ADVERTISEMENT

ಮಹಾಶಿವರಾತ್ರಿ: ರಾಮದುರ್ಗದಲ್ಲಿ ನಂದಿ ವಿಗ್ರಹ ಲೋಕಾರ್ಪಣೆ ನಾಳೆ

ಚನ್ನಪ್ಪ ಮಾದರ
Published 9 ಮಾರ್ಚ್ 2021, 19:30 IST
Last Updated 9 ಮಾರ್ಚ್ 2021, 19:30 IST
ರಾಮದುರ್ಗದ ಮುಳ್ಳೂರು ಗುಡ್ಡದಲ್ಲಿ ಶಿವನ ಮೂರ್ತಿ ಮುಂದೆ ಮಂಡಿಯೂರಿ ಕುಳಿತ 22 ಅಡಿ ಎತ್ತರದ ನಂದಿ ವಿಗ್ರಹ
ರಾಮದುರ್ಗದ ಮುಳ್ಳೂರು ಗುಡ್ಡದಲ್ಲಿ ಶಿವನ ಮೂರ್ತಿ ಮುಂದೆ ಮಂಡಿಯೂರಿ ಕುಳಿತ 22 ಅಡಿ ಎತ್ತರದ ನಂದಿ ವಿಗ್ರಹ   

ರಾಮದುರ್ಗ: ಹೊರವಲಯದ ಮುಳ್ಳೂರು ಗುಡ್ಡದಲ್ಲಿ ನಿರ್ಮಿಸಿದ ರಾಜ್ಯದ ಎರಡನೇ ಎತ್ತರದ ಶಿವನ ಮೂರ್ತಿ ಮುಂಭಾಗದಲ್ಲಿ ನಿರ್ಮಿಸಿದ ನಂದಿ ವಿಗ್ರಹದ ಲೋಕಾರ್ಪಣೆ ಕಾರ್ಯಕ್ರಮವನ್ನು ಮಹಾಶಿವರಾತ್ರಿ ದಿನವಾದ ಮಾರ್ಚ್‌ 11ರಂದು ವಿಜೃಂಭಣೆಯಿಂದ ಹಮ್ಮಿಕೊಳ್ಳಲಾಗಿದೆ.

ಇಲ್ಲಿನ ಶಿವನ ಮೂರ್ತಿ ಮುಂದೆ ಸ್ಥಾಪಿತ ನಂದಿ (ಬಸವಣ್ಣ) ಒಟ್ಟು 22 ಅಡಿ ಎತ್ತರ, 32 ಅಡಿ ಉದ್ದ ಮತ್ತು 14 ಅಡಿ ಅಗಲವಾಗಿದೆ. ಈ ನಂದಿ ವಿಗ್ರಹ ನಿರ್ಮಾಣಕ್ಕೆ ಎರಡು ವರ್ಷದಿಂದಲೂ ಶಿಲ್ಪಿಗಳು ನಿರಂತರವಾಗಿ ಕೆಲಸ ಮಾಡಿದ್ದಾರೆ. ಶಿವರಾತ್ರಿಯನ್ನು ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಗುವುದು. ಅಂದು ರಾತ್ರಿ 9ರಿಂದ 11.30ರವರೆಗೆ ಪ್ರವಚನವನ್ನು ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಮತ್ತು ಆಕಾಶವಾಣಿ ಕಲಾವಿದ ಕೀರ್ತನ ಕೇಸರಿ ಗುರುನಾಥ ಶಾಸ್ತ್ರಿ ನಡೆಸಿಕೊಡಲಿದ್ದಾರೆ.

‘ಶಿವರಾತ್ರಿ ಪ್ರಯುಕ್ತ ಉಪವಾಸ ವ್ರತ ಮತ್ತು ಶಿವನ ಮೂರ್ತಿ ದರ್ಶನಕ್ಕೆ ಬರುವವರಿಗೆ ಪ್ರಸಾದದ ವ್ಯವಸ್ಥೆಯನ್ನು ಸಮಿತಿ ಮಾಡಿದೆ. ಇದಕ್ಕಾಗಿ 3 ಟನ್‌ ಖರ್ಜೂರ, 3 ಟನ್‌ ಸಾಬೂದಾನಿ, 3 ಟನ್‌ ಕುದಿಸಿದ ಶೇಂಗಾ ಮತ್ತು 4 ಟನ್‌ ಬಾಳೆ ಹಣ್ಣು ವಿತರಣೆಗೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ’ ಎಂದು ಟ್ರಸ್ಟ್‌ ಅಧ್ಯಕ್ಷ, ಮಾಜಿ ಶಾಸಕ ಅಶೋಕ ಪಟ್ಟಣ ತಿಳಿಸಿದರು.

ADVERTISEMENT

‘ಮುಳ್ಳೂರು ಗುಡ್ಡದಲ್ಲಿ 78 ಅಡಿ ಎತ್ತರದ ಶಿವನಮೂರ್ತಿ ಮುಂಭಾಗದಲ್ಲಿ ನಿರ್ಮಿಸಿದ ಬಸವಣ್ಣನ ಮೂರ್ತಿ ಸ್ಥಾಪನೆಯ ನಂತರ ರಾಮದುರ್ಗ ಪಟ್ಟಣವೂ ಪ್ರೇಕ್ಷಣೀಯ ಸ್ಥಳವಾಗಿ ಗುರುತಿಸಿಕೊಳ್ಳಲಿದೆ. ಅರಣ್ಯ ಇಲಾಖೆ ಸಹಯೋಗದಲ್ಲಿ ಅಲ್ಲಿಯೇ ಹೂದೋಟ, ರಾಕ್‌ ಗಾರ್ಡನ್‌, ಸಂಗೀತ ಕಾರಂಜಿ ನಿರ್ಮಾಣದಿಂದ ಮತ್ತಷ್ಟು ಆಕರ್ಷಕವಾಗಿ ಮಾಡಲಾಗುವುದು’ ಎಂದು ಹೇಳಿದರು.

‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬರುವವರು ಕೋವಿಡ್‌–19 ನಿಯಮಾವಳಿಗಳನ್ನು ಪಾಲಿಸಬೇಕು. ಮಾಸ್ಕ್‌ ಧರಿಸಿಕೊಂಡು ಬರಬೇಕು. ಅಂತರ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.