ಬೆಳಗಾವಿ: ರಾಜ್ಯ ಕಂಡ ಶ್ರೇಷ್ಠ ರಾಜಕಾರಣಿ, ದಕ್ಷ ಆಡಳಿತಗಾರ, ಚಿಂತಕ ಅಭಿವೃದ್ದಿಯ ಹರಿಕಾರ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರ ನಿಧನ ಅತೀವ ದುಃಖ ತಂದಿದೆ ಎಂದು ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಕಂಬನಿ ಮಿಡಿದಿದ್ದಾರೆ.
‘ರಾಜ್ಯ ಹಾಗೂ ದೇಶದ ರಾಜಕಾರಣಕ್ಕೆ ಇದು ತುಂಬಲಾರದ ನಷ್ಟ. ರಾಜ್ಯದ ಅಭಿವೃದ್ದಿಗೆ ಎಸ್.ಎಂ ಕೃಷ್ಣ ಅವರ ಕೊಡುಗೆ ಅಪಾರ. ಅವರು ಅನೇಕ ಸವಾಲುಗಳನ್ನು ದಿಟ್ಟವಾಗಿ ನಿಭಾಯಿಸಿ ಕರ್ನಾಟಕದ ಅಭಿವೃದ್ಧಿಗೆ ಹೊಸ ದಿಕ್ಕು ತೋರಿದ ಧೀಮಂತ ನಾಯಕ’ ಎಂದು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ.
‘ಎಸ್.ಎಂ ಕೃಷ್ಣ ಒಬ್ಬ ಅಪರೂಪದ ಸಜ್ಜನ ರಾಜಕಾರಣಿ, ವಾಗ್ಮಿ. ಬೆಂಗಳೂರಿನ ಅಭಿವೃದ್ಧಿ ಐ.ಟಿ,ಬಿ.ಟಿ ಉದ್ಯಮದ ಉನ್ನತಿ ಉದ್ಯೋಗಾವಕಾಶಗಳ ಸೃಷ್ಟಿಗೆ ಅವರ ಕೊಡುಗೆ ಅಪಾರ. ಬೆಂಗಳೂರಿನ ವಿಧಾನ ಸೌಧದ ಪಕ್ಕದಲ್ಲೇ ವಿಕಾಸ ಸೌಧ ನಿರ್ಮಾಣ ಮಾಡಿ ಸುಗಮ ಆಡಳಿತಕ್ಕೆ ನೆರವಾಗಿದ್ದಾರೆ’ ಎಂದು ಚಲುವರಾಯಸ್ವಾಮಿ ತಿಳಿಸಿದ್ದಾರೆ.
‘ಕೇಂದ್ರ ವಿದೇಶಾಂಗ ಸಚಿವರಾಗಿ ಅತ್ಯಂತ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದಾರೆ. ರಾಜ್ಯಪಾಲರಾಗಿಯೂ ಜನಾನುರಾಗಿಯಾಗಿದ್ದರು. ಎಸ್.ಎಂ ಕೃಷ್ಣ ಅವರ ಅಗಲಿಕೆಯಿಂದ ಇಡೀ ರಾಜ್ಯವೇ ಶೋಕಸಾಗರದಲ್ಲಿ ಮುಳುಗಿದ್ದು ಎಲ್ಲರಿಗೂ ದುಃಖ ಬರಿಸುವ ಶಕ್ತಿ ನೀಡಲಿ ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸುವುದಾಗಿ’ ಕೃಷಿ ಸಚಿವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.