ಮೂಡಲಗಿ: ಕುರಿಗಾಹಿಗಳಲ್ಲಿ ದೀಪಾವಳಿಯ ವಿಶೇಷ ಸಂಪ್ರದಾಯಗಳಿವೆ. ಪ್ರತಿ ವರ್ಷದಂತೆ ಈ ಬಾರಿಯ ತಮ್ಮ ಪಾಲಿನ ದೇವರಾದ ಕುರಿಗಳನ್ನೇ ಅಲಂಕಾರ ಮಾಡಿ ಹಬ್ಬ ಆಚರಿಸುತ್ತಿದ್ದಾರೆ.
ಪ್ರತಿ ದೀಪಾವಳಿಗೂ ಕುರಿಗಾರರು ಕುರಿ ಮತ್ತು ಟಗರುಗಳಿಗೆ ಬಣ್ಣವನ್ನು ಹಚ್ಚಿ, ಕೋಡುಗಳಿಗೆ ಮತ್ತು ಕಾಲುಗಳಿಗೆ ಬಣ್ಣದ ರಿಬ್ಬನ್‌ಗಳನ್ನು ಕಟ್ಟಿ ಶೃಂಗರಿಸುತ್ತಾರೆ. ಗಂಗಾಳವನ್ನು (ಹಿತ್ತಾಳೆ ತಾಟು) ಢಣಢಣ ಎಂದು ಬಾರಿಸುತ್ತ ‘ಹೋ.. ಹುರ್ರಾ...ಬ್ಯಾಬ್ಯಾ....’ ಎಂದು ಶಬ್ದ ಕುರಿಗಳನ್ನು ಜಿಂಕೆಗಳಂತೆ ಓಡಾಡಿಸಿ ಸಂಭ್ರಮಿಸುತ್ತಾರೆ. ನೂರಾರು ಕುರಿಗಳು ಅಲಂಕಾರಗೊಂಡು ಏಕಕಾಲಕ್ಕೆ ಓಡುವ ಕುರಿ ಹಿಂಡನ್ನು ನೋಡುವುದೇ ಚಂದ.
ಕುರಿಗಳ ಸಾಲಿನಲ್ಲಿ ಕೆಲವು ಕುರಿಗಳು ನೆಗೆದಾಗ, ಓಡಿದಾಗ ಅದು ಸಮೃದ್ಧಿ, ವಿಜಯದ ಸಂಕೇತ ಎಂದು ಕುರಿಗಾಹಿ ಜನರ ನಂಬಿಕೆ ಇದೆ. ಮೂಡಲಗಿ ತಾಲ್ಲೂಕಿನ ಕಲ್ಲೋಳಿ, ಹೊಸಟ್ಟಿ, ಹಳ್ಳೂರ, ರಾಜಾಪೂರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಈಗ ಇಂಥ ದೃಶ್ಯಗಳು ಸಾಕಷ್ಟು ಸಿಗುತ್ತವೆ.
ಬಾಗಲಕೋಟೆ, ವಿಜಯಪುರ, ಧಾರವಾಡ, ಗದಗ ಜಿಲ್ಲೆಗಳಲ್ಲಿಯೂ ಹಾಲುಮತ ಜನರಲ್ಲಿ ಕುರಿ ಓಡಿಸುವ ಹಬ್ಬವು ಹಾಸುಹೊಕ್ಕಿದೆ. ‘ಪಾಂಡವರು ಕೌರವರ ಮೇಲೆ ಯುದ್ಧ ಸಾರುವ ಮುಂಚೆ ವಿಜಯದ ಸಂಕೇತವಾಗಿಯೂ ಗ್ರಾಮೀಣ ಭಾಗದಲ್ಲಿ ಇದನ್ನು ಆಚರಿಸಿಕೊಂಡು ಬಂದಿರುವರು’ ಎಂದು ಸಂಶೋಧಕ ಮಹಾದೇವ ಜಿಡ್ಡಿಮನಿ ಅಭಿಪ್ರಾಯ ವ್ಯಕ್ತಪಡಿಸಿದರು.
ಪೂಜೆ, ನೈವೇದ್ಯ: ಕುರಿಗಳನ್ನು ಬೆದರಿಸಿ ಓಡಿಸುವ ಮುಂಚೆ ಹಾಲುಮತ ಕುರುಬ ಸಮಾಜದಲ್ಲಿ ಜೋಳದ ದಂಟು, ಕಬ್ಬು, ಅವರೆಗಿಡ ಸೇರಿಸಿ ಗುಡಿಸಲಿನಂತೆ ಕಟ್ಟಿ ಅದರಲ್ಲಿ ಕುರಿಗಳ ಹಿಕ್ಕಿಯಿಂದ ಸಿದ್ದಪಡಿಸಿದ ಪಾಂಡವರನ್ನು ಇಡುತ್ತಾರೆ. ತಮ್ಮ ಆರಾಧ್ಯ ದೈವವಾಗಿರುವ ಬೀರಪ್ಪ, ಲಕ್ಕವ್ವ ಮತ್ತು ಗ್ರಾಮ ದೇವರ ಮೂರ್ತಿಗಳನ್ನು ಇಟ್ಟು ಪೂಜೆ ಸಲ್ಲಿಸುವರು. ಪಕ್ಕದಲ್ಲಿ ಒಲೆ ನಿರ್ಮಿಸಿ ಮಣ್ಣಿನ ಪಾತ್ರೆಯಲ್ಲಿ ಕುರಿ ಹಾಲನ್ನು ಕುದಿಸುತ್ತಾರೆ. ಕುದಿಯುವ ಹಾಲು ಉಕ್ಕಿ ಯಾವ ದಿಕ್ಕಿನಲ್ಲಿ ಬೀಳುತ್ತದೆ ಅದೇ ದಿಕ್ಕಿಗೆ ಕುರಿಗಳನ್ನು ಓಡಿಸುವುದನ್ನು ನಿರ್ಧರಿಸುತ್ತಾರೆ.
‘ಕಲ್ಲೋಳಿಯಲ್ಲಿ ಬೀರಪ್ಪ, ಲಕ್ಕವ್ವ, ಹನಮಪ್ಪನ ಮೂರ್ತಿಗಳನ್ನು ದೀಪಾವಳಿಯ ಮುಂಚೆ ನದಿಯಲ್ಲಿ ತೊಳೆದುಕೊಂಡು ಮಡಿಯಲ್ಲಿ ಮತ್ತು ಕಾಲ್ನಡಿಗೆಯಲ್ಲಿ ಊರಿಗೆ ಬಂದು ಕುರಿಗಳ ದೊಡ್ಡಿಯಲ್ಲಿ ಪ್ರತಿಷ್ಠಾಪಿಸುವೆವು. ಇದು ನಮಗೆ ದೊಡ್ಡ ಹಬ್ಬ...’ ಎಂದು ಕಲ್ಲೋಳಿಯ ಲಕ್ಷ್ಮಣ ಮರಡಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಕುರಿಗಳ ಬೆದರಿಸಿ ಓಡಿಸುವುದು ಮುಗಿದ ನಂತರ ಹಾಲುಮತ ಸೇರಿದಂತೆ ಊರಿನ ಎಲ್ಲ ಸಮಾಜದ ಜನರು ಸಾಮೂಹಿಕವಾಗಿ ಊಟ ಮಾಡುವ ಮೂಲಕ ಪ್ರೀತಿ ಹಂಚಿಕೊಳ್ಳುತ್ತಾರೆ.
ರಮ್ಯವಾಗಿ ಕಾಣುವ ಕುರಿಗಳ ಸಾಲು ಪುರಾಣಗಳ ಕಥೆಗಳ ಹಿನ್ನೆಲೆ ಇದೆ ಈ ಆಚರಣೆಗೆ ಹಾಲುಮತ ಜನರ ದೊಡ್ಡ ಹಬ್ಬವೆಂದೇ ಪರಿಗಣಿತ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.