
ಮೂಡಲಗಿ: ‘ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆಯ ಅನುದಾನವನ್ನು ಬೆಳಗಾವಿ ಜಿಲ್ಲೆಯಾದ್ಯಂತ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಜಿಲ್ಲೆಯಲ್ಲಿ 100 ಬಸ್ ತಂಗುದಾಣ ನಿರ್ಮಿಸುವ ಗುರಿ ಇದ್ದು, ಈಗಾಗಲೇ ಶೇ 50ರಷ್ಟು ಪೂರ್ಣಗೊಳಿಸಿರುವ ತೃಪ್ತಿ ಇದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.
ಅರಭಾವಿ ವಿಧಾನಸಭಾ ಮತಕ್ಷೇತ್ರದ ನಲ್ಲಾನಟ್ಟಿ, ಬಳೋಬಾಳ, ಬೀರನಗಡ್ಡಿ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಅನುದಾನದಲ್ಲಿ ಬಸ್ ಪ್ರಯಾಣಿಕರ ತಂಗುದಾಣಗಳನ್ನು ಭಾನುವಾರ ಉದ್ಘಾಟಿಸಿ ಮತ್ತು ಹುಣಶ್ಯಾಳ ಪಿಜಿ ಗ್ರಾಮದಲ್ಲಿ ಬಸ್ ತಂಗುದಾಣ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
‘ಸಂಸದರ ನಿಧಿಯ ಜೊತೆಗೆ ವಿವಿಧ ಇಲಾಖೆಗಳಿಂದ ದೊರೆಯುವ ಅನುದಾನದಲ್ಲಿ ಅಗತ್ಯ ಕೆಲಸಗಳನ್ನು ಮಾಡಿಸುತ್ತಿರುವೆ’ ಎಂದರು.
‘ಗ್ರಾಮೀಣ ಜನರ ಅವಶ್ಯಕತೆಯನ್ನು ಈಡೇರಿಸುವಲ್ಲಿ ಸಂಸದರ ನಿಧಿಯು ಸದುಪಯೋಗವಾಗಿದೆ. ಶಿಕ್ಷಣ, ಆರೋಗ್ಯ, ಯುವ ಸಬಲೀಕರಣ, ಸಮುದಾಯಗಳ ಮತ್ತು ಸಾಂಸ್ಕೃತಿಕ ಕ್ಷೇತ್ರಗಳ ಏಳ್ಗೆಯನ್ನು ಗಮನದಲ್ಲಿಟ್ಟುಕೊಂಡು ಸಂಸದರ ನಿಧಿಯನ್ನು ಸಮತೋಲನವಾಗಿ ಬಳಕೆ ಮಾಡಲಾಗುತ್ತಿದೆ’ ಎಂದು ಹೇಳಿದರು.
ನಲ್ಲಾನಟ್ಟಿ ಗ್ರಾಮದ ಪ್ರಮುಖರಾದ ದಶರಥ ಪಾಟೀಲ, ಶಂಕರ ಜಾಗನೂರ, ಲಗಮಣ್ಣ ಕುಳ್ಳೂರ, ಮಾರುತಿ ಮೆಳವಂಕಿ, ಮಲ್ಲಪ್ಪಾ ಪೂಜೇರಿ, ರಂಗಪ್ಪ ಕುಳ್ಳೂರ, ಪ್ರಕಾಶ ಜಾಗನೂರ, ವಿಠ್ಠಲ ಮಡ್ಡೆಪ್ಪನ್ನವರ, ಸಿದ್ದಪ್ಪ ವಾಲಿಕಾರಿ ಬಳೋಬಾಳ ಗ್ರಾಮದ ಬಲವಂತ ಬೆಳವಿ, ಮಂಜುಳಾ ಡಬ್ಬನ್ನವರ, ಬಾಳಪ್ಪ ನೇಸರಗಿ, ಸಿದ್ದಾರ್ಥ ಅಥಣಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.