ADVERTISEMENT

ಮೂಡಲಗಿ: ಪ್ರಥಮ ಅಕ್ಷರ ಜಾತ್ರೆಗೆ ಸಜ್ಜು

ಕನ್ನಡ ಸಾಹಿತ್ಯ ಸಮ್ಮೇಳನ ನಾಳೆ

ಬಾಲಶೇಖರ ಬಂದಿ
Published 12 ಫೆಬ್ರುವರಿ 2021, 19:30 IST
Last Updated 12 ಫೆಬ್ರುವರಿ 2021, 19:30 IST
ಮೂಡಲಗಿಯ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧಗೊಂಡಿರುವ ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ವೇದಿಕೆ
ಮೂಡಲಗಿಯ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧಗೊಂಡಿರುವ ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ವೇದಿಕೆ   

ಮೂಡಲಗಿ: ತಾಲ್ಲೂಕು ರಚನೆಯಾದ ನಂತರ ಪ್ರಥಮ ಸಾಹಿತ್ಯ ಸಮ್ಮೇಳನಕ್ಕೆ ಮೂಡಲಗಿಯು ಮದುವಣಗಿತ್ತಿಯಂತೆ ಸಿಂಗಾರಗೊಂಡು ಕನ್ನಡ ಮನಸ್ಸುಗಳನ್ನು ಸೆಳೆಯುತ್ತಿದೆ.

ಇಲ್ಲಿನ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕವಿ ಪಾರ್ಶ್ವಪಂಡಿತ ಪ್ರಧಾನ ವೇದಿಕೆ, ಪಾರಿಜಾತ ಪಿತಾಮಹ ಕುಲಗೋಡ ತಮ್ಮಣ್ಣ ಸಭಾಮಂಟಪ, ಸಂಗೀತಗಾರ ಹೂಗಾರ ಮಲಕಪ್ಪ ಮತ್ತು ಸಾಹಿತಿ ಹ.ಶಿ. ಭೈರನಟ್ಟಿ ಮಹಾದ್ವಾರಗಳು ವೈಭವ ಸಾರುತ್ತಿವೆ. ಪ್ರಮುಖ ರಸ್ತೆಗಳಲ್ಲಿ ಕನ್ನಡ ಧ್ವಜಗಳು, ಕಟೌಟ್‌ಗಳಿಂದ ಕಣ್ಮನ ಸೆಳೆಯುತ್ತಿವೆ.

ಗೋಕಾಕ ತಾಲ್ಲೂಕಿನಲ್ಲಿದ್ದ ಮೂಡಲಗಿಯು 2017ರಲ್ಲಿ 48 ಗ್ರಾಮಗಳೊಂದಿಗೆ ಪ್ರತ್ಯೇಕ ತಾಲ್ಲೂಕಾಯಿತು. ಭಾವೈಕ್ಯಕ್ಕೆ ಹೆಸರಾದ ಇಲ್ಲಿಯ ಶಿವಬೋಧರಂಗ ಮಠವು ಭಾಷೆ, ಸಂಸ್ಕೃತಿಯ ಬಾಂಧವ್ಯ ಬೆಸೆದಿದೆ. 36 ಎಕರೆಯಷ್ಟು ವಿಸ್ತಾರದಲ್ಲಿರುವ ಜಾನುವಾರು ಪೇಟೆ ದಕ್ಷಿಣ ಭಾರತದಲ್ಲಿ ಪ್ರಸಿದ್ಧಿ ಪಡೆದಿದೆ. ರೇವಣಸಿದ್ಧೇಶ್ವರ ಮಠ, ಕಲ್ಲೋಳಿಯಲ್ಲಿಯ ಮಾರುತಿ ದೇವಸ್ಥಾನ, 8ನೇ ಶತಮಾನದ ಕಲ್ಮೇಶ್ವರ ದೇವಾಲಯ, 10ನೇ ಶತಮಾನದ ರಾಮಲಿಂಗೇಶ್ವರ ದೇವಾಲಯ, ಪಾರ್ಶ್ವನಾಥ ಜಿನಾಲಯ, ಕುಲಿಗೋಡದ ಬಲಭೀಮ ದೇವಸ್ಥಾನ, ಅರಭಾವಿಯ ದುರದುಂಡೇಶ್ವರ ಮಠ, ಸುಣಧೋಳಿಯ ಜಡಿಸಿದ್ಧೇಶ್ವರ ಮಠ, ಯಾದವಾಡದ ಪುರಾತನ ದೇವಾಲಯಗಳಿಂದ ತಾಲ್ಲೂಕು ತಪೋಭೂಮಿಯಾಗಿದೆ. ಕೃಷಿ ಕಾಯಕದ ಜನರು ವ್ಯಾಪಾರದಲ್ಲೂ ಮುಂದು. ಪಟ್ಟಣದಲ್ಲಿ 60ಕ್ಕೂ ಅಧಿಕ ಸಹಕಾರಿ ಸಂಸ್ಥೆಗಳಿದ್ದು, ಬೆಳಗಾವಿ ಜಿಲ್ಲೆಯಲ್ಲೇ ಹೆಚ್ಚು ಸಹಕಾರಿ ಸಂಸ್ಥೆಗಳನ್ನು ಹೊಂದಿರುವ ಹೆಗ್ಗಳಿಕೆ ಗಳಿಸಿದೆ.

ADVERTISEMENT

ಕಲೆಗಳ ಬೀಡಾದ ಇಲ್ಲಿ ನಡೆಯಲಿರುವ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನವು ತಾಲ್ಲೂಕಿನ ಸಾಂಸ್ಕೃತಿಕ ಬೆಳವಣಿಗೆಗೆ ದಿಕ್ಸೂಚಿಯಾಗಲಿದೆ.

‘ಸಮ್ಮೇಳನದ ಯಶಸ್ಸಿಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ವಿಶೇಷ ಆಸಕ್ತಿ ವಹಿಸಿದ್ದಾರೆ. ಸಮ್ಮೇಳನವು ಅದ್ಧೂರಿಯಾಗಿ ನಡೆಯಲಿದೆ’ ಎಂದು ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಸಿದ್ರಾಮ ದ್ಯಾಗಾನಟ್ಟಿ ತಿಳಿಸಿದರು.

ಸಾಹಿತ್ಯಾಸಕ್ತರಿಗೆ ಹೋಳಿಗೆ, ತುಪ್ಪ, ಚಪಾತಿ, ಸಜ್ಜಿರೊಟ್ಟಿ, ಶೇಂಗಾ ಚಟ್ನಿ, ಬದನೆಕಾಯಿ, ಅನ್ನ, ಕಟ್ಟಿನ ಸಾರು ಸೇರಿ 16 ಖಾದ್ಯಗಳನ್ನು ಬಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

ಸೃಜನಶೀಲ ಮಕ್ಕಳ ಸಾಹಿತಿ
ಸಮ್ಮೇಳನಾಧ್ಯಕ್ಷ ಪ್ರೊ.ಸಂಗಮೇಶ ಗುಜಗೊಂಡ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರು. ವಿಜಯಪುರದ ಜಿಲ್ಲೆ ಮನಗೂಳಿ ಗ್ರಾಮದ ಅವರು, 1987ರಲ್ಲಿ ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಭೂಗೋಳಶಾಸ್ತ್ರ ಪ್ರಾಧ್ಯಾಪಕರಾಗಿ ವೃತ್ತಿಯೊಂದಿಗೆ ಸಾಹಿತ್ಯ, ಚಿಂತನ, ನಾಡು–ನುಡಿ ರಕ್ಷಣೆಯ ಸಂಘಟನೆಗಳ ಮೂಲಕ ಗುರುತಿಸಿಕೊಂಡಿದ್ದಾರೆ.

ಹಲವು ಕೃತಿಗಳನ್ನು ರಚಿಸಿ ಕೊಡುಗೆ ನೀಡಿದ್ದಾರೆ. ಬಾಲವಿಕಾಸ ಅಕಾಡೆಮಿಯ ‘ಮಕ್ಕಳ ಚಂದಿರ’ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.