಮಾಧ್ಯಮಗಳು ಮತ್ತು ಸಾರ್ವಜನಿಕ ವೇದಿಕೆಗಳಲ್ಲಿ ತಮ್ಮ ಕುಟುಂಬದ ವಿರುದ್ಧ ಟೀಕೆಗಳನ್ನು ಮಾಡಿದವರ ವಿರುದ್ಧ ಕಾನೂನು ಹೋರಾಟ ಕೈಗೊಳ್ಳಲಾಗುವುದು’ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ವಿರುದ್ಧ ನೀಡಲಾದ ಹೇಳಿಕೆಗಳು ಒಳ್ಳೆಯ ಅಭಿರುಚಿಯಿಂದ ಕೂಡಿಲ್ಲ. ಚುನಾವಣೆಗಳಲ್ಲಿ ಗೆದ್ದರೂ–ಸೋತರೂ, ಆ ಸಂದರ್ಭಗಳನ್ನು ವೈಯಕ್ತಿಕ ದಾಳಿಗೆ ಬಳಸಿಕೊಳ್ಳಬಾರದು. ದೀಪಾವಳಿ ಹಬ್ಬದ ನಂತರ, ಆ ಹೇಳಿಕೆಗಳ ವಿರುದ್ಧ ನಾವು ಕಾನೂನು ಹೋರಾಟ ಕೈಗೊಳ್ಳುತ್ತೇವೆ’ ಎಂದು ಮಾಜಿ ಸಂಸದ ರಮೇಶ್ ಕತ್ತಿ ಹೆಸರು ಉಲ್ಲೇಖಿಸದೆ ಪರೋಕ್ಷವಾಗಿ ತಿಳಿಸಿದರು.
‘ಯಾರ ವಿರುದ್ಧವಾದರೂ ಹೇಳಿಕೆ ನೀಡುವಾಗ ಮಿತಿ ಇರಬೇಕು. ವ್ಯಕ್ತಿಗಳು ಮತ್ತು ಕುಟುಂಬಗಳ ವಿರುದ್ಧ ಹೇಳಿಕೆ ನೀಡುವವರು ಅಷ್ಟು ಕೀಳುಮಟ್ಟಕ್ಕೆ ಇಳಿಯಬಾರದು. ರಾಜಕೀಯ ಹೇಳಿಕೆಗಳ ವಿಷಯದಲ್ಲೂ ಹಗುರವಾಗಿ ಮಾತನಾಡಬಾರದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.