ADVERTISEMENT

ಮಹದಾಯಿಗಾಗಿ ಪಾದಯಾತ್ರೆ: ಚರ್ಚಿಸಿ ನಿರ್ಧಾರ– ಎಂ.ಬಿ. ಪಾಟೀಲ

​ಪ್ರಜಾವಾಣಿ ವಾರ್ತೆ
Published 24 ಜನವರಿ 2022, 10:53 IST
Last Updated 24 ಜನವರಿ 2022, 10:53 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ಬೆಳಗಾವಿ: ‘ಮಹದಾಯಿ ಯೋಜನೆಯಲ್ಲಿ 3.9 ಟಿಎಂಸಿ ನೀರು ಸಾಕಾಗುವುದಿಲ್ಲ. ನಮಗೆ 7.5 ಟಿಎಂಸಿ ನೀರು ಸಿಗಲೇಬೇಕು. ಈ ನಿಟ್ಟಿನಲ್ಲಿ ಯೋಜನೆ ಅನುಷ್ಠಾನಕ್ಕಾಗಿ ಪಾದಯಾತ್ರೆ ನಡೆಸುವ ಸಂಬಂಧ ಕೆಪಿಸಿಸಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಚರ್ಚಿಸಿ ನಿರ್ಧರಿಸುತ್ತಾರೆ’ ಎಂದು ಶಾಸಕ ಎಂ.ಬಿ. ಪಾಟೀಲ ತಿಳಿಸಿದರು.

ಇಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಮಹದಾಯಿ ವಿಚಾರದಲ್ಲಿ ಉತ್ತರ ಕರ್ನಾಟಕದ 5 ಜಿಲ್ಲೆಗಳ ಪ್ರಶ್ನೆ ಇದೆ. ಈ ಯೋಜನೆ ತ್ವರಿತಗತಿಯಲ್ಲಿ ಆಗಬೇಕು. ಖಾನಾಪುರಕ್ಕೆ 5 ಟಿಎಂಸಿಯಾದರೂ ನೀರು ಸಿಗುವಂತಾಗಬೇಕು’ ಎಂದು ಒತ್ತಾಯಿಸಿದರು.

‘ಮಹದಾಯಿ ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮಾಡುವ ಬಗ್ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಅಧಿಕೃತವಾಗಿ ನಿಲುವು ತೆಗೆದುಕೊಂಡಿದ್ದಾರೆ. ಪಕ್ಷದ ಮಟ್ಟದಲ್ಲಿ ಎಲ್ಲವನ್ನೂ ಚರ್ಚಿಸಲಾಗುವುದು’ ಎಂದರು.

ADVERTISEMENT

‘ಗೋವಾದವರು ರಾಜಕೀಯ ಕಾರಣಕ್ಕಾಗಿ ಮಾತ್ರ ವಿರೋಧ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು. ‘ತಮ್ಮ ವಿರೋಧದಲ್ಲಿ ಯಾವುದೇ ಹುರುಳಿಲ್ಲ ಎನ್ನುವುದು ಅವರಿಗೂ ಗೊತ್ತಿದೆ’ ಎಂದು ಹೇಳಿದರು.

‘ರಾಜ್ಯದ ನಿಲುವುಗಳ ರೀತಿಯೇ ಪಕ್ಷದ ನಿಲುವುಗಳು ಕೂಡ ಬೇರೆ ಇರುತ್ತವೆ. ರಾಜಕೀಯವಾಗಿ ಸೀಟು ಹೊಂದಾಣಿಕೆ ಅಥವಾ ಮೈತ್ರಿ ಸಂದರ್ಭದಲ್ಲಿ ಮಾತ್ರ ಪಕ್ಷದ ವಿಚಾರ ಬರುತ್ತದೆ. ಆದರೆ, ನೀರಿನ ಹಕ್ಕು ಬಂದಾಗ ರಾಜಿಯಾಗುವ ಪ್ರಶ್ನೆಯೇ ಇಲ್ಲ. ಮಹದಾಯಿ ನೀರು ಪಡೆಯುವ ವಿಚಾರದಲ್ಲಿ ಗೋವಾ ಹಾಗೂ ಮಹಾರಾಷ್ಟ್ರದ ವಿರುದ್ಧ ಹೋರಾಟ ಮುಂದುವರಿಸುತ್ತೇವೆ. ಚುನಾವಣೆಗೂ ಅದಕ್ಕೂ ಸಂಬಂಧವಿಲ್ಲ. ನಮ್ಮ ಹಕ್ಕು ಕೇಳುವ ವಿಚಾರದಲ್ಲಿ ಸುಮ್ಮನಿರುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ಗೋವಾದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರುವುದು ನಿಶ್ಚಿತ. ಆದರೆ, ನೀರಿನ ವಿಷಯದಲ್ಲಿ ನಾವು ಯಾವುದೇ ರೀತಿಯಲ್ಲೂ ರಾಜಿ ಅಥವಾ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.