ADVERTISEMENT

ಬೆಳಗಾವಿ: ಮಾದಿಗರಿಗೆ ಶೇ 6 ಮೀಸಲಾತಿ ನೀಡಿದ ಸಿದ್ದರಾಮಯ್ಯ

956ನೇ ಮಾದರ ಚನ್ನಯ್ಯನವರ ಜಯಂತಿ ಹಾಗೂ ಬೃಹತ್ ಸಮಾವೇಶ

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 6:51 IST
Last Updated 1 ಜನವರಿ 2026, 6:51 IST
ಸವದತ್ತಿಯಲ್ಲಿ ಚನ್ನಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಸಚಿವ ಆರ್.ಬಿ. ತಿಮ್ಮಾಪೂರ, ಶಾಸಕ ವಿಶ್ವಾಸ್ ವೈದ್ಯ ಹಾಗೂ ಗಣ್ಯರು ಚಾಲನೆ ನೀಡಿದರು 
ಸವದತ್ತಿಯಲ್ಲಿ ಚನ್ನಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆಗೆ ಸಚಿವ ಆರ್.ಬಿ. ತಿಮ್ಮಾಪೂರ, ಶಾಸಕ ವಿಶ್ವಾಸ್ ವೈದ್ಯ ಹಾಗೂ ಗಣ್ಯರು ಚಾಲನೆ ನೀಡಿದರು    

ಸವದತ್ತಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವ ಸಂಪುಟದಲ್ಲಿ ಪರ ವಿರೋಧ ಲೆಕ್ಕಿಸದೇ ಶೇ 6 ಮೀಸಲಾತಿ ನೀಡಿದ್ದಾರೆ. ಈಚೆಗೆ ಮಾದಿಗರು ಸಂಘಟಿತ ಆಗುತ್ತಿರುವುದರಿಂದ ರಾಜಕೀಯ ಪಕ್ಷಗಳು ಎಚ್ಚೆತ್ತು ಸಮುದಾಯದ ಅಭಿವೃದ್ಧಿಗೆ ಸ್ಪಂದಿಸುತ್ತಿವೆ ಎಂದು ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ಹೇಳಿದರು.

ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ಬುಧವಾರ ಜರುಗಿದ 956ನೇ ಮಾದರ ಚನ್ನಯ್ಯನವರ ಜಯಂತಿ ಹಾಗೂ ಬೃಹತ್ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣ ಪಡೆದು ರಾಜಕೀಯವಾಗಿಯೂ ಜಾಗೃತರಾಗಿ ಮುಂಬರುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ. ಬಸವ ತತ್ವ ಪಾಲಿಸುತ್ತಿರುವ ಶಾಸಕ ವೈದ್ಯ ಅವರನ್ನು ಮತ್ತೆ ಆಯ್ಕೆ ಮಾಡಿದಲ್ಲಿ ಸಮುದಾಯ ಉತ್ತುಂಗಕ್ಕೇರಲಿದೆ. ರಾಜಕೀಯವಾಗಿ ಪ್ರಭಾವ ಬೆಳೆಸಲು ಕೆಲಸ ಮಾಡಿ ಹೊರತು ಇತರರನ್ನು ರಕ್ಷಿಸಲು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸದಿರಿ ಎಂದು ಕಿವಿಮಾತು ಹೇಳಿದರು.

ADVERTISEMENT

‘ವಿದೇಶಗಳಲ್ಲಿ ಕಾಣಸಿಗುವ ಪ್ರಧಾನಿ ಮೋದಿ ಮಹಾರಾಜನಲ್ಲ. ಅದು ಡಾ.ಬಿ.ಆರ್‌. ಅಂಬೇಡ್ಕರ್‌ ನೀಡಿದ ಭಿಕ್ಷೆ ಎಂದ ಅವರು ಸಕಲ ಸಮುದಾಯದ ನಾಯಕರನ್ನು ಸೇರಿಸಿ ಸಮಾವೇಶ ನಡೆಸಿದ್ದು ಶ್ಲಾಘನೀಯ’ ಎಂದರು.

ಶಾಸಕ ವಿಶ್ವಾಸ್ ವೈದ್ಯ ಮಾತನಾಡಿ, ‘ಈ ಜಯಂತಿ ನಗರದಲ್ಲಿ ವೈಭವಪೂರಿತ ಹಬ್ಬವನ್ನೇ ಸೃಷ್ಟಿಸಿದೆ. ಪ್ರತಿ ವರ್ಷ ನಡೆಸಿದರೂ ಸಂಪೂರ್ಣ ಸಹಕಾರ ನೀಡಲಾಗುವುದು. ಸಮಾಜಕ್ಕೆ ಬೆನ್ನೆಲುಬಾಗಿ, ಮನೆಯ ಮಗನಾಗಿ ಅಭಿವೃದ್ಧಿಗಾಗಿ ಶ್ರಮಿಸುವೆ. ಮಾದಿಗ ಸೇರಿ ಸಕಲ ಸಮುದಾಗಳಿಗೂ ನನ್ನ ಸೇವೆ ಮೀಸಲಿದೆ. ಬಡ ಕುಟುಂಬಗಳ ಶ್ರೇಯೋಭಿವೃದ್ಧಿಗೆ ಅನುಕೂಲ ಕಲ್ಪಿಸಿದ್ದೇನೆ’ ಎಂದು ಹೇಳಿದರು.

ರಾಯಭಾಗ ಶಾಸಕ ಡಿ.ಎಂ. ಐಹೊಳೆ ಮಾತನಾಡಿ, ‘101 ಜಾತಿಗಳಲ್ಲಿ ಮಾದಿಗರೇ ಬಹುಸಂಖ್ಯಾತರು. ಆದಾಗ್ಯೂ ಸಮಾಜದ ಅಭಿವೃದ್ಧಿ ಮಂದಗತಿಯಲ್ಲಿದೆ. ಸಮಾವೇಶ, ಸಂಘಟನೆ, ಹೋರಾಟಗಳ ಮೂಲಕ ಗುರುಪೀಠದ ಶ್ರೀಗಳ ನೇತೃತ್ವದಲ್ಲಿ ಬಲಿಷ್ಠರಾಗೋಣ. ಮುಗ್ಧರಾದ ಮಾದಿಗರು ಉದ್ಯೋಗ, ಶೈಕ್ಷಣಿಕ, ರಾಜಕೀಯ ಸೇರಿ ಎಲ್ಲ ರಂಗದಲ್ಲೂ ಹಿಂದುಳಿದಿದ್ದೇವೆ’ ಎಂದರು.

ಮಹಿಳೆಯರು ಮಕ್ಕಳಿಗೆ ಶಿಕ್ಷಣ, ಸಂಸ್ಕಾರ ನೀಡಬೇಕು. ನಗರದಲ್ಲಿ ಚನ್ನಯ್ಯನವರ ಭವನಕ್ಕೆ ಎರಡು ಎಕರೆ ಜಮೀನು ನೀಡಲು ಶಾಸಕ ವೈದ್ಯ ಅವರಿಗೆ ತಿಳಿಸಿ, ಸಚಿವರಿಗೆ ಅನುದಾನ ನೀಡಲು ವಿನಂತಿಸಿದರು.

ಸಾಮಾಜಿಕ ಹೋರಾಟಗಾರ ಬಿ.ಆರ್. ಭಾಸ್ಕರಪ್ರಸಾದ ಮಾತನಾಡಿ, ‘ಸಾಮಾಜಿಕವಾಗಿ ಮಾದಿಗರು ಬಲಿಷ್ಠ ಸಮುದಾಯದವರು. ಇತಿಹಾಸದಲ್ಲಿ ಮಾದಿಗರನ್ನು ಆದಿ ಪುರುಷರೆನ್ನುತ್ತಾರೆ. ಮಾದಿಗ ಸಮಾಜ ಅಧಿಕಾರ, ಅಂತಸ್ತು ಗಳಿಸುವ ನಿಟ್ಟಿನಲ್ಲಿ ಜಾಗೃತ ಹೆಜ್ಜೆಯನ್ನಿಟ್ಟು ಸಮಾಜ ಸಂಘಟಿಸಬೇಕಿದೆ. ಬಂಜಗೆರೆ ಜಯಪ್ರಕಾಶ್ ಅವರ ಸಂಶೋಧನಾ ಕೃತಿಯಲ್ಲಿ ಬಸವಣ್ಣನವರು ಮಾದಿಗ ಸಮುದಾಯಕ್ಕೆ ಸೇರಿದವರೆಂದು ಉಲ್ಲೇಖವಿದೆ. ಜೊತೆಗೆ ಬಸವಣ್ಣನವರೇ ಚನ್ನಯ್ಯನವರನ್ನ ಪಿತೃ ಸಮಾನರಾಗಿ ಕಂಡಿದ್ದರು. ಪ್ರಸ್ತುತ ಬಸವಣ್ಣನವರನ್ನು ಮಾದಿಗರ ಕೇರಿಗೆ ಕರೆದೊಯ್ಯುತ್ತೀರೋ ? ಅಥವಾ ಬಸವಣ್ಣನವರ ಉನ್ನತ ಸ್ಥಾನಕ್ಕೆ ತಲುಪಲು ಪ್ರಯತ್ನಿಸುತ್ತೀರೋ? ಈಗ ನಿರ್ಧರಿಸಬೇಕಿದೆ’ ಎಂದರು.

‘ಪ್ರಬುದ್ಧ ಭಾರತ ಅಂಬೇಡ್ಕರ್‌ ಜಯಹೇ’ ಗೀತೆಯೊಂದಿಗೆ ಸಮಾವೇಶ ಆರಂಭಗೊಂಡಿತು. ಇದಕ್ಕೂ ಮೊದಲು ಎಪಿಎಂಸಿಯಿಂದ ಪ್ರಮುಖ ಬೀದಿಗಳಲ್ಲಿ ಸಾಂಸ್ಕೃತಿಕ ವಾದ್ಯ ಮೇಳ, ಕುಂಭಹೊತ್ತ ಸುಮಂಗಲೆಯರೊಂದಿಗೆ ಚನ್ನಯ್ಯನವರ ಭಾವಚಿತ್ರದ ಭವ್ಯ ಮೆರವಣಿಗೆ ತಾಲ್ಲೂಕು ಕ್ರೀಡಾಂಗಣವರೆಗೆ ಜರುಗಿತು.

ಚಿತ್ರದುರ್ಗದ ಮಾದರ ಚನ್ನಯ್ಯ ಗುರುಪೀಠದ ಬಸವಮೂರ್ತಿ ಸ್ವಾಮೀಜಿ, ಚಿಕ್ಕುಂಬಿ ಅಭಿನವ ನಾಗಲಿಂಗ ಸ್ವಾಮೀಜಿ, ಉಗರಗೋಳ ಮಹಾಂತ ಸ್ವಾಮೀಜಿ, ಮೂಲಿಮಠದ ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಯಲ್ಲಪ್ಪ ಗೊರವನಕೊಳ್ಳ, ಎಂ.ಮಲ್ಲಪ್ಪ, ವೈ.ವೈ. ಕಾಳಪ್ಪನವರ, ಚಂದ್ರು ಹಿರೇಕೆಂಚಮ್ಮನವರ, ರವಿ ದೊಡಮನಿ, ನಾಗಪ್ಪ ಬಡೆಪ್ಪನವರ, ತಹಶೀಲ್ದಾರ್ ಎಂ.ಎನ್. ಹೆಗ್ಗಣ್ಣವರ, ಜಗದೀಶ್ ಶಿರಸಂಗಿ, ಸಂತೋಷ್ ಕಾಳೆ, ಪಿ.ಐ. ಸುರೇಶ ಬೆಂಡೆಗುಂಬಳ, ಪಿಎಸೈ. ಕೆ.ಎಂ. ಬನ್ನೂರ, ಮಹಾದೇವ ಬಡ್ಲಿ, ಭಾಸ್ಕರ ಚನ್ನಾಮೇತ್ರಿ, ಮಂಜುನಾಥ್ ಪಾಚಾಂಗಿ, ಬಸವರಾಜ ಅರಮನಿ, ಮರೀಶ ನಾಗಣ್ಣವರ, ಅನಂತ ಬ್ಯಾಕೋಡ, ಡಾ. ಮಹಾದೇವ ದಳಪತಿ ಹಾಗೂ ಪ್ರಮುಖರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.