
ಸವದತ್ತಿ: ತಾಲ್ಲೂಕಿನ ನವಿಲುತೀರ್ಥ ಜಲಾಯಶ 11ನೇ ಬಾರಿ ಭರ್ತಿಯಾದ ಹಿನ್ನೆಲೆಯಲ್ಲಿ ಮಂಗಳವಾರ ಶಾಸಕ ವಿಶ್ವಾಸ್ ವೈದ್ಯ, ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಅವರು ಗಂಗಾ ಪೂಜೆ ನೆರವೇರಿಸಿ ಮಲಪ್ರಭೆ ನದಿಗೆ ಬಾಗಿನ ಅರ್ಪಿಸಿದರು.
ಬಳಿಕ ನವಿಲುತೀರ್ಥ ಡ್ಯಾಂ ಸೈಟ್‌ನ ಆಡಳಿತ ಕಚೇರಿಯಲ್ಲಿ ಜರುಗಿದ ಮಲಪ್ರಭಾ ನೀರಾವರಿ ಸಲಹಾ ಸಮಿತಿಯ ಎರಡನೇಯ ಸಭೆಯಲ್ಲಿ ಶಾಸಕ ವಿಶ್ವಾಸ್ ವೈದ್ಯ ಮಾತನಾಡಿ, ‘2026ರ ಜುಲೈವರೆಗೂ ಕುಡಿಯಲು ಬೇಕಾದ 16.4 ಟಿಎಂಸಿ ನೀರು ಸಂಗ್ರಹ ಇದೆ. ಜೊತೆಗೆ ರೈತರ ಅನುಕೂಲಕ್ಕಾಗಿ 150 ಕಿ.ಮೀ ಉದ್ದದ ಎಡದಂಡೆ ಹಾಗೂ 142 ಕಿ.ಮೀ ಉದ್ದದ ಬಲದಂಡೆ ಕಾಲುವೆಗಳ ಮೂಲಕ ಕಾಲಾನುಕ್ರಮ 72 ದಿನಗಳವರೆಗೆ ಸುಮಾರು 18 ಟಿಎಂಸಿ ರೈತರ ಒತ್ತಾಸೆಯಂತೆ ನೀರು ಹರಿಸಲಾಗುವುದು’ ಎಂದರು.
‘ಅಲ್ಲಲ್ಲಿ ಕಬ್ಬು ಕಟಾವು ನಡೆದಿದ್ದು ರೈತರ ಅನುಕೂಲಕ್ಕಾಗಿ ಎಡದಂಡೆ ಕಾಲುವೆಗೆ ತಡವಾಗಿ ನೀರು ಬಿಡಲಾಗುವುದು. ಅಣೆಕಟ್ಟಿನ ಕೆಳಭಾಗದ ಬಲದಂಡೆ ಕಾಲುವೆಯ ರಿವರ್ಸ್ ಸೈಫನ್ ಹಾನಿಗೀಡಾಗಿದ್ದು, ಇದಕ್ಕಾಗಿ ₹19 ಕೋಟಿ ಅನುದಾನ ಮೀಸಲಿರಿಸಿದ್ದು ಟೆಂಡರ್ ಹಂತದಲ್ಲಿದೆ. ಏತನೀರಾವರಿಗಳಲ್ಲಿನ ನೀರೆತ್ತುವ ಯಂತ್ರಗಳ ನವೀಕರಣಕ್ಕೆ ₹20 ಕೋಟಿಗೂ ಅಧಿಕ ಅನುದಾನ ನೀಡಲಾಗುತ್ತಿದೆ’ ಎಂದರು.
ಸಮೃದ್ಧ ವರ್ಷಧಾರೆಯಿಂದ ಉತ್ತರ ಕರ್ನಾಟಕದ ರೈತರ ಜೀವನಾಡಿ ಮಲಪ್ರಭಾ ಜಲಾಶಯ 11ನೇ ಬಾರಿ ಭರ್ತಿಯಾಗಿದ್ದು ಸಂತಸ ಮೂಡಿಸಿದೆ. ಈ ಸುದಿನದಂದು ‘ಬಾಗಿನ’ ಅರ್ಪಿಸುವ ಸದಾವಕಾಶ ನನಗೆ ಒದಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ನವಲಗುಂದ ಶಾಸಕ ಎನ್.ಎಚ್. ಕೋನರಡ್ಡಿ ಮಾತನಾಡಿ, ‘ಬೆಳಗಾವಿ, ಬಾಗಲಕೋಟೆ, ಗದಗ, ಧಾರವಾಡ ಜಿಲ್ಲೆಗಳ ಜನರಿಗೆ ಮಲಪ್ರಭೆ ಅಮೃತ ಸಮಾನ. ನದಿ ಭರ್ತಿಯಾಗಿದ್ದು, ಸಧ್ಯ ಸಮಸ್ಯೆಯಿಲ್ಲ. ಬೇಸಿಗೆಯಲ್ಲಿ ರೈತರ ಜಮೀನು ಸೇರಿ ಕುಡಿಯುವ ನೀರಿಗಾಗಿ ಪರಿತಪಿಸುವಂತ ಸಂದರ್ಭ ಎದುರಾಗಬಹುದು. ಕಾರಣ ಕಳಸಾ– ಬಂಡೂರಿ ಸೇರಿಸುವ ಯೋಜನೆ ಶೀಘ್ರ ಅನುಷ್ಠಾನಗೊಳ್ಳಬೇಕಿದೆ’ ಎಂದರು.
ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ‘ಜಲಾಶಯದ ನೀರನ್ನು 15 ದಿನ ಬಳಿಕ ರೈತರ ಬೇಡಿಕ ಅನುಸಾರ ಹರಿಸಲಾಗುವುದು. ಶಾಸಕ ವಿಶ್ವಾಸ್ ವೈದ್ಯ ನೇತೃತ್ವದಲ್ಲಿ ರೈತರಿಗೆ ಹಾಗೂ ಸಾರ್ವಜನಿಕರಿಗೆ ನೀರಿನ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು’ ಎಂದರು.
ತಹಶೀಲ್ದಾರ್ ಎಂ.ಎನ್. ಹೆಗ್ಗನ್ನವರ, ಸುರೇಶ ಬಡಗಿಗೌಡ್ರ, ಡಿ.ಡಿ. ಟೋಪೋಜಿ, ಡ್ಯಾಂ ಎ.ಇ ಸುಭಾಷ ನಾಯಕ ಸೇರಿ ಪ್ರಮುಖರು ಇದ್ದರು.
ಸಮಸ್ಯೆಗೆ ಸ್ಪಂದಿಸದ ಅಧಿಕಾರಿಗಳು: ಆಕ್ರೋಶ
ಜಲಾಶಯದ ಬಹುತೇಕ ಕಾಲುವೆಗಳು ಸಂಪೂರ್ಣವಾಗಿ ಹೂಳು ತುಂಬಿ ಗಿಡಗಂಟಿಗಳು ಬೆಳೆದು ಕಾಲುವೆಯ ಅಂತ್ಯದವರೆಗೂ ನೀರು ತಲುಪುತ್ತಿಲ್ಲ. ಕಸ ಕಾಲುವೆಗಳನ್ನು ಸಂಪೂರ್ಣವಾಗಿ ಆವರಿಸಿದೆ. ಏತನೀರಾವರಿಗಳಲ್ಲಿನ ಯಂತ್ರಗಳು ಪೂರ್ಣಪ್ರಮಾಣದಲ್ಲಿ ಹಾಳಾಗಿದ್ದು ತ್ವರಿತವಾಗಿ ದುರಸ್ತಿಗೊಳಿಸಬೇಕಿದೆ. ಶಿರಸಂಗಿ ಗ್ರಾಮದ ಕಾಲುವೆ ತುಂಡಾಗಿದ್ದು ಸಮಸ್ಯೆಗೆ ಸೂಕ್ತ ಕ್ರಮವಹಿಸಿ. ಕುಡಿಯಲು ಕೇವಲ 7 ಟಿಎಂಸಿ ನೀರು ಇರಿಸಿ ಒಟ್ಟು 15 ಟಿಎಂಸಿ ಎಂದು ಜನತೆಗೆ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ಅಧಿಕಾರಿಗಳು ಈ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ರೈತರು ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.