ADVERTISEMENT

ಬೆಳಗಾವಿ: 2021 ಮುನ್ನೋಟ- ದುರಂತಗಳ‌ 'ಕಹಿ' ನೆನಪು

ಎಂ.ಮಹೇಶ
Published 28 ಡಿಸೆಂಬರ್ 2021, 5:40 IST
Last Updated 28 ಡಿಸೆಂಬರ್ 2021, 5:40 IST
ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿಯಲ್ಲಿ ಮನೆಯ ಗೋಡೆ ಕುಸಿದಿದ್ದರಿಂದ ಏಳು ಮಂದಿ ಸಾವಿಗೀಡಾದ ಸ್ಥಳ
ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿಯಲ್ಲಿ ಮನೆಯ ಗೋಡೆ ಕುಸಿದಿದ್ದರಿಂದ ಏಳು ಮಂದಿ ಸಾವಿಗೀಡಾದ ಸ್ಥಳ   

ಬೆಳಗಾವಿ: ಜಿಲ್ಲೆಯಲ್ಲಿ 2021ರ ಒಡಲು ಹಲವು ದುರಂತಗಳಿಂದಲೂ ತುಂಬಿದೆ.ಅನಾಹುತ, ಅಪಘಾತ, ಸಾವು–ನೋವುಗಳು ಈ ವರ್ಷ ಸಂಭವಿಸಿವೆ.

ರಾಯಬಾಗ ಸಮೀಪದ ರೈಲು ಹಳಿಯಲ್ಲಿ ಒಂದೇ ಕುಟುಂಬದ ನಾಲ್ವರು ಜ.28ರಂದು ಆತ್ಮಹತ್ಯೆ ಮಾಡಿಕೊಂಡರು. ಭಿರಡಿಯ ಸಾತಪ್ಪ, ಅವರ ಪತ್ನಿ ಮಹಾದೇವಿ ಹಾಗೂ ಮಕ್ಕಳಾದ ಸಂತೋಷ ಮತ್ತು ದತ್ತಾತ್ರೇಯ ಮೃತರು.

ರಾಮದುರ್ಗದಲ್ಲಿ ಗೊಬ್ಬರದ ವರ್ತಕ ದಂಪತಿ ಜ. 19ರಂದು ಇಬ್ಬರು ಮಕ್ಕಳಿಗೆ ವಿಷವುಣ್ಣಿಸಿ, ತಾವೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡರು. ಪ್ರವೀಣ ರಮೇಶ ಶೆಟ್ಟರ, ಅವರ ಪತ್ನಿ ರಾಜೇಶ್ವರಿ, ಮಕ್ಕಳಾದ ಅಮೃತಾ ಮತ್ತು ಅದ್ವಿಕ್‌ ಮೃತರು.

ADVERTISEMENT

ಚಿಕ್ಕೋಡಿ ತಾಲ್ಲೂಕಿನಪೋಗತ್ಯಾನಟ್ಟಿಯಲ್ಲಿ ಕಾಡಪ್ಪ ರಂಗಾಪುರೆ, ಕೀರ್ತಿ ಹಾಗೂ ಸ್ಫೂರ್ತಿ ಎನ್ನುವವರು ಜೂನ್‌ 20ರಂದು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡರು. ಇದಕ್ಕೆ ಕೆಲವು ದಿನಗಳ ಹಿಂದೆ, ಕಾಡಪ್ಪ ಪತ್ನಿ ಚನ್ನವ್ವ ರಂಗಾಪುರೆ ಹೃದಯಾಘಾತದಿಂದ ನಿಧನರಾಗಿದ್ದರು.

* ಏ.9: ಬೆಳಗಾವಿಯ ಮಜಗಾಂವ ಕಲ್ಮೇಶ್ವರ ನಗರದಲ್ಲಿ ಇಬ್ಬರು ಸಹೋದರರು ಮನೆ ಬಳಿಯ ಬಾವಿಗೆ ಬಿದ್ದು ಸಾವು.

* ಜೂನ್ 28: ಅಥಣಿ ತಾಲ್ಲೂಕಿನ ಹಲ್ಯಾಳ ಬಳಿ ಕೃಷ್ಣಾ ನದಿಯಲ್ಲಿ ಹೊದಿಕೆ ತೊಳೆಯಲು ತೆರಳಿದ್ದ ನಾಲ್ವರು ಸಹೋದರರಾದ ಪರಶುರಾಮ, ಧರೆಪ್ಪ, ಸದಾಶಿವ ಮತ್ತು ಶಂಕರ ಬನಸೋಡೆ ನೀರು ಪಾಲು.

* ಜೂನ್ 30: ಖಾನಾಪುರದ ಮಲಪ್ರಭಾ ನದಿಯಲ್ಲಿ ಈಜುತ್ತಿದ್ದಾಗ ಬಾಲಕರಿಬ್ಬರು ಸಾವು.

* ಅ. 6: ಬೆಳಗಾವಿ ತಾಲ್ಲೂಕಿನ ಬಡಾಲ ಅಂಕಲಗಿಯಲ್ಲಿ ಮಳೆಯಿಂದ ಶಿಥಿಲಗೊಂಡಿದ್ದ ಮನೆಯ ಗೋಡೆ ಕುಸಿದು ಒಂದೇ ಕುಟುಂಬದ 6 ಮಂದಿ ಸೇರಿದಂತೆ 7 ಜನರ ದುರ್ಮರಣ.

* ಅ.17: ಬೆಳಗಾವಿ ತಾಲ್ಲೂಕಿನ ರಾಜಹಂಸಗಡ ಪಕ್ಕದ ಕ್ವಾರಿಯಲ್ಲಿ ಈಜವಾಗ ಮುಳುಗಿ ಇಬ್ಬರು ಯುವಕರು ಸಾವು.

* ಅ.20: ಸಿಡಿಲು ಬಡಿದು ಸವದತ್ತಿ ತಾಲ್ಲೂಕಿನ ಚಿಕ್ಕಉಳ್ಳಿಗೇರಿಯ ಇಬ್ಬರು ಮಹಿಳೆಯರು, ನವಿಲುತೀರ್ಥ ಗುಡ್ಡದಲ್ಲಿ ಟೆಂಟ್‌ನಲ್ಲಿದ್ದ 47 ಕುರಿಗಳು ಸಾವು.

* ಅ.2: ಸವದತ್ತಿಯ ಪುರಸಭೆ ಕಸ ವಿಲೇವಾರಿ ಸಂಕೀರ್ಣದ ಬಳಿ ಬೊಲೆರೊ–ಟಾಟಾ ಏಸ್ ವಾಹನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಚುಂಚನೂರ ಹಾಗೂ ಜಕಬಾಳದ 6 ಕೂಲಿಕಾರ್ಮಿಕರು ಸ್ಥಳದಲ್ಲೇ ಸಾವು.

* ನ.7: ಬೆಳಗಾವಿ ತಾಲ್ಲೂಕಿನ ಸಾಂಬ್ರಾದಲ್ಲಿ ದೀಪಾವಳಿ ಲಕ್ಷ್ಮಿ ಪೂಜೆಗೆ ಬಳಸಿದ್ದ ಸಾಮಗ್ರಿಗಳನ್ನು ಕೆರೆಯಲ್ಲಿ ವಿಸರ್ಜಿಸಲು ಹೋಗಿದ್ದ ಮೂವರು ಸಹೋದರಿಯರ ಪೈಕಿ ಇಬ್ಬರು ನೀರಿನಲ್ಲಿ ಮುಳುಗಿ ಸಾವು.

* ಸೆ.18: ತಂದೆಯೇ 2 ವರ್ಷದ ಮಗನನ್ನು ಕೊಳವೆಬಾವಿಗೆ ಹಾಕಿ, ಕೊಳವೆಬಾವಿ ದುರಂತ ಎಂದು ಬಿಂಬಿಸಲು ಯತ್ನಿಸಿದ್ದ ಘಟನೆ ರಾಯಬಾಗ ತಾಲ್ಲೂಕಿನ ಅಲಖನೂರಲ್ಲಿ ನಡೆದಿತ್ತು.

* ಸೆ.29: ಖಾನಾಪುರದಲ್ಲಿ ಯುವಕ ಅರ್ಬಾಜ್‌ ಮುಲ್ಲಾ ಕೊಲೆ ಪ್ರಕರಣ ವರದಿ. ಸೂಕ್ಷ್ಮ ಪ್ರಕರಣವಾದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು. 11 ದಿನಗಳ ನಂತರ, ಆ ಯುವಕ ಪ್ರೀತಿಸುತ್ತಿದ್ದ ಯುವತಿಯ ತಂದೆ–ತಾಯಿ, ‘ಶ್ರೀರಾಮ ಸೇನಾ ಹಿಂದೂಸ್ತಾನ’ ಸಂಘಟನೆ ತಾಲ್ಲೂಕು ಘಟಕದ ಪುಂಡಲೀಕ ಸೇರಿ 10 ಮಂದಿ ಆರೋಪಿಗಳ ಬಂಧನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.