ADVERTISEMENT

ರಾಮದುರ್ಗ | ಮಹಾತ್ಮರ ಜಯಂತಿ ಒಟ್ಟಾಗಿ ಆಚರಿಸಿ: ಪ್ರಕಾಶ ಹೊಳೆಪ್ಪಗೋಳ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 6:36 IST
Last Updated 20 ಜನವರಿ 2026, 6:36 IST
ರಾಮದುರ್ಗ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡ ಮಹಾಯೋಗಿ ವೇಮನರ 614ನೇ ಜಯಂತಿ ಅಂಗವಾಗಿ ವೇಮನರ ಭಾವಚಿತ್ರಕ್ಕೆ ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಪೂಜೆ ಸಲ್ಲಿಸಿದರು
ರಾಮದುರ್ಗ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತಾಲ್ಲೂಕು ಆಡಳಿತ ಹಮ್ಮಿಕೊಂಡ ಮಹಾಯೋಗಿ ವೇಮನರ 614ನೇ ಜಯಂತಿ ಅಂಗವಾಗಿ ವೇಮನರ ಭಾವಚಿತ್ರಕ್ಕೆ ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಪೂಜೆ ಸಲ್ಲಿಸಿದರು   

ರಾಮದುರ್ಗ: ನಾಡಿನ ಮಹಾನ್ ನಾಯಕರ ಜನ್ಮ ದಿನಾಚರಣೆಗಳನ್ನು ಸರ್ಕಾರದ ಮಟ್ಟದಲ್ಲಿ ಆಚರಿಸಿ ಅವರ ತತ್ವದಾರ್ಶಗಳನ್ನು ತಿಳಿಸುವುದು ಉದ್ದೇಶವಾಗಿದೆ. ಆಯಾ ಕಾರ್ಯಕ್ರಮಗಳಿಗೆ ಆಯಾ ಸಮುದಾಯಗಳ ಜನರು ಆಗಮಿಸುವುದಕ್ಕಿಂತ ಎಲ್ಲ ಸಮುದಾಯದವರು ಒಟ್ಟಿಗೆ ಆಚರಿಸಬೇಕು ಎಂದು ತಹಶೀಲ್ದಾರ್‌ ಪ್ರಕಾಶ ಹೊಳೆಪ್ಪಗೋಳ ಹೇಳಿದರು.

ತಾಲ್ಲೂಕು ಆಡಳಿತ ಸೌಧದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಹಾಯೋಗಿ ವೇಮನರ 614ನೇ ಜಯಂತಿ ಅಂಗವಾಗಿ ವೇಮನರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಮಹಾಯೋಗಿ ವೇಮನರು ಮನುಕುಲದ ಉದ್ಧಾರಕ್ಕಾಗಿ ರಾಜವೈಭೋಗ ತ್ಯಜಿಸಿದ್ದರು. ಜನರೊಂದಿಗೆ ಬೆರೆತು ಅವರಾಡುವ ಭಾಷೆಯಲ್ಲಿಯೇ ಮೌಲ್ಯಯುತ ವಚನಗಳನ್ನು ರಚಿಸಿ ಕೊಡುಗೆ ನೀಡಿದ್ದಾರೆ. ಎಲ್ಲ ಸಮುದಾಯದವರೂ ಅವರ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಐನಾಪೂರ ಮಾತನಾಡಿ, ನಾಡಿನ ಮಹಾನ್ ಸಾಧಕರು, ಸಂತರು ಆಗಿದ್ದ ವೇಮನರು ಮನುಕುಲದ ಉದ್ಧಾರಕ್ಕಾಗಿಯೇ ಆದರ್ಶ ಮೌಲ್ಯಗಳನ್ನು ನೀಡಿದ್ದಾರೆ. ಆದರ್ಶ ಮೌಲ್ಯಗಳನ್ನು ಪ್ರತಿಯೊಬ್ಬರಿಗೂ ದಾರಿದೀಪವಾಗಿವೆ. ಮುಂದಿನ ಪೀಳಿಗೆಗೆ ವೇಮನರ ಬಗೆಗೆ ತಿಳಿವಳಿಕೆ ನೀಡಬೇಕು ಎಂದು ಹೇಳಿದರು.

ಹೊಸಕೋಟಿ ಸಿಆರ್‌ಪಿ ಪಿ.ಎಲ್. ನಾಯಕ ಉಪನ್ಯಾಸ ನೀಡಿ, ವೇಮನರು ರಡ್ಡಿ ಕುಲದಲ್ಲಿ ಜನಿಸಿದ್ದರೂ ಎಲ್ಲ ಕುಲಜರ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ಸವೆಸಿದರು. ಅವರ ಜೀವನದ ಆದರ್ಶಗಳು ಇಂದಿಗೂ ಪ್ರಸ್ತುತವಾಗಿವೆ. ರಾಜ ವೈಭೋಗವನ್ನು ತ್ಯಜಿಸಿ ಮಾನವ ಕುಲದ ಏಳಿಗೆಗೆ ಶ್ರಮಿಸಿದ್ದಾರೆ. ಜನರಲ್ಲಿರುವ ಅನಿಷ್ಟ ಪದ್ಧತಿಗಳನ್ನು ಅಳೆದು ಹಾಕಲು ಜೀವ ತೆಯ್ದ ವೇಮನರನ್ನು ಸ್ಮರಿಸಬೇಕು ಎಂದು ಹೇಳಿದರು.

ರಡ್ಡಿ ಸಮಾಜ ಮುಖಂಡ ಚನ್ನಬಸವರಾಜ ಹಿರೇರಡ್ಡಿ ಮಾತನಾಡಿದರು. ಮುಖಂಡರಾದ ಡಾ.ಆರ್.ಎ.ಕಣಬೂರ, ಡಾ.ಕೆ.ವಿ.ಪಾಟೀಲ, ರಡ್ಡಿ ಸಮಾಜದ ಅಧ್ಯಕ್ಷ ಜ್ಞಾನೇಶ್ವರ ಮೇಲಪ್ಪಗೋಳ, ಉಪಾಧ್ಯಕ್ಷ ಗೋಪಾಲರಡ್ಡಿ ಸಂಶಿ ಸೇರಿದಂತೆ ಸಮಾಜದ ಮುಖಂಡರು ಹಾಜರಿದ್ದರು.

ಜಿ.ಐ. ಹಕಾಟಿ ಸ್ವಾಗತಿಸಿದರು. ಮಲ್ಲಿಕಾರ್ಜುನರಡ್ಡಿ ಗೊಂದಿ ಕಾರ್ಯಕ್ರಮ ನಿರೂಪಿಸಿದರು. ಎಚ್.ಆರ್.ಭೂಮರಡ್ಡಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.