ADVERTISEMENT

ಸಗುಪ್ಪಿ ಮಹಾಲಕ್ಷ್ಮೀದೇವಿ | ಫೆ. 2ರಿಂದ ಜಾತ್ರೆ: ಫೆ. 4ರಂದು ಪಲ್ಲಕ್ಕಿ, ರಥೋತ್ಸವ

ಬಾಲಶೇಖರ ಬಂದಿ
Published 2 ಫೆಬ್ರುವರಿ 2026, 5:19 IST
Last Updated 2 ಫೆಬ್ರುವರಿ 2026, 5:19 IST
ಮಸಗುಪ್ಪಿಯ ಮಹಾಲಕ್ಷ್ಮೀ ದೇವಿ ದೇವಸ್ಥಾನ
ಮಸಗುಪ್ಪಿಯ ಮಹಾಲಕ್ಷ್ಮೀ ದೇವಿ ದೇವಸ್ಥಾನ   

ಮೂಡಲಗಿ: ಫೆ.2ರಿಂದ 4ರವರೆಗೆ ನಡೆಯುವ ಮೂಡಲಗಿ ತಾಲ್ಲೂಕಿನ ಮಸಗುಪ್ಪಿಯ ಲಕ್ಷ್ಮೀದೇವಿ ಮತ್ತು ಬಸವೇಶ್ವರ ದೇವರ ಜಾತ್ರೆಗೆ ಗ್ರಾಮವು ಅಲಂಕಾರಗೊಂಡು ತೇರು ಎಳೆಯಲು ಮತ್ತು ಪಲ್ಲಕ್ಕಿ ಸೇವೆಗೈಯಲು ಭಕ್ತರು ಸಜ್ಜಾಗಿದೆ.

ಜಾತ್ರೆಯ ಪ್ರಯುಕ್ತ ಗ್ರಾಮಸ್ಥರು ಮನೆಗಳಿಗೆ ಸುಣ್ಣ–ಬಣ್ಣ ಬಳಿದು ಸಿಂಗರಿಸಿದ್ದಾರೆ. ಪ್ರಮುಖ ರಸ್ತೆಗಳೆಲ್ಲ ಸ್ವಾಗತ ಕಮಾನುಗಳಿಂದ ಅಲಂಕಾರಗೊಂಡಿವೆ.

ಘಟಪ್ರಭಾ ನದಿ ತಟದಲ್ಲಿ ಪ್ರತಿಷ್ಠಾಪಿಸಿರುವ ಮಹಾಲಕ್ಷ್ಮೀದೇವಿಯ ಮೂರ್ತಿ ಮೊದಲು ಮಲೆನಾಡಿನ ಕಾಡಿನಲ್ಲಿತ್ತು. ನೂರಾರು ವರ್ಷಗಳ ಪೂರ್ವದಲ್ಲಿ ಮಸಗುಪ್ಪಿ ಗ್ರಾಮದ ವ್ಯಾಪಾರಿ ಕೆಂಚಣ್ಣವರ ಮನೆತನದವರು ಮಲೆನಾಡಿನಲ್ಲಿ ಅಕ್ಕಿ ಖರೀದಿಸಿ ಮರಳಿ ಬರುವಾಗ ಹಸಿರು ಕಾಡಿನ ಮಧ್ಯದಲ್ಲಿ ಲಕ್ಷ್ಮೀದೇವಿಯ ಮೂರ್ತಿಯು ಗೋಚರಿಸಿತು. ಮೂರ್ತಿ ಇದ್ದ ಸ್ಥಳ ದಾಟಿ ಸಾಗುತ್ತಿದ್ದಂತೆ ಮೂರ್ತಿ ಇದ್ದ ಸ್ಥಳದಿಂದ ಬಂಡಿ ಕದಲಿಲ್ಲ. ದೇವಿಯ ಕೃಪೆ ಇರಬಹುದೆಂದು ಮೂರ್ತಿಯನ್ನು ಬಂಡಿಯಲ್ಲಿಟ್ಟು ಸಾಗಿದಾಗ ಬಂಡಿಯು ಮುಂದೆ ಸಾಗಿತು. ಕೆಲವು ದಿನಗಳ ನಂತರ ವ್ಯಾಪಾರಿ ಗ್ರಾಮಕ್ಕೆ ತಲುಪಿದರು. ವ್ಯಾಪಾರಿ ಕೆಂಚಣ್ಣವರ ಅಕ್ಕಿ ಮೂಟೆ ಇಳಿಸಲು ಸಜ್ಜಾದಾಗ ಬಂಡಿಯಲ್ಲಿ ಮೂರ್ತಿ ಇರಲಿಲ್ಲ. ಮೂರ್ತಿಯು ಗ್ರಾಮದ ಈಶಾನ್ಯ ಭಾಗದಲ್ಲಿ ಗಿಡಗಂಟಿ ಇರುವ ಜಾಗದಲ್ಲಿ ಜಾರಿ ಬಿದ್ದಿತ್ತು. ಅದು ಯಾರಿಗೂ ಗೊತ್ತಿರಲಿಲ್ಲ. ಹಲವು ವರ್ಷಗಳ ನಂತರ ಗ್ರಾಮದ ಭರಮಪ್ಪಜ್ಜನ ಕನಸಿನಲ್ಲಿ ದೇವಿಯು ಬಂದು ತಾನು ಗಾಡಿಯಿಂದ ಬಿದ್ದಿರುವ ಗ್ರಾಮದ ಸ್ಥಳವನ್ನು ತಿಳಿಸಿ ‘ನಾನು ಮಲೆನಾಡಿನ ಕೊರವಿ ಇದ್ದು, ನನ್ನನ್ನು ಭಕ್ತಿಯಿಂದ ಪೂಜಿಸುವವರಿಗೆ ಎಲ್ಲ ಭಾಗ್ಯವ ಕೊಡುವೆ’ ಎಂದು ವಾಣಿಯಾಯಿತಂತೆ. ಬೆಳಿಗ್ಗೆ ಭರಮಪ್ಪಜ್ಜನೊಂದಿಗೆ ಗ್ರಾಮದ ಜನರೆಲ್ಲ ಸಾಗಿ ಲಕ್ಷ್ಮೀದೇವಿ ಮೂರ್ತಿಯನ್ನು ಕಂಡರು ಮತ್ತು ಅದೇ ಸ್ಥಳದಲ್ಲಿ ಪ್ರತಿಷ್ಠಾಪಿಸಿ ಪುಟ್ಟ ಗುಡಿಯನ್ನು ನಿರ್ಮಿಸಿದರು.

ADVERTISEMENT

1914ರಲ್ಲಿ ಘಟಪ್ರಭಾ ನದಿಗೆ ಮಹಾ ಪ್ರವಾಹಕ್ಕೆ ಇಡೀ ಗ್ರಾಮವೇ ಮುಳುಗಿ ಹೋಗಿತ್ತು. ನದಿಯ ತಟದಲ್ಲಿದ್ದ ಲಕ್ಷ್ಮೀದೇವಿ ಗುಡಿ ಘಟಪ್ರಭೆ ನದಿಯಲ್ಲಿ ಕೊಚ್ಚಿಹೋಗಿತ್ತು ಹೊರತು ದೇವಿಯ ಮೂರ್ತಿ ಮಾತ್ರ ಪವಾಡಸದೃಶ್ಯವಾಗಿ ಇದ್ದ ಸ್ಥಳದಲ್ಲಿಯೇ ಕಂಗೋಳಿಸುತ್ತಿತ್ತು.. ಗ್ರಾಮಸ್ಥರೆಲ್ಲ ಮತ್ತೆ ದೇವಿಗೆ ದೇವಸ್ಥಾನವನ್ನು ನಿರ್ಮಿಸಿ ಪ್ರತಿ ವರ್ಷವೂ ಭಾರತ ಹುಣ್ಣಿಮೆ ಸಂದರ್ಭದಲ್ಲಿ ಜಾತ್ರೆ ನಡೆಸಿಕೊಂಡು ಬಂದಿದ್ದಾರೆ.

ಜೀರ್ಣೋದ್ಧಾರ: ಹಲವು ವರ್ಷ ಹಿಂದೆ ಅಂದಾಜು ₹3 ಕೋಟಿಗೂ ಅಧಿಕ ವೆಚ್ಚದಲ್ಲಿ ಭಕ್ತರೆಲ್ಲರೂ ಸೇರಿ ಶಿಂಧಿಕುರಬೇಟದ ಶ್ವೇತವರ್ಣದ ಶಿಲೆಯಲ್ಲಿ ಮಹಾಲಕ್ಷ್ಮೀ ದೇವಸ್ಥಾನ ನಿರ್ಮಿಸಿದ್ದಾರೆ. ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಉದಾರ ಆರ್ಥಿಕ ನೆರವಿನಲ್ಲಿ ಆವರಣಕ್ಕೆ ಪೇವರ್ಸ್, ಯಾತ್ರಾ ನಿವಾಸ ನಿಮಾರ್ಣಗೊಂಡಿದೆ. ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಸಂಸದ ಜಗದೀಶ ಶೆಟ್ಟರ ತಮ್ಮ ಪ್ರದೇಶಾಭಿವೃದ್ಧಿಯಲ್ಲಿ ಅನುದಾನ ಕಲ್ಪಿಸಿದ್ದಾರೆ.

ಅಣ್ಣ–ತಂಗಿ ಜಾತ್ರೆ: ಗ್ರಾಮದಲ್ಲಿ ಬಸವೇಶ್ವರ ದೇವಸ್ಥಾನ ಸಹ ಇದ್ದು ಮಹಾಲಕ್ಷ್ಮೀದೇವಿ ಜಾತ್ರೆಯೊಂದಿಗೆ ಬಸವೇಶ್ವರದೇವರ ರಥೋತ್ಸವವನ್ನು ಜೊತೆಯಲ್ಲಿ ನಡೆಸಿಕೊಂಡು ಬರುತ್ತಿರುವುದು ಇಲ್ಲಿಯ ವಿಶೇಷವಾಗಿದೆ.

ಬಸವಣ್ಣ ‘ಅಣ್ಣ‘ನೆಂದು ಮಹಾಲಕ್ಷ್ಮೀದೇವಿಯು ‘ತಂಗಿ‘ ಎಂದು ಭಕ್ತರ ಮನದಲ್ಲಿ ನೆಲೆಸಿದ್ದಾರೆ. ‘ಮಸಗುಪ್ಪಿ ಮಹಾಲಕ್ಷ್ಮೀ ದೇವಿಯು ಬರೀಗೈಯಲ್ಲಿ ಯಾರನ್ನೂ ಕಳುಹಿಸಿದೆ, ಬೇಡಿದ್ದನ್ನು ಕೊಡುವ ಭಾಗ್ಯದ ದೇವತೆಯಾಗಿದ್ದಾಳೆ ಎಂದು ಭಕ್ತರು ನೆನೆಯುತ್ತಾರೆ. ವಿವಿಧ ಬಗೆಯ ಹರಕೆ ಈಡೇರಿಸುತ್ತಾರೆ.

ಪಲ್ಲಕ್ಕಿ, ರಥೋತ್ಸವ: ಜಾತ್ರೆಯ ಪ್ರಮುಖ ಮಹಾಲಕ್ಷ್ಮೀದೇವಿ ಪಲ್ಲಕ್ಕಿ ಉತ್ಸವ ಮತ್ತು ಬಸವೇಶ್ವರ ರಥೋತ್ಸವವು. ಬುಧವಾರ ಫೆ.4ರಂದು ಮಧ್ಯಾಹ್ನ 12ಕ್ಕೆ ಮಹಾಲಕ್ಷ್ಮೀ ದೇವಸ್ಥಾನದಿಂದ ವಿವಿಧ ಗ್ರಾಮಗಳ ಪಾಲಕಿಯೊಂದಿಗೆ ಹಂಪಯ್ಯಜ್ಜನ ಮಠಕ್ಕೆ ಬರುವುದು. ಪಲ್ಲಕ್ಕಿ ಮತ್ತು ರಥೋತ್ಸವದ ದಾರಿಯುದ್ದಕ್ಕೂ ಭಂಡಾರದ ಓಕುಳಿ ಆಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.