ADVERTISEMENT

ಸಹಾನುಭೂತಿಯಿಂದ ರೋಗಿಗಳ ಆರೈಕೆ ಮಾಡಿ: ಆರೋಗ್ಯ ಸಚಿವ ದಿನೇಶ ಗುಂಡೂರಾವ್‌

ಡೆಕ್ಕನ್ ಮೆಡಿಕಲ್ ಸೆಂಟರ್‌ ಬೆಳ್ಳಿ ಮಹೋತ್ಸವದಲ್ಲಿ ಸಚಿವ ದಿನೇಶ ಗುಂಡೂರಾವ್‌ ಕರೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 11:28 IST
Last Updated 14 ಅಕ್ಟೋಬರ್ 2025, 11:28 IST
   

ಬೆಳಗಾವಿ: ‘ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ಲಾಭ ಗಳಿಸುವ ಗ್ರಾಹಕರಂತೆ ನೋಡಬಾರದು. ಬದಲಿಗೆ ಅವರಿಗೆ ಸಹಾನುಭೂತಿಯಿಂದ ಆರೈಕೆ ಮಾಡಬೇಕು’ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹೇಳಿದರು.

ಇಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡೆಕ್ಕನ್ ಮೆಡಿಕಲ್ ಸೆಂಟರ್‌ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವೈದ್ಯಕೀಯ ರಂಗವನ್ನು ವ್ಯವಹಾರಿಕವಾಗಿ ನೋಡಬಾರದು. ಲಾಭ ಗಳಿಕೆಯೇ ಮುಖ್ಯ ಗುರಿ ಆಗಬಾರದು. ಖಾಸಗಿ ಆಸ್ಪತ್ರೆಗಳಿಗೆ ಜನಪರ ಕಾಳಜಿ ಮುಖ್ಯ’ ಎಂದು ಪ್ರತಿಪಾದಿಸಿದರು.

ADVERTISEMENT

‘ಇಂದು ಅನೇಕ ಕಾರ್ಪೊರೇಟ್ ಆಸ್ಪತ್ರೆಗಳು ರೋಗಿಗಳನ್ನು ಲಾಭ ಗಳಿಸಲು ಗ್ರಾಹಕರಂತೆ ನೋಡುತ್ತಿವೆ. ಅನಗತ್ಯ ಕಾರ್ಯವಿಧಾನಗಳು ಮತ್ತು ಪರೀಕ್ಷೆಗಳ ಮೂಲಕ ರೋಗಿಗಳ ಸುಲಿಗೆ ಮಾಡುತ್ತಿವೆ. ಆದರೆ, ಅಂಥ ಆಸ್ಪತ್ರೆಗಳ ನಿಯಂತ್ರಣ ಕಷ್ಟಕರವಾಗಿದೆ’ ಎಂದು ಹೇಳಿದರು.

‘ಅತ್ಯಾಧುನಿಕ ತಂತ್ರಜ್ಞಾನ ಬಳಸಿ, ರಾಜ್ಯದಲ್ಲಿ ಇರುವ ಸರ್ಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುತ್ತಿದ್ದೇವೆ. ಸರ್ಕಾರಿ ಆಸ್ಪತ್ರೆಗಳಂತೆ ಖಾಸಗಿ ಆಸ್ಪತ್ರೆಗಳಲ್ಲೂ ಬಡವರಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆ ಸಿಗಬೇಕು ಎಂಬುದೇ ನಮ್ಮ ಉದ್ದೇಶ’ ಎಂದರು.

‘25 ವರ್ಷಗಳ ಹಿಂದೆ 20 ಹಾಸಿಗೆಗಳ ಸಾಮರ್ಥ್ಯದೊಂದಿಗೆ ಆರಂಭಗೊಂಡಿದ್ದ ಡೆಕ್ಕನ್‌ ಮೆಡಿಕಲ್‌ ಸೆಂಟರ್‌, ಇಂದು 100 ಹಾಸಿಗೆಗಳ ಸಾಮರ್ಥ್ಯದ ಆಸ್ಪತ್ರೆಯಾಗಿ ಮೇಲ್ದರ್ಜೆಗೆ ಏರಿರುವುದು ಖುಷಿ ತಂದಿದೆ’ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ‘ಸರ್ಕಾರಿ ಆಸ್ಪತ್ರೆಗಳು ಮಾತ್ರ ಎಲ್ಲರ ಆರೋಗ್ಯ ಅಗತ್ಯತೆ ಪೂರೈಸಲು ಸಾಧ್ಯವಿಲ್ಲ. ಹಾಗಾಗಿ ಖಾಸಗಿ ಆಸ್ಪತ್ರೆಗಳೂ ನಮಗೆ ಅಗತ್ಯ. ಖಾಸಗಿ ಆಸ್ಪತ್ರೆಗಳು ಕೈಗೆಟುಕುವ ಶುಲ್ಕದಲ್ಲೇ ಬಡವರಿಗೆ ವೈದ್ಯಕೀಯ ಸೇವೆ ಒದಗಿಸಬೇಕು’ ಎಂದು ಕರೆಕೊಟ್ಟರು.

ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ‘ಆಧುನಿಕ ಜೀವನಶೈಲಿ ರೂಢಿಸಿಕೊಂಡ ಪರಿಣಾಮ ಇಂದು ಹೆಚ್ಚಿನವರು ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಇದರಿಂದ ಹೆಚ್ಚಿನ ಆಸ್ಪತ್ರೆಗಳು ನಿರ್ಮಾಣವಾಗಿವೆ. ಜನರು ಆರೋಗ್ಯವಾಗಿ ಇರಲು ಉತ್ತಮ ಜೀವನಶೈಲಿ ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ, ಶಾಸಕ ಅಭಯ ಪಾಟೀಲ ಮಾತನಾಡಿದರು.

ಡೆಕ್ಕನ್ ಮೆಡಿಕಲ್ ಸೆಂಟರ್ ವ್ಯವಸ್ಥಾಪಕ ನಿರ್ದೇಶಕ ಡಾ.ರಮೇಶ ದೊಡ್ಡಣ್ಣವರ, ನಿರ್ದೇಶಕಿ ಡಾ.ಸಾವಿತ್ರಿ ದೊಡ್ಡಣ್ಣವರ, ಶಾಸಕ ಗಣೇಶ ಹುಕ್ಕೇರಿ, ವಿಧಾನ ಪರಿಷತ್‌ ಸದಸ್ಯ ನಾಗರಾಜ ಯಾದವ, ಮಾಜಿ ಶಾಸಕ ಸಂಜಯ ಪಾಟೀಲ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸುನೀಲ ಹನಮಣ್ಣವರ ಉಪಸ್ಥಿತರಿದ್ದರು.