ADVERTISEMENT

ಚಿಕ್ಕೋಡಿ: ಅನ್ನಪೂರ್ಣೇಶ್ವರಿ ಬಡಾವಣೆಯಲ್ಲಿ ಅವ್ಯವಸ್ಥೆ

ಮೂಲ ಸೌಲಭ್ಯಗಳಿಲ್ಲದೆ ನಿವಾಸಿಗಳಿಗೆ ತೊಂದರೆ

ಸುಧಾಕರ ಎಸ್.ತಳವಾರ, ಬೆಂಗಳೂರು
Published 20 ಏಪ್ರಿಲ್ 2021, 5:12 IST
Last Updated 20 ಏಪ್ರಿಲ್ 2021, 5:12 IST
ಚಿಕ್ಕೋಡಿ ಪಟ್ಟಣದ ಅನ್ನಪೂಣೇಶ್ವರಿ ಬಡಾವಣೆಯಲ್ಲಿ ರಸ್ತೆ ಡಾಂಬರು ಕಂಡಿಲ್ಲ
ಚಿಕ್ಕೋಡಿ ಪಟ್ಟಣದ ಅನ್ನಪೂಣೇಶ್ವರಿ ಬಡಾವಣೆಯಲ್ಲಿ ರಸ್ತೆ ಡಾಂಬರು ಕಂಡಿಲ್ಲ   

ಚಿಕ್ಕೋಡಿ: ಬಡಾವಣೆ ನಿರ್ಮಾಣಗೊಂಡು ಆರೇಳು ವರ್ಷಗಳು ಕಳೆದರೂ ಸಮರ್ಪಕ ರಸ್ತೆ ಇಲ್ಲ. ಬೀದಿ ದೀಪ, ಚರಂಡಿ ವ್ಯವಸ್ಥೆ ಮೊದಲಾದವು ಸರಿ ಇಲ್ಲ. ಇಲ್ಲಿನ ನಿವಾಸಿಗಳ ಗೋಳು ಕೇಳೋರಿಲ್ಲ.

ಇದು ಚಿಕ್ಕೋಡಿ ಪಟ್ಟಣದ ಅನ್ನಪೂರ್ಣೇಶ್ವರಿ ಬಡಾವಣೆಯ ದುಃಸ್ಥಿತಿ.

ಪಟ್ಟಣದ ಹೊರವಲಯದಲ್ಲಿ ನಿಪ್ಪಾಣಿ -ಮುಧೋಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಎಲ್ಐಸಿ ಶಾಖಾ ಕಚೇರಿ ಹಿಂಭಾಗದಲ್ಲಿ ಅಭಿವೃದ್ಧಿಪಡಿಸಿರುವ ಈ ಬಡಾವಣೆಯಲ್ಲಿ 70ಕ್ಕೂ ಹೆಚ್ಚು ನಿವೇಶನಗಳಿವೆ. ಆ ಪೈಕಿ 32 ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಂಡು ಜನರು ವಾಸಿಸುತ್ತಿದ್ದಾರೆ. ಆದರೆ, ಬಡಾವಣೆ ಅಭಿವೃದ್ಧಿಪಡಿಸಿ ಆರೇಳು ವರ್ಷ ಕಳೆದರೂ ಸಮರ್ಪಕವಾದ ಮೂಲಸೌಕರ್ಯಗಳನ್ನು ಒದಗಿಸಿಲ್ಲ. ಬಡಾವಣೆ ವ್ಯಾಪ್ತಿಯಲ್ಲಿ ರಸ್ತೆ ಡಾಂಬರೀಕರಣಗೊಳಿಸಿಲ್ಲ. ಕಚ್ಚಾರಸ್ತೆಯನ್ನೇ ನಿವಾಸಿಗಳು ಬಳಸುತ್ತಿದ್ದು, ಎರೆಮಣ್ಣು ಇರುವುದರಿಂದ ಮಳೆಯಾದಾಗ ರಸ್ತೆಗಳು ಕೆಸರುಗದ್ದೆಯಂತಾಗಿ ರೂಪುಗೊಳ್ಳುತ್ತವೆ. ಮಕ್ಕಳು, ವಯೋವೃದ್ಧರು ಓಡಾಡಲು ಬಹಳ ಕಷ್ಟಪಡಬೇಕು. ದ್ವಿಚಕ್ರವಾಹನ, ಕಾರು ಮೊದಲಾದ ವಾಹನಗಳ ಸಂಚಾರವಂತೂ ಕಷ್ಟಸಾಧ್ಯ ಎಂಬಂತಹ ಪರಿಸ್ಥಿತಿ ಇದೆ. ಜನರು ಅನಿವಾರ್ಯವಾಗಿ ಸರ್ಕಸ್ ಮಾಡಿಕೊಂಡೇ ಸಂಚರಿಸುವುದು ಸಾಮಾನ್ಯವಾಗಿದೆ. ಇದು, ಅನಾಹುತಗಳಿಗೆ ಆಹ್ವಾನ ನೀಡುತ್ತಿದೆ.

ADVERTISEMENT

ರಸ್ತೆ ಬದಿಗಳಲ್ಲಿ ಸರಿಯಾಗಿ ಚರಂಡಿಗಳನ್ನು ನಿರ್ಮಿಸಿಲ್ಲ. ನಿರ್ಮಿಸಿರುವ ಚರಂಡಿಗಳು ಕೆಲವಡೆ ಒಡೆದು ಹೋಗಿದೆ. ಮಲಿನ ನೀರು ರಸ್ತೆಯ ಮೇಲೆ ಹರಿಯುವುದೂ ಇದೆ. ಇದರಿಂದಾಗಿ ಅಲ್ಲಲ್ಲಿ ನೀರು ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿ ರೂಪುಗೊಂಡಿದ್ದು, ಸಾಂಕ್ರಾಮಿಕ ರೋಗಗಳ ಹರಡುವಿಕೆಗೂ ಕಾರಣವಾಗಿದೆ.

ಬೀದಿ ದೀಪಗಳ ಅಳವಡಿಕೆಯನ್ನೂ ಸರಿಯಾಗಿ ಮಾಡಿಸಿಲ್ಲ. ಇದರಿಂದಾಗಿ ಜನರು ರಾತ್ರಿ ವೇಳೆ ಕತ್ತಲಿನಲ್ಲಿ ಸಂಚರಿಸಬೇಕಾಗಿದೆ. ಬಡಾವಣೆಯ ಕೆಲವು ಭಾಗದಲ್ಲಿ ಮಾತ್ರ ಬೀದಿ ದೀಪ ವ್ಯವಸ್ಥೆ ಮಾಡಲಾಗಿದೆ ಎಂದು ಬಡಾವಣೆ ನಿವಾಸಿಗಳು ಅಳಲು ತೋಡಿಕೊಳ್ಳುತ್ತಾರೆ. ಇಲ್ಲಗಳಿಂದಲೇ ತುಂಬಿ ಹೋಗಿದೆ ಎಂದು ತಿಳಿಸುತ್ತಾರೆ.

‘ಲಕ್ಷಾಂತರ ರೂಪಾಯಿ ಹಣ ನೀಡಿ ನಿವೇಶನ ಖರೀದಿಸಿ ಮನೆಗಳನ್ನು ಕಟ್ಡಿಕೊಂಡಿದ್ದೇವೆ. ಆದರೆ, ಬಡಾವಣೆಯಲ್ಲಿ ರಸ್ತೆ, ಚರಂಡಿ, ವಿದ್ಯುತ್ ದೀಪ ಮೊದಲಾದ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿಲ್ಲ. ಇದರಿಂದ ತೀರಾ ತೊಂದರೆ ಅನುಭವಿಸದಂತಾಗಿದೆ. ಮೂೂಲಸೌಕರ್ಯಗಳನ್ನು ಒದಗಿಸುವಂತೆ ಬಡಾವಣೆ ಅಭಿವೃದ್ಧಿಪಡಿಸಿರುವವರನ್ನು ಕೋರಿದರೂ ಪ್ರಯೋಜನ ಆಗುತ್ತಿಲ್ಲ’ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದರು.

‘ಬಡಾವಣೆಯಲ್ಲಿ ಸಮರ್ಪಕ ಡಾಂಬರೀಕರಣದ ರಸ್ತೆ ಇಲ್ಲವಾಗಿರುವುದರಿಂದ ನಿವಾಸಿಗಳು ತಮ್ಮ ಅನುಕೂಲಕ್ಕಾಗಿ ತಮ್ಮ ಮನೆಗಳ ವ್ಯಾಪ್ತಿಯಲ್ಲಿ ಸ್ವಂತ ಖರ್ಚಿನಲ್ಲಿ ಮಣ್ಣು ಹಾಕಿಸಿ ತಾತ್ಕಾಲಿಕ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸದೆ ಇರುವುದರಿಂದ ತುಂಬಾ ತೊಂದರೆ ಅನುಭವಿಸುವಂತಾಗಿದೆ. ಕೂಡಲೇ ರಸ್ತೆ ಡಾಂಬರೀಕರಣ, ಬೀದಿದೀಪ, ಚರಂಡಿ ಮೊದಲಾದ ಮೂಲ ಸೌಕರ್ಯಗಳನ್ನು ಒದಗಿಸಲು ಸಂಬಂಧಿಸಿದವರು ಕ್ರಮ ಕೈಗೊಳ್ಳಬೇಕು. ನಮಗೆ ಅನುಕೂಲ ಮಾಡಿಕೊಡಬೇಕು’ ಎನ್ನುವುದು ನಿವಾಸಿಗಳ ಒತ್ತಾಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.