ಎಂ.ಕೆ.ಹುಬ್ಬಳ್ಳಿ: ‘ರೈತನ ಮಗಳು ನಾನು. ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯೊಂದಿಗೆ ನಮ್ಮದು ಅವಿನಾಭಾವ ಸಂಬಂಧ. ಕಾರ್ಖಾನೆ ಆರಂಭದಿಂದಲೂ ಇಲ್ಲಿನ ಶೇರುದಾರ ರೈತರು ನಾವು. ಸಂಕಷ್ಟದಲ್ಲಿರುವ ಕಾರ್ಖಾನೆಗೆ ಪುನಶ್ಚೇತನ ನೀಡಲು ಸಹೋದರನನ್ನು ಕಳಿಸಿರುವೆ. ಕಾರ್ಖಾನೆಗೆ ಗತವೈಭವ ಮರುಸ್ಥಾಪಿಸುವುದೇ ನಮ್ಮ ಗುರಿ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಇಲ್ಲಿಗೆ ಸಮೀಪದ ದಾಸ್ತಿಕೊಪ್ಪ ಗ್ರಾಮದ ದೇವರಕೊಂಡ ಮಠದ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ಶ್ರೀ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ನಿರ್ದೇಶಕ ಸ್ಥಾನದ ಚುನಾವಣೆಯ ರೈತರ ಪೆನಲ್ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು.
‘ನಾವು ಹೊರಗಿನವರು, ಕಾರ್ಖಾನೆ ಖಾಸಗಿಕರಣ ಮಾಡಲು ಬಂದಿದ್ದೇವೆಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ರೈತರು ಆಶೀರ್ವದಿಸಿದರೇ, ಅಭಿವೃದ್ಧಿ ಮೂಲಕ ಉತ್ತರ ನೀಡುತ್ತೇವೆ. ಇದು ರೈತರ ಕಾರ್ಖಾನೆ. ರೈತರೇ ಇದರ ಮಾಲೀಕರು. ಕಾರ್ಖಾನೆ ಉಳಿಸಿ-ಬೆಳೆಸುವುದೊಂದೇ ನಮ್ಮ ಗುರಿ, ಯಾವುದೇ ದುರುದ್ದೇಶ ನಮಗಿಲ್ಲ ಎಂದರು.
ಸಹೋದರ ಚನ್ನರಾಜ ಹಟ್ಟಿಹೊಳಿ 15 ಜನ ಅಭ್ಯರ್ಥಿಗಳು ಕಾರ್ಖಾನೆ ಪುನಶ್ಚೇತನ ರೈತರ ಪೆನಲ್‌ನೊಂದಿಗೆ ರೈತರ ಆಶೀರ್ವಾದ ಪಡೆಯಲು ಬಂದಿದ್ದಾನೆ. ಕಾರ್ಖಾನೆ ಅಭಿವೃದ್ಧಿಯ ಗುರಿ ಇಟ್ಟಿದ್ದಾನೆ. ಸಂಕಷ್ಟದಲ್ಲಿರುವ ಕಾರ್ಖಾನೆ ಉಳಿಸಲು ರೈತರು ಕೈಜೊಡಿಸಬೇಕು ಎಂದರು.
‘ಇಲ್ಲಿನ ಶಾಸಕರಾದ ಬಾಬಾಸಾಹೇಬ ಪಾಟೀಲ, ಖಾನಾಪುರ ಶಾಸಕ ವಿಠ್ಠಲ ಹಲಗೇಕರ ಜೊತೆಗೂಡಿ ಸರ್ಕಾರದ ಸಹಾಯ, ಸೌಲಭ್ಯ ಪಡೆದು ಕಾರ್ಖಾನೆ ಪುನಶ್ಚೇತನ ಮಾಡುತ್ತೇವೆ. ಕೊಟ್ಟ ಭರವಸೆ ಈಡೇರಿಸುವ ಜವಾಬ್ದಾರಿ ನಮ್ಮದು‘ ಎಂದರು.
ಚುನಾವಣಾ ಅಭ್ಯರ್ಥಿ, ‘ಇತಿಹಾಸ ಹೊಂದಿರುವ ಈ ಕಾರ್ಖಾನೆ ಉಳಿಸಿ-ಬೆಳೆಸಬೇಕು ಎಂದು ಚುನಾವಣೆಗೆ ಸ್ಫರ್ಧಿಸಿದ್ದೇವೆ. ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ರೈತರ, ಕಾರ್ಮಿಕರ ಹಿತಾಸಕ್ತಿ ಕಾಯುವ ಜೊತೆಗೆ ಕಾರ್ಖಾನೆಗೆ ಗತವೈಭವ ಮರುಸ್ಥಾಪಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇವೆ. ಹಾಗಾಗಿ ನಮ್ಮ ಪೆನಲ್‌ನ ಎಲ್ಲ 15 ಜನ ಅಭ್ಯರ್ಥಿಗಳಿಗೆ ರೈತರೆಲ್ಲರೂ ಮತ ನೀಡಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿ, ‘ವಿರೋಧಿಗಳು ಮಾಡುತ್ತಿರುವ ಟೀಕೆ ಟಿಪ್ಪಣಿಗೆ ಕಾರ್ಖಾನೆ ಅಭಿವೃದ್ಧಿ ಮೂಲಕ ಉತ್ತರ ನೀಡುತ್ತೇವೆ. ಸಂಕಷ್ಟದಲ್ಲಿರುವ ಕಾರ್ಖಾನೆ ಉಳಿಸಿ-ಬೆಳೆಸುವ ಉದ್ದೇಶದಿಂದ ಈ ಪೆನಲ್ ಕಟ್ಟಿದ್ದೇವೆ. ಹಾಗಾಗಿಯೇ ಪಕ್ಷಾತೀತವಾಗಿ ಚುನಾವಣೆಗೆ ಮುಂದಾಗಿದ್ದೇವೆ. ರೈತರ ಕಲ್ಪವೃಕ್ಷ ಮಲಪ್ರಭಾ ಕಾರ್ಖಾನೆ. ಈ ಭಾಗದ ರೈತರ ಜೀವನಾಡಿ. ಕಾರ್ಖಾನೆಗೆ ಶಕ್ತಿ ತುಂಬಲು ಮಲಪ್ರಭಾ ಪುನಶ್ಚೇತನ ಪೆನಲ್ ಬೆಂಬಲಿಸಿ ರೈತರೆಲ್ಲರೂ ಮತ ಹಾಕಬೇಕು ಎಂದು ಮನವಿ ಮಾಡಿದರು.
ಪೆನಲ್ ನ ಅಭ್ಯರ್ಥಿಗಳಾದ ಶ್ರೀಕಾಂತ ಇಟಗಿ, ಶಂಕರ ಕಿಲ್ಲೇದಾರ, ಶ್ರೀಶೈಲ ತುರಮರಿ, ರಘು ಪಾಟೀಲ, ರಾಮನಗೌಡ ಪಾಟೀಲ, ಶಿವನಗೌಡ ಪಾಟೀಲ, ಶಿವಪುತ್ರಪ್ಪ ಮರಡಿ, ಸುರೇಶ ಹುಲಿಕಟ್ಟಿ, ಲಲಿತಾ ಪಾಟೀಲ, ಸುನೀತಾ ಲಂಗೋಟಿ, ಫಕ್ಕೀರಪ್ಪ ಸಕ್ರೆಣ್ಣವರ, ಶಂಕರೆಪ್ಪ ಹೊಳಿ, ಬಾಳಪ್ಪ ಪೂಜಾರ, ಭರಮಪ್ಪ ಶಿಗಿಹಳ್ಳಿ ಹಾಗೂ ಮುಖಂಡರು, ಗಣ್ಯರು, ರೈತರು, ಅಭಿಮಾನಿಗಳು, ಕಾರ್ಯಕರ್ತರು ಮತ್ತು ಪಕ್ಷಾತೀತವಾಗಿ ಎಲ್ಲರೂ ಪಾಲ್ಗೊಂಡಿದ್ದರು.
ಸಾಗರ ದೇಸಾಯಿ ಸ್ವಾಗತಿಸಿದರು. ರವಿ ಕಾರಲಕಟ್ಟಿ ನಿರೂಪಿಸಿದರು. ಪ್ರಕಾಶಗೌಡ ಪಾಟೀಲ ಪ್ರಾಸ್ಥಾವಿಕ ನುಡಿಗಳನ್ನಾಡಿದರು.
ಸಂಕಷ್ಟದಲ್ಲಿರುವ ಕಾರ್ಖಾನೆ ಉಳಿವಿಗೆ ಶಕ್ತಿ ತುಂಬಬೇಕಿದೆ. ಅದಕ್ಕಾಗಿ ಮಲಪ್ರಭಾ ಪುನಶ್ಚೇತನ ಪೆನಲ್ ರಚಿಸಿ ಸಹೋದರ ಚೆನ್ನರಾಜ ಅವರನ್ನು ಕಳಿಸಿದ್ದೇನೆ
-ಲಕ್ಷ್ಮೀ ಹೆಬ್ಬಾಳಕರ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.