ಮೂಡಲಗಿ: ತಾಲ್ಲೂಕಿನ ತಿಗಡಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಈಗ ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆಯುತ್ತಿದೆ. ಶಿಕ್ಷಕರ ಶ್ರಮ ಹಾಗೂ ಗ್ರಾಮಸ್ಥರ ಸಹಕಾರದಿಂದ ಬೆಳವಣಿಗೆ ಕಂಡಿದೆ. ಗ್ರಾಮೀಣ ಬಡವರ ಮಕ್ಕಳು ಹಾಗೂ ತೋಟಪಟ್ಟಿಗಳ ಮಕ್ಕಳಿಗೆ ಈ ಶಾಲೆ ವರದಾನವಾಗಿದೆ. ಇದೇ ಶಾಲೆಯಲ್ಲಿ ಈ ವರ್ಷದ ಶಿಕ್ಷಕರ ದಿನಾಚರಣೆ ನಡೆಯುತ್ತಿದೆ.
ಘಟಪ್ರಭಾ ನದಿಗೆ ಆಗಾಗ್ಗೆ ಬರುವ ಪ್ರವಾಹದಿಂದಾಗಿ ಈ ಊರಿನ ಮಕ್ಕಳು ಬೇರೆ ಊರುಗಳಿಗೆ ಕಲಿಯಲು ತೆರಳುತ್ತಿದ್ದರು. ಶಾಸಕ ಬಾಲಚಂದ್ರ ಜಾರಕಿಹೊಳಿ 2016ರಲ್ಲಿ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಂಎಸ್‌ಎ)ದ ಅಡಿಯಲ್ಲಿ ಸರ್ಕಾರಿ ಪ್ರೌಢಶಾಲೆ ಆರಂಬಿಸಿದರು. 4 ಎಕರೆ ಸರ್ಕಾರಿ ನಿವೇಶನದಲ್ಲಿ ₹1.28 ಕೋಟಿ ವೆಚ್ಚದಲ್ಲಿ ಪ್ರೌಢಶಾಲೆ ನಿರ್ಮಿಸಿದರು.
8ರಿಂದ 10ನೇ ತರಗತಿವರೆಗೆ ಕಲಿಕೆ ಇದ್ದು, ಪ್ರಸಕ್ತ ಸಾಲಿನಲ್ಲಿ 280 ವಿದ್ಯಾರ್ಥಿಗಳು ದಾಖಲಾತಿ ಇದೆ. ಶಿಕ್ಷಕರು ಮನೆ, ಮನೆಗೆ ತೆರಳಿ ಮಕ್ಕಳು ಗೈರಾಗದಂತೆ ಗಮನ ನೀಡುತ್ತಾರೆ. ಶಾಲೆಯಲ್ಲಿ 7 ಶಿಕ್ಷಕರಿದ್ದಾರೆ. ಎಲ್ಲ ಶಿಕ್ಷಕರು ಕಲಿಕೆಯ ವಿನೂತನ ಕಾರ್ಯಚಟುವಟಿಕೆಗಳನ್ನು ಅಳವಡಿಸುತ್ತಿದ್ದು, ಗುಣಮಟ್ಟ ವೃದ್ಧಿಗೆ ಕಾರಣವಾಗಿದೆ ಎಂದು ಮುಖ್ಯ ಶಿಕ್ಷಕ ಗೋಪಾಲ ಆರ್. ಪತ್ತಾರ ಪ್ರತಿಕ್ರಿಯಿಸಿದರು.
ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ, ಗ್ರಂಥಾಲಯ, ಸ್ಮಾರ್ಟ್ ಕ್ಲಾಸ್‌ಗಳಿವೆ. ಈವರೆಗಿನ ಎಸ್‌ಎಸ್‌ಎಲ್‌ಸಿ 8 ಬ್ಯಾಚ್‌ಗಳ ಫಲಿತಾಂಶ ನೂರಕ್ಕೆ ನೂರರಷ್ಟು ಬಂದಿದೆ ಎಂದು ಹಿಂದಿನ ಮುಖ್ಯಶಿಕ್ಷಕ ರಮೇಶ ಬುದ್ನಿ ಹೇಳುತ್ತಾರೆ.
ಶಾಲೆ ಮಂಜೂರಾತಿಗೆ ಶ್ರಮಿಸಿದ ಗ್ರಾಮಸ್ಥರು, ಶ್ರಮದಾನದ ಮೂಲಕ ಮೈದಾನ ಸಿದ್ಧಗೊಳಿಸಿದ್ದಾರೆ. ಕಾಂಪೌಂಡ್ ನಿರ್ಮಿಸಿದ್ದಾರೆ. ₹1.50 ಲಕ್ಷ ವೆಚ್ಚದಲ್ಲಿ ಪೀಠೋಪಕರಣ ಕೊಡಿಸಿದ್ದಾರೆ ಎಂದು ಮುಖಂಡ ಅಶೋಕ ಪೂಜಾರಿ ತಿಳಿಸಿದರು.
ತಿಗಡಿ ಗ್ರಾಮಕ್ಕೆ ಸರ್ಕಾರಿ ಪದವಿಪೂರ್ವ ಕಾಲೇಜು ಮಂಜೂರು ಮಾಡಿಸಿದ್ದು 2026–27ನೇ ಶೈಕ್ಷಣಿಕ ಸಾಲಿಗೆ ಪ್ರಾರಂಭವಾಗುತ್ತದೆಬಾಲಚಂದ್ರ ಜಾರಕಿಹೊಳಿ ಶಾಸಕ
ಕಳೆದ 20 ವರ್ಷಗಳಿಂದ ಶಿಕ್ಷಕರ ದಿನಾಚರಣೆಯನ್ನು ಬೇರೆ ಬೇರೆ ಗ್ರಾಮದಲ್ಲಿ ಮಾಡಿಕೊಂಡು ಬರುವುದು ದೇಶದಲ್ಲಿ ಮಾದರಿ ಪ್ರಯೋಗವಾಗಿದೆಅಜಿತ್ ಮನ್ನಿಕೇರಿ ಮೂಡಲಗಿ ವಲಯದ ಹಿಂದಿನ ಬಿಇಒ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.