
ಚಿಕ್ಕೋಡಿ ತಾಲ್ಲೂಕಿನ ಕಲ್ಲೋಳ ಬಳಿ ಕೃಷ್ಣಾ ನದಿ ತೀರದಲ್ಲಿ ಮಹಾಲಕ್ಷ್ಮಿ ಏತ ನೀರಾವರಿ ಯೋಇನೆಯ ಜಾಕವೆಲ್ ನಿರ್ಮಾಣ ಕಾಮಗಾರಿಯನ್ನು ಏತನೀರಾವರಿ ಯೋಜನೆಗಳ ಕಾರ್ಯಕ್ಷಮತೆ ಅಧ್ಯಯನ ಸಮಿತಿ ಅಧ್ಯಕ್ಷ , ಶಾಸಕ ಎಸ್ ರವಿ ಭೇಟಿ ನೀಡಿ ವೀಕ್ಷಿಸಿದರು.
ಚಿಕ್ಕೋಡಿ: ಮಹಾಲಕ್ಷ್ಮೀ ಏತ ನೀರಾವರಿ ಯೋಜನೆಯ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಕಾಮಗಾರಿ ಗುಣಮುಟ್ಟದಿಂದ ಕೂಡಿದೆ. 2ನೇ ಹಂತದ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದುಕೊಂಡ ಬಳಿಕ ಪ್ರಾರಂಭವಾಗಲಿದೆ ಎಂದು ಏತ ನೀರಾವರಿ ಯೋಜನೆಗಳ ಕಾರ್ಯಕ್ಷಮತೆ ಅಧ್ಯಯನ ಸಮಿತಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಎಸ್. ರವಿ ಹೇಳಿದರು.
ತಾಲ್ಲೂಕಿನ ಕಲ್ಲೋಳ ಬಳಿ ಮಹಾಲಕ್ಷ್ಮೀ ಏತನೀರಾವರಿ ಯೋಜನೆ ಜಾಕವೆಲ್ ಹಾಗೂ ಮಲಿಕವಾಡ ಬಳಿ ಪೈಪಲೈನ್ ಕಾಮಗಾರಿ ವೀಕ್ಷಿಸಿ ಮಾತನಾಡಿ, ’ರಾಜ್ಯಾದ್ಯಂತ ಏತನೀರಾವರಿ ಯೋಜನೆ ಸಮಗ್ರ ಅಧ್ಯಯನವನ್ನು ಸಮಿತಿ ಕೈಗೊಂಡಿದ್ದು, ಇದುವರೆಗೆ ನಾಲ್ಕು ಸಭೆ ನಡೆದಿವೆ. ಮಹಾಲಕ್ಷ್ಮೀ ಏತನೀರಾವರಿ ಯೋಜನೆ ವೀಕ್ಷಣೆಯು ಸಮಿತಿಯ ಮೊದಲ ಭೇಟಿಯಾಗಿದೆ. ಯೋಜನೆಯ ಪ್ರಗತಿ, ಯಶಸ್ಸು, ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವಿಕೆ ಹಾಗೂ ರೈತರಿಗೆ ನೀರು ತಲುಪುವಿಕೆ ಕುರಿತು ಅಧ್ಯಯನ ಮಾಡಲಾಗುತ್ತಿದೆ" ಎಂದರು.
ಶಾಸಕ ಗಣೇಶ ಹುಕ್ಕೇರಿ ಹಾಗೂ ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ ಹುಕ್ಕೇರಿ ಪ್ರಯತ್ನದಿಂದಾಗಿ ಯೋಜನೆ ನಿಗದಿ ಅವಧಿಯಲ್ಲಿ ಪೂರ್ಣಗೊಳ್ಳಲಿದ್ದು, ಇನ್ನು ನಾಲ್ಕು ತಿಂಗಳಲ್ಲಿ ರೈತರ ಜಮೀನಿಗೆ ನೀರು ಹರಿಯುವ ವಿಶ್ವಾಸವಿದೆ. ರಾಜ್ಯದ ಇನ್ನುಳಿದ ಏತ ನೀರಾವರಿ ಯೋಜನೆಗಳನ್ನು ಮಹಾಲಕ್ಷ್ಮೀ ಏತ ನೀರಾವರಿ ಯೋಜನೆ ಮಾದರಿಯಲ್ಲಿ ಕೈಗೊಳ್ಳಲು ಸಮಿತಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಿದೆ ಎಂದು ಹೇಳಿದರು.
ಶಾಸಕ ಗಣೇಶ ಹುಕ್ಕೇರಿ ಮಾತನಾಡಿ, ‘ಮೊದಲ ಹಂತದಲ್ಲಿ ₹203 ಕೋಟಿ ಮೊತ್ತದಲ್ಲಿ ಭೌತಿಕ ಕಾಮಗಾರಿ ಹಾಗೂ 10 ಕಿ.ಮೀ ರೈಸಿಂಗ್ ಮೇನ್ ನಿರ್ಮಾಣವಾಗಿದೆ. ಜಾಕವೆಲ್ ಹಾಗೂ ಪಂಪ್‌ಹೌಸ್ ಕಾಮಗಾರಿ ಪ್ರಗತಿಯಲ್ಲಿದೆ. 2ನೇ ಹಂತದಲ್ಲಿ ₹179.30 ಕೋಟಿ ಮೊತ್ತದಲ್ಲಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಶೀಘ್ರದಲ್ಲಿ ಪ್ರಾರಂಭವಾಗಲಿದೆ. ಮಹಾಲಕ್ಷ್ಮೀ ಯೋಜನೆಯಿಂದ 18 ಗ್ರಾಮಗಳ 7800 ಹೆಕ್ಟೇರ್ ಜಮೀನು ನೀರಾವರಿಗೊಳಪಡಲಿದೆ’ ಎಂದರು.
ಏತ ನೀರಾವರಿ ಯೋಜನೆಗಳ ಕಾರ್ಯಕ್ಷಮತೆಯ ಅಧ್ಯಯನ ಸಮಿತಿಯು ಮಹಾಲಕ್ಷ್ಮೀ ಏತನೀರಾವರಿ ಯೋಜನೆಯ ಕಾಮಗಾರಿ ಕೈಗೆತ್ತಿಕೊಂಡ ಅಮೃತ ಕನಸ್ಟ್ರಕ್ಷನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಸಮಿತಿಯ ಸದಸ್ಯರು ಯೋಜನೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.
ಅಧ್ಯಯನ ಸಮಿತಿಯ ಸದಸ್ಯರಾದ ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಕೊಳ್ಳೆಗಾಲ ಶಾಸಕ ಎ. ಆರ್. ಕೃಷ್ಣಮೂರ್ತಿ, ಶ್ರವಣಬೆಳಗೊಳ ಶಾಸಕ ಸಿ.ಎನ್ ಬಾಲಕೃಷ್ಣ, ಗುಂಡ್ಲುಪೇಟೆ ಶಾಸಕ ಎಚ್.ಎಂ ಗಣೇಶಪ್ರಸಾದ್, ವಿಧಾನ ಪರಿಷತ್ ಸದಸ್ಯ ದಿನೇಶ ಗೂಳಿಗೌಡ, ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಶ ಅಮೀನಬಾವಿ, ಮುಖ್ಯ ಅಭಿಯಂತರ ಬಿ.ಆರ್. ರಾಠೋಡ, ಚಿಕ್ಕೋಡಿ ವಿಭಾಗದ ಕಾರ್ಯಪಾಲಕ ಅಭಿಯಂತರ ಎಂ.ಬಿ. ಪೇಡನೇಕರ, ಅಮೃತ ಕನ್ಸ್ಟ್ರಕ್ಷನ್‍ನ ನವೀನಕುಮಾರ ರಾಮನಾಥನ್ ಸೇರಿದಂತೆ ಯೋಜನೆ ವ್ಯಾಪ್ತಿಯ ಗ್ರಾಮಸ್ಥರು, ರೈತರು ಇದ್ದರು.
ಚಿಕ್ಕೋಡಿ ತಾಲ್ಲೂಕಿನ ರೈತರ ಬಹುದಿನಗಳ ಕನಸಾಗಿದ್ದ ಮಹಾಲಕ್ಷ್ಮೀ ಏತನೀರಾವರಿ ಯೋಜನೆಯಿಂದ ಈ ಭಾಗದ ರೈತರ ಜಮೀನು ಹಸಿರಿನಿಂದ ಕಂಗೊಳಿಸಲಿದೆ. ರೈತರ ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ. ಗ್ರಾಮೀಣ ಅಭಿವೃದ್ಧಿಗೆ ಸಹಕಾರಿಯಾಗಲಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.