ಬೆಳಗಾವಿಯ ನ್ಯೂ ಗಾಂಧಿ ನಗರದ ಅಂಗನವಾಡಿ ಕೇಂದ್ರದಲ್ಲಿ ಎಲ್‌ಕೆಜಿ ಯುಕೆಜಿ ತರಗತಿಗಳ ಆರಂಭಕ್ಕಾಗಿ ಎಲ್‌ಇಡಿ ಟಿ.ವಿ ಅಳವಡಿಸಲಾಗಿದೆ
ಬೆಳಗಾವಿ: ರಾಜ್ಯದ 5,000 ಅಂಗನವಾಡಿ ಕೇಂದ್ರಗಳಲ್ಲಿ ಇದೇ ನವೆಂಬರ್ ತಿಂಗಳಿಂದ ಮಾಂಟೆಸ್ಸರಿ ಆರಂಭಿಸಲು ಸರ್ಕಾರ ಸಿದ್ಧತೆ ನಡೆಸಿದೆ. ಬೆಂಗಳೂರಿನಲ್ಲಿ ಕಳೆದ ವರ್ಷ ಆರಂಭಿಸಿದ್ದ ಮಾಂಟೆಸ್ಸರಿಗೆ ಸಿಕ್ಕ ಪ್ರತಿಕ್ರಿಯೆ ಹಿನ್ನಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದೆ.
ಪ್ರಾಯೋಗಿಕವಾಗಿ ಬೆಂಗಳೂರಿನಲ್ಲಿ 250 ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿ ಆರಂಭಿಸಿ, 2,550 ಮಕ್ಕಳಿಗೆ ಪ್ರವೇಶ ಕಲ್ಪಿಸಲಾಗಿತ್ತು.ಈಗ ಮಕ್ಕಳ ಸಂಖ್ಯೆ 3,950ಕ್ಕೆ ಏರಿದೆ.
ಸರ್ಕಾರಿ ಮಾಂಟೆಸ್ಸರಿಗೆ (ಎಲ್‌ಕೆಜಿ, ಯುಕೆಜಿ ತರಗತಿಗೆ) ಸಿಕ್ಕ ಸ್ಪಂದನ ಆಧರಿಸಿ ರಾಜ್ಯವ್ಯಾಪಿ ಯೋಜನೆ ವಿಸ್ತರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ಧರಿಸಿದೆ.
ರಾಜ್ಯದಲ್ಲಿ ಒಟ್ಟು 69,922 ಅಂಗನವಾಡಿ ಕೇಂದ್ರಗಳಿವೆ. 3 ರಿಂದ 6 ವರ್ಷದ 16 ಲಕ್ಷ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ.
‘ನವೆಂಬರ್ ತಿಂಗಳಿಂದ 5 ಸಾವಿರ ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿ ಆರಂಭಕ್ಕೆ ತಯಾರಿ ನಡೆದಿದೆ. ಕಟ್ಟಡ ಸೇರಿ ಅಗತ್ಯ ಮೂಲಸೌಲಭ್ಯ ಸಿಕ್ಕರೆ, 7 ಸಾವಿರ ಮಾಂಟೆಸ್ಸರಿ ಆರಂಭಿಸುವ ಚಿಂತನೆಯೂ ಇದೆ’ ಎಂದು ಮೂಲಗಳು ತಿಳಿಸಿವೆ.
ಈಗ ಪ್ರತಿ ಜಿಲ್ಲೆಯಲ್ಲಿ ಮಾಂಟೆಸ್ಸರಿಗಳ ಆರಂಭಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಕ್ರಮ ವಹಿಸಿದ್ದಾರೆ. ಅವುಗಳಿಗೆ ಪೂರೈಸಲು ಕಲಿಕಾ ಸಾಮಗ್ರಿ ಸಿದ್ಧವಾಗಿವೆ. ಸಕ್ಷಮ್ ಯೋಜನೆಯಡಿ ಎಲ್‌ಇಡಿ ಟಿ.ವಿಗಳನ್ನು ಒದಗಿಸಲಾಗಿದೆ.
ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ಚಿಣ್ಣರಿಗೆ ಶಿಕ್ಷಣ ನೀಡಲು ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಹತೆಯುಳ್ಳ ಅಂಗನವಾಡಿ ಕಾರ್ಯಕರ್ತೆಯರಿಗೆ ಪೂರಕ ತರಬೇತಿಯನ್ನು ನೀಡಲಾಗುತ್ತಿದೆ.
‘ಪಟ್ಟಣ, ಗ್ರಾಮಗಳ ಆಯ್ದ ಅಂಗನವಾಡಿ ಕೇಂದ್ರಗಳಲ್ಲಿ ಮಾಂಟೆಸ್ಸರಿಗಳ ಆರಂಭಕ್ಕೆ ಸಿದ್ಧತೆ ನಡೆದಿದೆ. ಇವು ಆರಂಭವಾದರೆ 1 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಎಲ್‌ಕೆಜಿ, ಯುಕೆಜಿ ಶಿಕ್ಷಣ ಸಿಗಲಿದೆ. ಜತೆಗೆ ದಾಖಲಾತಿ ಪ್ರಮಾಣವೂ ಹೆಚ್ಚಲಿದೆ. ಹೆಚ್ಚಿನ ಶುಲ್ಕವುಳ್ಳ ಖಾಸಗಿ ನರ್ಸರಿ
ಗಳತ್ತ ಬಡ ಕುಟುಂಬಗಳು ಮುಖ ಮಾಡುವುದು ತಪ್ಪುತ್ತದೆ’ ಎಂದು ಮೂಲಗಳು ತಿಳಿಸಿವೆ.
ರಾಜ್ಯದಲ್ಲಿ ಅಂಗನವಾಡಿ ಕೇಂದ್ರ ಆರಂಭವಾಗಿ 50 ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಕೇಂದ್ರಗಳನ್ನು ಆಧುನೀಕರಣಗೊಳಿಸಿ 5 ಸಾವಿರ ಮಾಂಟೆಸ್ಸರಿಗಳಿಗೆ ಚಾಲನೆ ಕೊಡುತ್ತೇವೆಲಕ್ಷ್ಮೀ ಹೆಬ್ಬಾಳಕರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ
ಬೆಳಗಾವಿ ಜಿಲ್ಲೆಯಲ್ಲಿ 750 ಸರ್ಕಾರಿ ಮಾಂಟೆಸ್ಸರಿಗಳ ಆರಂಭಕ್ಕೆ ಅಂಗನವಾಡಿ ಕೇಂದ್ರ ಗುರುತಿಸಿದ್ದೇವೆ. ಮಕ್ಕಳಿಗೆ ಪಾಠ ಮಾಡಲು ಕಾರ್ಯಕರ್ತೆಯರಿಗೂ ತರಬೇತಿ ನೀಡಲಾಗುತ್ತಿದೆ.ಎಂ.ಎನ್.ಚೇತನಕುಮಾರ ಉಪನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬೆಳಗಾವಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.