ಹಿರೇಬಾಗೇವಾಡಿಯಲ್ಲಿ ಕಂಡುಬಂದ ಮಲಬಾರ ಹಾರುವ ಕಪ್ಪೆ
ಪ್ರಜಾವಾಣಿ ಚಿತ್ರ: ಶಿವಕುಮಾರ ಪಾಟೀಲ
ಹಿರೇಬಾಗೇವಾಡಿ (ಬೆಳಗಾವಿ ಜಿಲ್ಲೆ): ಪಶ್ಚಿಮಘಟ್ಟಗಳ ದಟ್ಟಾರಣ್ಯದಲ್ಲಿ ಅಪರೂಪವಾಗಿ ಕಂಡುಬರುವ ‘ಮಲಬಾರ ಹಾರುವ ಕಪ್ಪೆ (ವೈಜ್ಞಾನಿಕ ಹೆಸರು– ಮಲಬಾರ ಗ್ಲೈಡಿಂಗ್ ಫ್ರಾಗ್)’ ಹಿರೇಬಾಗೇವಾಡಿಯಲ್ಲಿ ಕಾಣಿಸಿಕೊಂಡಿದೆ. ಹಸಿರು ಮೈಬಣ್ಣ, ಕಡುಗೆಂಪು ಪಾದ ಮತ್ತು ಹಳದಿಯ ಬೆರಳುಗಳು ಇರುವ ಈ ಕಪ್ಪೆ ನೋಡಲು ದಾಸವಾಳ ಹೂವಿನಂತೆ
ಕಾಣುತ್ತದೆ.
ಹಿರೇಬಾಗೇವಾಡಿಯ ‘ಪ್ರಜಾವಾಣಿ’ ಕಚೇರಿಯ ಗೋಡೆ ಮೇಲೆ ಕಂಡುಬಂದ ಈ ಅಪರೂಪದ ಅತಿಥಿಯನ್ನು ನೋಡಲು ಊರಿನ ಜನ ಮುಗಿಬಿದ್ದರು. ಇದರ ಫೋಟೊ ಕ್ಲಿಕ್ಕಿಸಿ, ವಿಡಿಯೊ ಮಾಡಿಕೊಂಡರು. ಅತ್ಯಂತ ಚುರುಕಿನಿಂದ ನೆಗೆಯುವ ಈ ಕಪ್ಪೆ ಮರದಿಂದ ಮರಕ್ಕೆ ಹಾರುವ ಸಾಮರ್ಥ್ಯ ಹೊಂದಿದೆ.
‘ಮಲಬಾರ್ ಗ್ಲೈಡಿಂಗ್ ಫ್ರಾಗ್ ಎಂಬ ಹಸಿರು ಕಪ್ಪೆ ನಿಂತ ನೀರಿನ ಮೂಲವನ್ನು ಹುಡುಕಿ ಹೋಗುತ್ತದೆ. ಅಲ್ಲಿ ತನ್ನ ದೇಹದಿಂದ ನೊರೆಯನ್ನು ಉತ್ಪಾದಿಸಿ ಮೊಟ್ಟೆ ಇಡುತ್ತದೆ. ನೊರೆಯ ಹೊರಭಾಗ ಗಟ್ಟಿಯಾಗಿ ಗೂಡಿನಂತಾಗುತ್ತದೆ. ಗೂಡಿನ ಒಳಗಿನ ತೇವದಲ್ಲಿ ಬೆಳೆಯುವ ಮೊಟ್ಟೆಗಳು ಒಂದು ವಾರದ ನಂತರ ಜಾರಿ ನೀರಿಗೆ ಬೀಳಬೇಕು ಎಂಬುದು ಇದರ ಉದ್ದೇಶ. ಕೆಲವು ಜಾತಿ ಕಪ್ಪೆಗಳಲ್ಲಿ ಗಂಡುಗಳ ಸಂಖ್ಯೆ ಅಧಿಕವಿದ್ದು 20ರಿಂದ 30 ಗಂಡುಗಳಿಗೆ ಒಂದು ಹೆಣ್ಣನ್ನು ನೋಡಬಹುದು’ ಎಂದು ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್. ನಾಯಕ ತಿಳಿಸಿದರು.
‘ಗಂಡುಗಳು ಸಂಗಾತಿಯನ್ನು ಆಕರ್ಷಿಸಲು ಕೂಗುತ್ತವೆ, ಹೆಣ್ಣುಗಳು ಬಹುತೇಕ ಮೌನವಾಗಿರುತ್ತವೆ. ಗಂಡಿನ ಕೂಗಿನ ಶಬ್ದದ ಏರಿಳಿತ ಗಮನಿಸಿ ಇಷ್ಟ ಬಂದ ಗಂಡಿನ ಬಳಿ ಮಿಲನಕ್ಕೆ ಹೋಗುತ್ತವೆ. ಇಂತಹ ಲಕ್ಷಣಗಳನ್ನು ಮಲಬಾರ ಜಾತಿಯ ಕಪ್ಪೆಗಳಲ್ಲಿ ಹೆಚ್ಚು ಕಾಣಬಹುದು. ಇದು ಮಲೆನಾಡಿನ ಕಾಡಿನಿಂದ ನದಿಯಲ್ಲಿ ತೇಲಿ ಇಲ್ಲಿಗೆ ಬಂದಿರಬಹುದು’ ಎಂದರು.
‘ಈ ಕಪ್ಪೆಗಳು ಕೀಟಗಳನ್ನು ಭಕ್ಷಿಸುತ್ತವೆ. ಆದರೆ, ಇತ್ತೀಚಿಗೆ ಜಲ ಮೂಲಗಳು ಮಲಿನವಾಗುತ್ತಿರುವ ಕಾರಣ ಕಪ್ಪೆಗಳ ಸಂತತಿ ವಿನಾಶದತ್ತ ಸಾಗಿದೆ. ಜೀವ ವೈವಿಧ್ಯದ ಕೊಂಡಿಗಳಾಗಿರುವ ಕಪ್ಪೆಗಳ ಸಂತತಿ ಕ್ಷೀಣಿಸಲು ಜಾಗತಿಕ ತಾಪಮಾನದ ಏರಿಕೆ, ಕಾಳ್ಗಿಚ್ಚು ಸಹ ಕಾರಣ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.