ADVERTISEMENT

ಬೆಳಗಾವಿ: ಲಾಕ್‌ಡೌನ್‌ ಎಫೆಕ್ಟ್‌; ಮರೆಯಾದ ಮಾವು

ಶ್ರೀಕಾಂತ ಕಲ್ಲಮ್ಮನವರ
Published 9 ಮೇ 2020, 2:14 IST
Last Updated 9 ಮೇ 2020, 2:14 IST
ಬೆಳಗಾವಿಯ ಹಣ್ಣಿನ ಮಾರುಕಟ್ಟೆಯಲ್ಲಿ ಕಂಡುಬಂದ ಅಲ್ಪಸ್ವಲ್ಪ ಮಾವು
ಬೆಳಗಾವಿಯ ಹಣ್ಣಿನ ಮಾರುಕಟ್ಟೆಯಲ್ಲಿ ಕಂಡುಬಂದ ಅಲ್ಪಸ್ವಲ್ಪ ಮಾವು   

ಬೆಳಗಾವಿ: ಲಾಕ್‌ಡೌನ್‌ದಿಂದಾಗಿ ಬೆಳಗಾವಿ ಮಾರುಕಟ್ಟೆಯಲ್ಲಿ ಮಾವಿನ ಹಣ್ಣಿನ ತೀವ್ರ ಕೊರತೆ ಕಂಡುಬಂದಿದೆ. ಇನ್ನೊಂದೆಡೆ, ಅಲ್ಪಸ್ವಲ್ಪ ಲಭ್ಯವಿರುವ ಹಣ್ಣಿಗೆ ಚಿನ್ನದ ಬೆಲೆ ಬಂದಿದೆ. ದೇವಗಢ ಆಪೂಸ್‌ ಒಂದು ಡಜನ್‌ಗೆ ₹ 400ದಿಂದ 1,000ಕ್ಕೆ ತಲುಪಿದ್ದು, ಮಧ್ಯಮ ವರ್ಗದವರ ಕೈಗೆ ಎಟುಕದಂತಾಗಿದೆ. ಮಾವು ಸವಿಯದೇ ಈ ಬೇಸಿಗೆ ಕಳೆಯುವ ಸ್ಥಿತಿಗೆ ಬಂದಿದ್ದಾರೆ.

ಇಲ್ಲಿನ ಮಾರುಕಟ್ಟೆಗೆ ನೆರೆಯ ಮಹಾರಾಷ್ಟ್ರದಿಂದಲೇ ಬಹುಪಾಲು ಮಾವು ಬರುತ್ತಿತ್ತು. ರತ್ನಗಿರಿ ಆಪೂಸ್‌, ದೇವಗಢ ಆಪೂಸ್‌, ರಸಪುರಿ, ಪೈರಿ ಸೇರಿದಂತೆ ವಿವಿಧ ತಳಿಯ ಮಾವು ಮಾರ್ಚ್‌– ಏಪ್ರಿಲ್‌ ಅವಧಿಯಲ್ಲಿ ಬರುತ್ತಿತ್ತು. ಆದರೆ, ಕೊರೊನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್‌ ಜಾರಿಗೊಳಿಸಿರುವುದರಿಂದ ವಾಹನಗಳ ಸಂಚಾರ ನಿಂತು ಹೋಗಿ ಮಾವು ಬರಲು ಸಾಧ್ಯವಾಗಿಲ್ಲ.

ಇದಲ್ಲದೇ, ಮಹಾರಾಷ್ಟ್ರದಲ್ಲಿ ಕೊರೊನೊ ಸೋಂಕು ಅತಿ ಹೆಚ್ಚು ಹರಡಿದ್ದರಿಂದ ಗಡಿ ಭಾಗದಲ್ಲಿ ಕಟ್ಟುನಿಟ್ಟಾಗಿ ವಾಹನಗಳ ಸಂಚಾರವನ್ನು ಬಂದ್‌ ಮಾಡಲಾಗಿತ್ತು. ಜನರ ಓಡಾಟವನ್ನೂ ನಿರ್ಬಂಧಿಸಲಾಗಿತ್ತು. ಹೀಗಾಗಿ ಅಲ್ಲಿನ ಮಾವು ಈ ಸಲ ಬೆಳಗಾವಿ ಮಾರುಕಟ್ಟೆಗೆ ಬಂದಿರಲಿಲ್ಲ.

ADVERTISEMENT

ಸಡಿಲಿಕೆ

ಈ ವಾರ ಲಾಕ್‌ಡೌನ್‌ ಕೊಂಚ ಸಡಿಲಿಕೆ ಮಾಡಿದ್ದರಿಂದ ಅಲ್ಪಸ್ವಲ್ಪ ಪ್ರಮಾಣದಲ್ಲಿ ಮಾವಿನ ಆವಕವಾಗಿದೆ. ಸಣ್ಣಪುಟ್ಟ ವ್ಯಾಪಾರಸ್ಥರು ಮನೆಮನೆಗೆ ತಲುಪಿಸಿ, ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದಾರೆ. ಮಹಾರಾಷ್ಟ್ರದಿಂದ ಬಂದಿರುವ ಹಣ್ಣು ಎಂದಾಕ್ಷಣ ಕೆಲವು ಗ್ರಾಹಕರು ಖರೀದಿಸಲು ಹಿಂದೇಟು ಹಾಕುತ್ತಿರುವುದು ಕಂಡುಬಂದಿದೆ.

ಇಳುವರಿ ಕುಂಠಿತ

ಮಹಾರಾಷ್ಟ್ರದಿಂದ ಹಣ್ಣು ಬಾರದಿರುವುದು ಒಂದೆಡೆ ಇನ್ನೊಂದೆಡೆ, ಬೆಳಗಾವಿ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ನವೆಂಬರ್‌– ಡಿಸೆಂಬರ್‌ ಅವಧಿಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಮಾವಿನ ಹೂವುಗಳು ನಾಶವಾಗಿದ್ದವು. ಹೀಗಾಗಿ ಈ ಸಲ ಅಂದುಕೊಂಡಷ್ಟು ಮಾವಿನ ಕಾಯಿ ಕಟ್ಟಲಿಲ್ಲ. ಕೇವಲ ಶೇ 25ರಿಂದ ಶೇ 30ರಷ್ಟು ಮಾತ್ರ ಮಾವು ರೈತರ ಕೈ ಸೇರಿದೆ. ಹೀಗಾಗಿ ಮಾವಿನ ಹಣ್ಣಿಗೆ ತೀವ್ರ ಅಭಾವ ಕಂಡುಬಂದಿದೆ.

ಬೆಲೆ ಗಗನಕ್ಕೆ

ಸ್ಥಳೀಯವಾಗಿ ಕಿತ್ತೂರು, ಖಾನಾಪುರ ಹಾಗೂ ಧಾರವಾಡ, ಬಾಗಲಕೋಟೆ, ವಿಜಯಪುರದಲ್ಲಿ ಬೆಳೆದ ಮಾವು ಮಾರುಕಟ್ಟೆಗೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ಬಂದಿದೆ. ಕಡಿಮೆ ಇಳುವರಿ ಬಂದಿದ್ದರಿಂದ ದರ ಗಗನಕ್ಕೇರಿದೆ. ಸ್ಥಳೀಯ ಆಪೋಸ್‌ಗೆ ₹ 300ರಿಂದ ₹ 600 ಇದೆ. ಪೈರಿಗೆ ₹ 300– ₹ 800 ಇದೆ. ದರ ವಿಪರೀತ ಹೆಚ್ಚಾಗಿದ್ದರಿಂದ ಖರೀದಿಸಲು ಜನರು ಹಿಂದೆಮುಂದೆ ನೋಡುತ್ತಿದ್ದಾರೆ.

ಸ್ಥಳೀಯ ರೈತರ ಪ್ರಯೋಗ

ಖಾನಾಪುರ ತಾಲ್ಲೂಕಿನ ಇಟಗಿ ಬಳಿ ಮಾವಿನ ಹಣ್ಣಿನ ತೋಟ ಹೊಂದಿರುವ ರಾಜೇಶ ಸವಲೇಕರ್‌ ಹಾಗೂ ಇತರ ಪ್ರಗತಿಪರ ರೈತರು ತೋಟಗಾರಿಕಾ ಇಲಾಖೆಯ ಜೊತೆಗೂಡಿ ಮಾವಿನ ಹಣ್ಣು ಮಾರಾಟ ಮಾಡಲು ಆನ್‌ಲೈನ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಖರೀದಿಸುವ ಗ್ರಾಹಕರಿಗೆ ಮನೆ ಮನೆಗೆ ಹಣ್ಣುಗಳನ್ನು ತಲುಪಿಸುತ್ತಿದ್ದಾರೆ.

‘ಲಾಕ್‌ಡೌನ್‌ದಿಂದಾಗಿ ಮಾವಿನ ವ್ಯಾಪಾರಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ. ಹಣ್ಣುಗಳನ್ನು ಖರೀದಿಸಲು ವ್ಯಾಪಾರಸ್ಥರು ಮುಂದೆ ಬರುತ್ತಿಲ್ಲ. ಹೀಗಾಗಿ ನಾವೇ ಆನ್‌ಲೈನ್‌ ಮೂಲಕ ಮಾರಾಟ ಮಾಡುತ್ತಿದ್ದೇವೆ. ಮುಂದಿನ ವಾರದಲ್ಲಿ ಸ್ಥಳೀಯ ರೈತರು ಬೆಳೆದ ಮಾವು ಹೆಚ್ಚಿನ ಪ್ರಮಾಣದಲ್ಲಿ ಮಾರುಕಟ್ಟೆಗೆ ಬರಲಿದೆ’ ಎಂದು ರಾಜೇಶ ಸವಲೇಕರ್‌ ಹೇಳಿದರು.

ಆತಂಕ

ಮುಂಗಾರು ಪೂರ್ವ ಮಳೆ ಆಗಾಗ ಕಾಣಿಸಿಕೊಳ್ಳುತ್ತಿದೆ. ಮುಂದಿನ ತಿಂಗಳು ಜೂನ್‌ನಿಂದ ಮುಂಗಾರು ಆರಂಭವಾಗಲಿದೆ. ಮಳೆ ಆರಂಭವಾದರೆ ಮಾವಿನ ಹಣ್ಣುಗಳಲ್ಲಿ ಹುಳುಗಳಾಗುತ್ತವೆ ಎಂದುಕೊಂಡು ಬಹಳಷ್ಟು ಜನರು ಹಣ್ಣು ಖರೀದಿಸುವುದಿಲ್ಲ. ಇದು ಮಾವು ಬೆಳೆಗಾರರಲ್ಲಿ ಆತಂಕ ತಂದಿದೆ. ತಾವು ಬೆಳೆದಿರುವ ಹಣ್ಣುಗಳನ್ನು ಬೇಗನೇ ಮಾರಾಟ ಮಾಡಬೇಕೆನ್ನುವ ಒತ್ತಡ ಎದುರಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.