ADVERTISEMENT

ಬೆಳಗಾವಿ: ₹ 52.94 ಕೋಟಿ ಕೋರಿದ ಸಂಸದೆ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2022, 8:31 IST
Last Updated 8 ಫೆಬ್ರುವರಿ 2022, 8:31 IST
ಮಂಗಲಾ ಅಂಗಡಿ
ಮಂಗಲಾ ಅಂಗಡಿ   

ಬೆಳಗಾವಿ: ‘ಬೆಳಗಾವಿ ಲೋಕಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ವಿಶೇಷವಾಗಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹಾಗೂ ನಗರದಲ್ಲಿ 2 ರಸ್ತೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದ ಪಾಲು ಸೇರಿ ಒಟ್ಟು ₹ 52.94 ಕೋಟಿ ಅನುದಾನ ಒದಗಿಸಬೇಕು’ ಎಂದು ಸಂಸದೆ ಮಂಗಲಾ ಅಂಗಡಿ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕೋರಿದ್ದಾರೆ.

ದೆಹಲಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, 2022–23ನೇ ಸಾಲಿನ ಬಜೆಟ್‌ ಹಣ ಒದಗಿಸುವಂತೆ ಮನವಿ ಸಲ್ಲಿಸಿದ್ದಾರೆ.

ಸವದತ್ತಿಯ ರೇಣುಕಾ ಯಲ್ಲಮ್ಮ ದೇವಸ್ಥಾನದ ಸಮೀಪ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಾಣಕ್ಕೆ ₹ 5 ಕೋಟಿ, ಉಗರಗೋಳ–ಯಲ್ಲಮ್ಮನಗುಡ್ಡ ರಸ್ತೆ ಮತ್ತು ಯಲ್ಲಮ್ಮನಗುಡ್ಡದಿಂದ ಸವದತ್ತಿವರೆಗೆ ಹೈಮಾಸ್ಟ್‌ ದೀಪ ಅಳವಡಿಕೆಗೆ ₹ 3 ಕೋಟಿ, ರಾಮದುರ್ಗ ತಾಲ್ಲೂಕಿನ ಶಬರಿಕೊಳ್ಳ ದೇವಸ್ಥಾನದ ಅಭಿವೃದ್ಧಿ ಮತ್ತು ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ ನಿರ್ಮಾಣಕ್ಕೆ ₹ 2 ಕೋಟಿ, ಗೊಡಚಿ ವೀರಭದ್ರೇಶ್ವರ ದೇವಸ್ಥಾನ ಬಳಿ ಯಾತ್ರಿ ನಿವಾಸ ಇರ್ಮಾಣಕ್ಕೆ ₹ 2 ಕೋಟಿ ಕೇಳಿದ್ದಾರೆ.

ADVERTISEMENT

ಗೋಕಾಕ ತಾಲ್ಲೂಕು ಚಿಕ್ಕನಂದಿಯಲ್ಲಿ ಸಿದ್ಧಾರೂಢ ದರ್ಶನ ಪೀಠ ಟ್ರಸ್ಟ್‌ ವತಿಯಿಂದ ಉದ್ದೇಶಿತ ಸಾಂಸ್ಕೃತಿಕ ಭವನ, ಸಮುದಾಯ ಭವನ, ಕನ್ನಡ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಸಂಸ್ಕೃತ ಪಾಠ ಶಾಲೆ, ಗುರುಕುಲ ಮೊದಲಾದವುಗಳ ನಿರ್ಮಾಣಕ್ಕೆ ₹ 2 ಕೋಟಿ, ಗೊಡಚಿನಮಲ್ಕಿ ಜಲಪಾತದ ಬಳಿ ಯಾತ್ರಿ ನಿವಾಸ ನಿರ್ಮಾಣಕ್ಕೆ ₹ 2 ಕೋಟಿ, ರಾಮದುರ್ಗ ತಾಲ್ಲೂಕಿನ ಕಲ್ಲೂರ ಸಿದ್ದೇಶ್ವರ ದೇವಸ್ಥಾನದ ಅಭಿವೃದ್ಧಿ ಹಾಗೂ ಯಾತ್ರಿ ನಿವಾಸ ನಿರ್ಮಾಣಕ್ಕೆ ₹ 2 ಕೋಟಿ, ಬೆಳಗಾವಿ ತಾಲ್ಲೂಕಿನ ಸುಳೇಭಾವಿ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಯಾತ್ರಿ ನಿವಾಸಕ್ಕೆ ₹ 2 ಕೋಟಿ, ಮೂಡಲಗಿ ತಾಲ್ಲೂಕಿನ ಕಲ್ಲೋಳಿಯ ಮಾರುತೇಶ್ವರ ದೇವಸ್ಥಾನ ಬಳಿ ಯಾತ್ರಿ ನಿವಾಸ ನಿರ್ಮಾಣಕ್ಕೆ ₹ 2 ಕೋಟಿ, ಬೆಳಗಾವಿ ನಗರದ ಕಪಿಲೇಶ್ವರ ದೇವಸ್ಥಾನಲ್ಲಿ ಮೂಲಸೌಲಭ್ಯಗಳ ಅಭಿವೃದ್ದಿಗೆ ₹ 2 ಕೋಟಿ ನೀಡುವಂತೆ ಮನವಿ ಮಾಡಿದ್ದಾರೆ.

ನಗರದಲ್ಲಿ 2 ರೈಲ್ವೆ ಮೇಲ್ಸೇತುವೆಗಳ ನಿರ್ಮಾಣಕ್ಕೆ ಒಟ್ಟು ₹ 27.94 ಕೋಟಿ ಅನುದಾನ ಕೇಳಿರುವುದಾಗಿ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.