ADVERTISEMENT

ಬೆಳಗಾವಿ | ರಿಯಲ್‌ ಎಸ್ಟೇಟ್‌; ಕಾರ್ಮಿಕರು, ಸಾಮಗ್ರಿಗಳ ಕೊರತೆಯಿಂದ ಜರ್ಝರಿತ

ಶ್ರೀಕಾಂತ ಕಲ್ಲಮ್ಮನವರ
Published 21 ಮೇ 2020, 19:30 IST
Last Updated 21 ಮೇ 2020, 19:30 IST
ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿರುವ ದೃಶ್ಯ
ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿರುವ ದೃಶ್ಯ   

ಬೆಳಗಾವಿ: ಕೊರೊನಾ ಭೀತಿ ಹಾಗೂ ಲಾಕ್‌ಡೌನ್‌ ನಿರ್ಬಂಧದಿಂದಾಗಿ ತತ್ತರಿಸಿ ಹೋಗಿದ್ದ ಕಟ್ಟಡ ನಿರ್ಮಾಣ ಕಾಮಗಾರಿ ಕ್ಷೇತ್ರವು ಈಗ ಕಾರ್ಮಿಕರ ಕೊರತೆ ಹಾಗೂ ಕಚ್ಚಾ ಸಾಮಗ್ರಿಗಳ ಕೊರತೆಯಿಂದಾಗಿ ಮತ್ತಷ್ಟು ಜರ್ಝರಿತವಾಗಿದೆ. ಇನ್ನೇನು 10–15 ದಿನಗಳಲ್ಲಿ ಮಳೆಗಾಲ ಆರಂಭವಾಗುವ ನಿರೀಕ್ಷೆ ಇದ್ದು, ಕಟ್ಟಡ ಮಾಲೀಕರಲ್ಲಿ ಆತಂಕ ಮೂಡಿಸಿದೆ.

ದೇಶದ ಆರ್ಥಿಕತೆಗೆ ಚೈತನ್ಯ ತುಂಬುವ ಕಟ್ಟಡ ನಿರ್ಮಾಣ ಕ್ಷೇತ್ರವು ಕಳೆದ ಎರಡು ತಿಂಗಳಿನಿಂದ ಲಾಕ್‌ಡೌನ್‌ ನಿರ್ಬಂಧದಿಂದಾಗಿ ಬಂದ್‌ ಆಗಿತ್ತು. ಮೂರನೇ ಹಂತದ ಲಾಕ್‌ಡೌನ್‌ ಮುಗಿದ ನಂತರ ಈ ಕ್ಷೇತ್ರವನ್ನು ಸಡಿಲುಗೊಳಿಸಲಾಗಿತ್ತು. ಕಾರ್ಮಿಕರ ನಡುವೆ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಮತ್ತು ಸ್ಯಾನಿಟೈಸರ್‌ ಬಳಸುವಂತೆ ಸೂಚಿಸಿ, ಕಾಮಗಾರಿ ಆರಂಭಿಸಲು ಸರ್ಕಾರ ಹಸಿರು ನಿಶಾನೆ ತೋರಿತು.

ಅಲ್ಲಲ್ಲಿ ಕೆಲವು ಕಡೆ ನಿಧಾನವಾಗಿ ಕಟ್ಟಡ ಕಾಮಗಾರಿಗಳು ಆರಂಭವಾಗಿವೆ. ಅಂತಿಮ ಹಂತದಲ್ಲಿದ್ದ ಕಟ್ಟಡಗಳು ಹಾಗೂ ಕಟ್ಟಡ ನಿರ್ಮಾಣ ಮಾಡುವ ಮೊದಲಿನ ಪ್ರಾಥಮಿಕ ಹಂತದ ಕೆಲಸಗಳು ಆರಂಭವಾಗಿವೆ. ಒಂದು ಅಂದಾಜಿನ ಪ್ರಕಾರ, ಶೇ 20ರಷ್ಟು ಮಾತ್ರ ಕಾಮಗಾರಿಗಳು ಆರಂಭವಾಗಿದ್ದು, ಬಾಕಿ ಕಾಮಗಾರಿಗಳನ್ನು ಆರಂಭಿಸಲು ಗುತ್ತಿಗೆದಾರರು, ಕಟ್ಟಡ ಮಾಲೀಕರು ಇನ್ನೂ ಮುಂದಾಗಿಲ್ಲ.

ADVERTISEMENT

ಸಮಸ್ಯೆಗಳ ಸರಮಾಲೆ:ಕೊರೊನಾ ವೈರಾಣು ಹರಡದಂತೆ ತಡೆಗಟ್ಟಲು ದೇಶದಾದ್ಯಂತ ಸುಮಾರು 2 ತಿಂಗಳ ಕಾಲ ಲಾಕ್‌ಡೌನ್‌ ಹೇರಲಾಗಿತ್ತು. ಈ ಅವಧಿಯಲ್ಲಿ ಎಲ್ಲ ರೀತಿಯ ಕೆಲಸ, ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದಾಗಿ ಕಟ್ಟಡ ಕಾರ್ಮಿಕರು ಕೆಲಸವಿಲ್ಲದೇ ತೀವ್ರ ಸಂಕಷ್ಟಕ್ಕೆ ಒಳಗಾದರು. ಮುಖ್ಯವಾಗಿ ಹೊರರಾಜ್ಯಗಳಿಂದ ಬಂದಿದ್ದ ವಲಸೆ ಕಾರ್ಮಿಕರು ತೀವ್ರ ಕಷ್ಟ ಅನುಭವಿಸಿದರು. ಒಂದು ಹೊತ್ತಿನ ಊಟಕ್ಕೂ ಗತಿಯಿಲ್ಲದೇ ಪರದಾಡಿದರು.

ಕೆಲಸವೂ ಇಲ್ಲದೇ, ಹೊಟ್ಟೆಗೆ ಹಿಟ್ಟೂ ಇಲ್ಲದೇ ಪರದಾಡಿದ ಕೆಲವರು ತಮ್ಮ ರಾಜ್ಯಗಳತ್ತ ಮರಳಿದರು. ಜಿಲ್ಲೆಯಲ್ಲಿ ಅಂದಾಜು 10,000 ಜನರು ವಲಸೆ ಕಾರ್ಮಿಕರಿದ್ದು, ಇವರಲ್ಲಿ ಈಗಾಗಲೇ ಶೇ 50ರಷ್ಟು ಜನರು ತಮ್ಮ ತಮ್ಮ ರಾಜ್ಯಗಳತ್ತ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಈಗ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಲು ಕಾರ್ಮಿಕರ ಕೊರತೆ ಕಾಡುತ್ತಿದೆ. ವಿಶೇಷವಾಗಿ ಫರ್ನಿಚರ್‌, ಪಿಒಪಿ, ಟೈಲ್ಸ್‌ ಜೋಡಣೆ, ಕಬ್ಬಿಣದ ಕೆಲಸಗಳಲ್ಲಿ ತೊಡಗಿಕೊಂಡಿದ್ದರು. ಈಗ ಅವರಿಲ್ಲದೇ, ಅಂತಿಮ ಹಂತದ ಕಾಮಗಾರಿಗಳು ಅರ್ಧಕ್ಕೆ ನಿಂತುಹೋಗಿವೆ.

ಕಚ್ಚಾ ವಸ್ತುಗಳ ಕೊರತೆ:ಕಾರ್ಮಿಕರ ಕೊರತೆ ಒಂದೆಡೆಯಾದರೆ, ಇನ್ನೊಂದೆಡೆ ಕಟ್ಟಡ ಸಾಮಗ್ರಿಗಳ ಕೊರತೆಯೂ ಬಾಧಿಸುತ್ತಿದೆ. ಮರಳು, ಇಟ್ಟಿಗೆ, ಸಿಮೆಂಟ್‌, ಕಬ್ಬಿಣ ಯಥೇಚ್ಛವಾಗಿ ಸಿಗುತ್ತಿಲ್ಲ. ಸಿಮೆಂಟ್‌ಗೆ ಆರ್ಡರ್‌ ಮಾಡಿದ 2–3 ದಿನಗಳ ನಂತರ ಪೂರೈಕೆಯಾಗುತ್ತಿದೆ. ಮರಳು, ಇಟ್ಟಿಗೆಯ ಪರಿಸ್ಥಿತಿಯೂ ಇದೇ ರೀತಿಯಾಗಿದೆ.

ಲಾಕ್‌ಡೌನ್‌ಗಿಂತ ಮುಂಚೆ ತಯಾರಾಗಿದ್ದ ಸಿಮೆಂಟ್‌, ಕಬ್ಬಿಣವನ್ನೇ ಕಂಪನಿಗಳು ಈಗ ಪೂರೈಸುತ್ತಿವೆ. ಹೊಸ ಉತ್ಪಾದನೆ ಇನ್ನೂ ಮಾರುಕಟ್ಟೆಗೆ ಬಂದಿಲ್ಲ. ಹೀಗಾಗಿ ಕೊರತೆ ಉಂಟಾಗಿದ್ದು, ದರ ಏರಿಕೆಗೆ ಕಾರಣವಾಗಿದೆ. ಸಿಮೆಂಟ್‌ 1 ಚೀಲಕ್ಕೆ ₹ 380ರಿಂದ ₹ 400 ತಲುಪಿದೆ. ಕಬ್ಬಿಣದ ದರವು ಟನ್‌ಗೆ ₹ 46ರಿಂದ 55ರವರೆಗೆ ತಲುಪಿದೆ. ಮರಳು 1 ಟ್ರಿಪ್‌ ಲಾರಿಗೆ ₹ 28 ಸಾವಿರ ದರವಿದೆ. ದರ ಏರಿಕೆ ಹಾಗೂ ಸಾಮಗ್ರಿಗಳ ಕೊರತೆಯಿಂದಾಗಿ ಕಟ್ಟಡ ಮಾಲೀಕರು ನಿರ್ಮಾಣ ಕಾಮಗಾರಿಯನ್ನು ಮುಂದೂಡುವ ಬಗ್ಗೆ ಚಿಂತನೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.