ಹುಬ್ಬಳ್ಳಿ: ಇಲ್ಲಿನ ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಭಾನುವಾರ ಶೇ 49.45ರಷ್ಟು ಮತದಾನವಾಗಿದೆ. ಒಟ್ಟು 16,903 ಮತಗಳ ಪೈಕಿ 8,359 ಮತದಾರರು ಮತ ಚಲಾಯಿಸಿದರು. ಒಂದಷ್ಟು ವಾಗ್ವಾದಗಳನ್ನು ಹೊರತುಪಡಿಸಿ, ಚುನಾವಣೆ ಶಾಂತ ರೀತಿಯಿಂದ ನೆರವೇರಿತು. ಈಗೇನಿದ್ದರೂ ಫಲಿತಾಂಶದ ಕಡೆ ಮಾತ್ರ ಎಲ್ಲರ ದೃಷ್ಟಿ ನಟ್ಟಿದೆ.
ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮತದಾನ ಸಂಜೆ 5.30ಕ್ಕೆ ಪೂರ್ಣಗೊಂಡಿತು. ಕೇಂದ್ರದ ಬಳಿ ಅಚ್ಚುಕಟ್ಟಾಗಿ ಎಲ್ಲ ವ್ಯವಸ್ಥೆ ಮಾಡಿದ್ದರಿಂದ ಯಾವುದೇ ಅಡಚಣೆಯಾಗದೇ ಸುವ್ಯವಸ್ಥಿತ ಕಾರ್ಯ ನಡೆಯಿತು.
ವಾಹನಗಳ ಮೂಲಕ ತಂಡೋಪ ತಂಡವಾಗಿ ಆಗಮಿಸಿದ ರೈತ ಮತದಾರರು ಸರತಿಯಲ್ಲಿ ನಿಂತು ಉತ್ಸಾಹದಿಂದ ತಮ್ಮ ಹಕ್ಕು ಚಲಾಯಿಸಿದರು. ಈ ಬಾರಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಪ್ರವೇಶದಿಂದಾಗಿ ಕಾರ್ಖಾನೆಯ ಚುನಾವಣೆ ಹೆಚ್ಚು ರಂಗು ಪಡೆಯಿತು. ವಿರೋಧಿ ಗುಂಪಿನಲ್ಲಿರುವ, ಹಲವು ವರ್ಷಗಳಿಂದ ಕಾರ್ಖಾನೆಯ ಏಳು– ಬೀಳುಗಳಿಗೆ ಸಾಕ್ಷಿಯಾದ ಹಲವು ಘಟಾನುಘಟಿ ಮುಖಂಡರೂ ಒಂದೇ ಕಡೆ ಕಾಣಿಸಿಕೊಂಡರು.
15 ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 44 ಜನ ಅಭ್ಯರ್ಥಿಗಳು ಸ್ಫರ್ಧೆಗಿಳಿದಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಶಾಸಕರಾದ ಬಾಬಾಸಾಹೇಬ ಪಾಟೀಲ, ವಿಠ್ಠಲ ಹಲಗೆಕರ್ ಮಾರ್ಗದರ್ಶನದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ನೇತೃತ್ವದಲ್ಲಿ ‘ಮಲಪ್ರಭಾ ಸಹಕಾರ ಸಕ್ಕರೆ ಕಾರ್ಖಾನೆ ರೈತರ ಪುನಶ್ಚೇತನ’ ಪ್ಯಾನಲ್, ಕಾರ್ಖಾನೆ ಮಾಜಿ ಅಧ್ಯಕ್ಷ, ಜೆಡಿಎಸ್ ಮುಖಂಡ ನಾಸೀರ್ ಬಾಗವಾನ ನೇತೃತ್ವದ ‘ರೈತರ ಹಾಗೂ ಕಾರ್ಮಿಕರ ಹಿತರಕ್ಷಣಾ’ ಪ್ಯಾನಲ್ ಹಾಗೂ ರೈತ ಸಂಘದ ಮುಖಂಡ ಬಸವರಾಜ ಮೋಕಾಶಿ ನೇತೃತ್ವದ ‘ಕಬ್ಬು ಬೆಳೆಗಾರರ ಹಾಗೂ ಕಾರ್ಖಾನೆ ಅಭಿವೃದ್ಧಿ’ ಪ್ಯಾನಲ್ ಸ್ಫರ್ಧೆಯಲ್ಲಿವೆ.
ವೃದ್ಧರು ಮತ್ತು ಅಂಗವಿಕಲರಿಗಾಗಿ ಚುನಾವಣಾ ಕೇಂದ್ರದ ಮುಖ್ಯಧ್ವಾರದಿಂದ ಮತಗಟ್ಟೆಗಳ ಬಳಿಗೆ ತೆರಳಲು ಕಾರ್ಖಾನೆ ವಾಹನ ಸೌಲಭ್ಯ ಒದಗಿಸಿತ್ತು. ಒಟ್ಟು 34 ಮತಗಟ್ಟೆಗಳನ್ನು ಸ್ಥಾಪಿಸಿ, ನೂರಾರು ಸಿಬ್ಬಂದಿ ಚುನಾವಣಾ ಕಾರ್ಯಕ್ಕೆ ನೇಮಿಸಲಾಗಿತ್ತು. ಸಿಬ್ಬಂದಿ ಮೂಲಕ ಮತದಾನಕ್ಕೆ ಬಂದ ಮತದಾರರಿಗೆ ಅವರ ಷೇರು ಸಂಖ್ಯೆ ಹುಡುಕಿಕೊಡಲು ನೆರವಾದರು.
ಈ ಬಾರಿ ಎಲ್ಲ ಷೇರುದಾರ ಮತದಾರರಿಗೆ ಮತದಾನದ ಹಕ್ಕು ನೀಡಿದ್ದರಿಂದ ಮತದಾನದ ಪ್ರಮಾಣ ಈ ಬಾರಿ ಹೆಚ್ಚಾಯಿತು. ಘಟಾನುಘಟಿಗಳ ಸ್ಪರ್ಧೆ, ಮುಂದಾಳತ್ವವು ಈ ಬಾರಿಯ ಮತದಾನ ಹೆಚ್ಚಳಕ್ಕೆ ಪ್ರಮುಖ ಕಾರಣವಾಯಿತು.
ಚುನಾವಣಾಧಿಕಾರಿಗಳಾಗಿ ಪ್ರಭಾವತಿ ಫಕ್ಕೀರಪುರ ಕಾರ್ಯನಿರ್ವಹಿಸಿದರು. ಬೀಗಿ ಪೊಲೀಸ್ ಬಂದೋಬಸ್ತ್ ಒದಗಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.