ADVERTISEMENT

ವಿಕಸಿತ ಭಾರತ ನಿರ್ಮಾಣಕ್ಕೆ ಪೂರಕ: ಮಹಾಂತೇಶ ಕವಟಗಿಮಠ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 5:23 IST
Last Updated 2 ಫೆಬ್ರುವರಿ 2026, 5:23 IST
<div class="paragraphs"><p>ಮಹಾಂತೇಶ ಕವಟಗಿಮಠ</p></div>

ಮಹಾಂತೇಶ ಕವಟಗಿಮಠ

   

ಬೆಳಗಾವಿ: ‘ವಿಕಸಿತ ಭಾರತ ನಿರ್ಮಾಣದ ಗುರಿಗೆ ಪೂರಕವಾದ ಬಜೆಟ್‌ ಇದಾಗಿದೆ’ ಎಂದು ವಿಧಾನ ಪರಿಷತ್‌ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.

ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಈ ಬಜೆಟ್‌ ಮೂಲಕ ಬಡವರಿಗೆ ಶಕ್ತಿ ತುಂಬುವ ಕೆಲಸ ಮಾಡಿದೆ. ಶಿಕ್ಷಣವನ್ನು ಔದ್ಯೋಗಿಕರಣದತ್ತ ಕೊಂಡೊಯ್ದಿದೆ. ಮೂಲಸೌಕರ್ಯ ಸುಧಾರಣೆ ಜತೆಗೆ, ಸಂಪರ್ಕ ಸಂವಹನಕ್ಕೆ ಒತ್ತು ಕೊಟ್ಟಿದೆ’ ಎಂದರು.

ADVERTISEMENT

ಬಿಜೆಪಿ ವಕ್ತಾರ ಎಂ.ಬಿ.ಝಿರಲಿ, ‘2047ರ ಹೊತ್ತಿಗೆ ವಿಕಸಿತ ಭಾರತ ನಿರ್ಮಿಸಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಕನಸಿಗೆ ಒತ್ತು ಕೊಡುವ ಬಜೆಟ್‌ ಇದಾಗಿದೆ. ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಆದ್ಯತೆ ಕೊಡಲಾಗಿದೆ. ಶಿಕ್ಷಣ, ಆರೋಗ್ಯ ಮತ್ತು ಮೂಲಸೌಕರ್ಯ ಅಭಿವೃದ್ಧಿ ರಂಗಗಳಲ್ಲಿ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ಕೊಡಲಾಗಿದೆ. ಇಡೀ ದೇಶದ ಜನರು ಮೆಚ್ಚುವಂಥ ಪರಿಪೂರ್ಣ ಬಜೆಟ್‌ ಇದಾಗಿದೆ’ ಎಂದು ಶ್ಲಾಘಿಸಿದರು.

ಮಾಜಿ ಶಾಸಕ ಅನಿಲ ಬೆನಕೆ, ಪಕ್ಷದ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷೆ ಗೀತಾ ಸುತಾರ, ಪಾಲಿಕೆ ಸದಸ್ಯ ಹನುಮಂತ ಕೊಂಗಾಲಿ ಇದ್ದರು.

ಚಿನ್ನಾಭರಣ ವ್ಯಾಪಾರಕ್ಕೆ ಪೂರಕ: 

‘ಈ ಸಾಲಿನ ಬಜೆಟ್‌ ಚಿನ್ನಾಭರಣ ಹಾಗೂ ರತ್ನದ ಆಭರಣಗಳ ಕ್ಷೇತ್ರಕ್ಕೆ ಉತ್ತೇಜಕವಾಗಿದೆ. ವಿಶೇಷವಾಗಿ ಟಯರ್‌–2 ಹಾಗೂ ಟಯರ್‌–3 ನಗರಗಳಲ್ಲಿ ಕೌಶಲ ಅಭಿವೃದ್ಧಿಗೆ ಒತ್ತು ನೀಡಿರುವುದು ಹೆಚ್ಚು ಫಲಪ್ರದವಾಗಲಿದೆ. ಚಿನ್ನ ಹಾಗೂ ವಜ್ರದ ಉದ್ಯಮದಲ್ಲಿ ಕೈಗೊಂಡ ಕ್ರಮಗಳಿಂದ ದೇಶದ ಆರ್ಥಿಕತೆಗೆ ನೇರವಾದ ಕೊಡುಗೆ ನೀಡಿದಂತಾಗುತ್ತದೆ. ದೇಶದ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ)ದಲ್ಲಿ ಶೇ 7ರಷ್ಟು ಭಾಗವನ್ನು ಚಿನ್ನ ಹಾಗೂ ರತ್ನದ ಉದ್ಯಮವೇ ನೀಡುತ್ತಿದೆ. ಸದ್ಯ ಕೇಂದ್ರ ಸರ್ಕಾರ ತೆಗೆದುಕೊಂಡ ನಿರ್ಧಾರಗಳಿಂದ ಇದು ಇನ್ನಷ್ಟು ಹೆಚ್ಚಲಿದೆ’ ಎಂದು ಚಂದೂಕಾಕಾ ಸರಾಫ್‌ ಜ್ಯುವೆಲ್ಸ್‌ನ ನಿರ್ದೇಶಕ ಸಿದ್ಧಾರ್ಥ ಶಾ ಪ್ರತಿಕ್ರಿಯೆ ನೀಡಿದ್ದಾರೆ.

ಕಾಂಗ್ರೆಸ್ಸಿಗರ ಮಾತೇನು..? |

ಈ ಬಜೆಟ್‌ ರೈತರು ಯುವಕರ ಸಬಲೀಕರಣ ಮತ್ತು ಉದ್ಯೋಗ ಸೃಷ್ಟಿಗೆ ಪೂರಕವಾಗಿಲ್ಲ. ಭದ್ರಾ ಮೇಲ್ದಂಡೆ ನೀರಾವರಿ ಯೋಜನೆಗೆ ಈಗಾಗಲೇ ಘೋಷಿಸಿರುವ ₹5300 ಕೋಟಿ ಅನುದಾನ ಇನ್ನೂ ಬಿಡುಗಡೆ ಆಗಿಲ್ಲ. ಈ ಸಲದ ಬಜೆಟ್‌ನಲ್ಲೂ ಅದರ ಬಗ್ಗೆ ಪ್ರಸ್ತಾಪವಿಲ್ಲ. ರಾಜ್ಯಕ್ಕೆ ಪ್ರಮುಖ ಯೋಜನೆಗಳ ಘೋಷಣೆಯಾಗಿಲ್ಲ. ಇದು ನಿರಾಶಾದಾಯಕ ಬಜೆಟ್‌.
ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಸಚಿವ
ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಪದೇಪದೆ ಅನ್ಯಾಯವಾಗುತ್ತಿದೆ. ಈ ಸಲದ ಬಜೆಟ್‌ನಲ್ಲೂ ಅದು ಮುಂದುವರಿದಿದ್ದು ಕರ್ನಾಟಕ ಕಡೆಗಣಿಸಲಾಗಿದೆ. ಬಿಜೆಪಿಯಲ್ಲಿ ಬಸವರಾಜ ಬೊಮ್ಮಾಯಿ ಜಗದೀಶ ಶೆಟ್ಟರ್‌ ಅವರಂಥ ಹಿರಿಯ ನಾಯಕರಿದ್ದರೂ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತನಾಡುತ್ತಿಲ್ಲ
ಲಕ್ಷ್ಮಿ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
2026-27ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ನಿರ್ಲಕ್ಷಿಸಲಾಗಿದ್ದು ಈ ಭಾಗಕ್ಕೆ ಒಂದೇ ಒಂದು ಯೋಜನೆ ಘೋಷಿಸಿಲ್ಲ.  ಯುವಕರನ್ನು ಪರಿಗಣಿಸಿಲ್ಲ. ಉದ್ಯೋಗ ಸೃಷ್ಟಿ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ  
ಪ್ರಿಯಾಂಕಾ ಜಾರಕಿಹೊಳಿ ಸಂಸದೆ

ಬಿಜೆಪಿಗರು ಏನಂತಾರೆ...?

ದೇಶವನ್ನು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗುವ ಬಡವರು ರೈತರು ಮಹಿಳೆಯರು ಹಾಗೂ ಯುವಕ-ಯುವತಿಯರ ಏಳಿಗೆಗಾಗಿ ರೂಪಿಸಿರುವ ಬಜೆಟ್ ಇದಾಗಿದೆ. ಶಿಕ್ಷಣ ಪ್ರವಾಸೋದ್ಯಮ ಸೇರಿ ವಿವಿಧ ಕ್ಷೇತ್ರಗಳ ಬೆಳವಣಿಗೆಗೂ ಆದ್ಯತೆ ನೀಡಲಾಗಿದೆ. 
ಜಗದೀಶ ಶೆಟ್ಟರ್‌ ಸಂಸದ
ಸಮಗ್ರ ಅಭಿವೃದ್ಧಿಯ ಬಜೆಟ್‌’  ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ಮೂರು ವಿಶೇಷತೆ ಹೊಂದಿದೆ. ದೇಶದ ಆರ್ಥಿಕ ಬೆಳವಣಿಗೆಗೆ ವೇಗ ನೀಡುವ ಜನರ ಆಶೋತ್ತರ ಪೂರೈಸುವ ಹಾಗೂ ಪ್ರತಿ ನಾಗರಿಕನಿಗೂ ಸಂಪನ್ಮೂಲ ಮತ್ತು ಅವಕಾಶ ಒದಗಿಸುವ ಆಶಯ ಹೊಂದಿದೆ. ಒಟ್ಟಾರೆ ಇದು ಸಮಗ್ರ ಅಭಿವೃದ್ಧಿಯ ಬಜೆಟ್‌.
ಈರಣ್ಣ ಕಡಾಡಿ ರಾಜ್ಯಸಭಾ ಸದಸ್ಯ
ನಿರ್ಮಲಾ ಸೀತಾರಾಮನ್ ದೇಶಕ್ಕೆ ಪ್ರಗತಿದಾಯಕವಾದ ಬಜೆಟ್ ಮಂಡಿಸಿದ್ದಾರೆ. ಶಿಕ್ಷಣ ಕೃಷಿ ನೀರಾವರಿ ಸಾರಿಗೆ ಸಣ್ಣ ಕೈಗಾರಿಕೆ ಹಾಗೂ ಬೃಹತ್ ಕೈಗಾರಿಕೆಗೆ ಒತ್ತು ಕೊಟ್ಟಿದ್ದು ಮುಂಬರುವ ದಿನಗಳಲ್ಲಿ ನವ ಕ್ರಾಂತಿ ಉಂಟುಮಾಡಲಿದೆ. ಮಹಿಳಾ ಸಬಲೀಕರಣಕ್ಕೂ ಆದ್ಯತೆ ಕಲ್ಪಿಸಲಾಗಿದೆ. ಈ ಬಜೆಟ್ ರೈತರ ಬದುಕಿಗೆ ಆಶಾಕಿರಣವಾಗಿದೆ.
ಪ್ರಭಾಕರ ಕೋರೆ ರಾಜ್ಯಸಭೆ ಮಾಜಿ ಸದಸ್ಯ
ವಿಕಸಿತ ಭಾರತ ನಿರ್ಮಾಣಕ್ಕಾಗಿ ಮಂಡಿಸಿದ ಸಮರ್ಥ ಬಜೆಟ್‌ ಇದಾಗಿದೆ. ಸರ್ವ ಕ್ಷೇತ್ರಗಳಿಗೂ ಇದು ಶಕ್ತಿ ನೀಡಿದೆ. ರೈತರು ಯುವಕರು ಹಾಗೂ ಮಹಿಳೆಯರ ಸಬಲೀಕರಣಕ್ಕೆ ವಿಶೇಷ ಆದ್ಯತೆ ನೀಡಿರುವುದು ಸಂತಸದ ವಿಚಾರ. ಈ ಬಜೆಟ್ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಅಡಿಪಾಯ ಹಾಕಿದೆ.
ಅಣ್ಣಾಸಾಹೇಬ ಜೊಲ್ಲೆ ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.